ಗಣೇಶ ಉತ್ಸವ ಮಂಡಳಿ ಮೇಲೆ ಖಾಕಿ ದಬ್ಬಾಳಿಕೆ

| Published : Sep 04 2025, 01:01 AM IST

ಗಣೇಶ ಉತ್ಸವ ಮಂಡಳಿ ಮೇಲೆ ಖಾಕಿ ದಬ್ಬಾಳಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಗಣೇಶ ಉತ್ಸವ ಮಂಡಳಿಗಳ ಮೇಲೆ ಪೊಲೀಸರು ದಬ್ಬಾಳಿಕೆ ಹೇರುತ್ತಿದ್ದಾರೆ. ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಗೆ ಹೊಸ ಷರತ್ತು ವಿಧಿಸಿದ್ದಾರೆ ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ನಗರದ ಗಣೇಶ ಉತ್ಸವ ಮಂಡಳಿಗಳ ಮೇಲೆ ಪೊಲೀಸರು ದಬ್ಬಾಳಿಕೆ ಹೇರುತ್ತಿದ್ದಾರೆ. ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಗೆ ಹೊಸ ಷರತ್ತು ವಿಧಿಸಿದ್ದಾರೆ ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಲಿ ಬಾಂಡ್‌ ಪೇಪರ್‌ ಮೇಲೆ ಗಣೇಶ ಉತ್ಸವ ಮಂಡಳಿಗಳಿಂದ ಸಹಿ ಹಾಕಿಸಿಕೊಂಡು ಅಂಜಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಗಣೇಶ ಮೂರ್ತಿಗಳ ವಿಸರ್ಜನಾ ಮಾರ್ಗವನ್ನು ಬದಲಾವಣೆ ಮಾಡಲು ಪೊಲೀಸರು ಹೊರಟಿದ್ದಾರೆ. ಪಟಾಕಿ ಹಾರಿಸಿದರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ಅವರು ದೂರಿದರು.ನಾವು ಗಣಪತಿ ಮಂಡಳಿಗಳ ಸಭೆ ಮಾಡಿದ ವೇಳೆ ಇವೆಲ್ಲಾ ವಿಚಾರವನ್ನು ಗಣೇಶ ಮಂಡಳಿಗಳ ಪದಾಧಿಕಾರಿಗಳು ತಿಳಿಸಿದರು. ಕೆಲವು ಠಾಣೆಗಳಲ್ಲಿ ಖಾಲಿ ಬಾಂಡ್ ಪೇಪರ್ ಮೇಲೆ ಸಹಿ ಹಾಕಿಸಿಕೊಂಡು ಅಂಜಿಕೆ ಹಾಕುವ ಕೆಲಸ ಮಾಡಿದ್ದಾರೆ. ಇವೆಲ್ಲ ವಿಷಯವನ್ನು ನಾನು ಪೊಲೀಸ್ ಕಮೀಷನರ್ ಅವರಿಗೆ ಗಮನಕ್ಕೆ ತಂದಿದ್ದೇನೆ. ಗಣೇಶ ವಿಸರ್ಜನೆ ವೇಳೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಹೇಳಿದ್ದೇನೆ ಎಂದರು.ಹೊರಗಡೆಯಿಂದ ಪೊಲೀಸರು ಬಂದಿರುತ್ತಾರೆ. ಸ್ಥಳೀಯ ಪೊಲೀಸರು ಮಂಡಳಿಗಳ ಜೊತೆ ಸಹಕಾರ ನೀಡುತ್ತಾರೆ. ಆದರೆ ಹೊರಗಡೆ ಬಂದಿರುವ ಪೊಲೀಸರಿಗೆ ಗೊತ್ತಾಗದೆ ವಾದ ವಿವಾದಕ್ಕೆ ದಾರಿ ಮಾಡಿಕೊಡಬಹುದು. ಹಾಗಾಗಿ ಗಲಭೆಗಳು ಆಗಬಾರದೆಂದು ಕಮೀಷನರ್ ಅವರಿಗೆ ಹೇಳಲಾಗಿದೆ. ಇಷ್ಟು ವರ್ಷದಿಂದ ಯಾವುದೇ ತೊಂದರೆಯಾಗಿಲ್ಲ. ಈಗ ನೀವು ಹೊಸ ಹೊಸ ಷರತ್ತುಗಳನ್ನು ಹಾಕುವ ಮೂಲಕ ಮಂಡಳಿಯವರಿಗೆ ಅನಾನುಕೂಲ ಮಾಡುತ್ತಿದ್ದೀರಿ. ಎಲ್ಲ ಮಂಡಳಿಯವರು ಹೊಸ ಹೊಸ ರೂಲ್ಸ್ ಕಂಡಿಷನ್ಸ್‌ಗೆ ವಿರೋಧ ಮಾಡಿದ್ದಾರೆ ಎಂದು ತಿಳಿಸಿದರು.ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ಆಯುಕ್ತರು ಹೊಸಬರಿದ್ದಾರೆ. ಡಿಸಿ ಮತ್ತು ಪೊಲೀಸ್‌ ಆಯುಕ್ತರನ್ನು ದಾರಿ ತಪ್ಪಿಸಲು ಬೆಳಗಾವಿಯಲ್ಲಿ ಬಹಳ ಜನರಿದ್ದಾರೆ. ಇನ್ನು ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ವೀಕ್ಷಣೆ ಮಾಡಲು ಆಗಮಿಸುವ ಜನರಿಗೆ ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಅದಕ್ಕೆ ಮಹಾನಗರ ಪಾಲಿಕೆಯಿಂದ ಯಾವುದೇ ವಿರೋಧವಿಲ್ಲ. ಆದರೆ, ಅದಕ್ಕೆ ಡಿಸಿ ಅವರೇ ಹಣಕಾಸಿನ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.