ನಕಲಿ ವೈದ್ಯ ಲಾಡಖಾನ್‌ ಜಮೀನಿನಲ್ಲಿ ಖಾಕಿ ಶೋಧನೆ

| Published : Jun 16 2024, 01:46 AM IST

ನಕಲಿ ವೈದ್ಯ ಲಾಡಖಾನ್‌ ಜಮೀನಿನಲ್ಲಿ ಖಾಕಿ ಶೋಧನೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು ಕಾನೂನು ಬಾಹಿರವಾಗಿ ಗರ್ಭಪಾತ ನಡೆಸುತ್ತಿದ್ದ ನಕಲಿ ವೈದ್ಯ ಅಬ್ದುಲಗಫಾರ ಲಾಡಖಾನ್‌ ವಿರುದ್ಧ ಕಿತ್ತೂರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಶನಿವಾರ ಕಾರ್ಯಪ್ರವೃತ್ತರಾದ ಪೊಲೀಸರು ಆತನ ಸಹಚರರನ್ನು ಲಾಡಖಾನ್‌ಗೆ ಸಂಬಂಧಪಟ್ಟ ಮತ್ತೊಂದು ಜಮೀನಿ(ಮಾಲೀಕತ್ವ ಅಲ್ಲದ)ಗೆ ಕರೆದೊಯ್ದು ಸ್ಥಳ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಕಾನೂನು ಬಾಹಿರವಾಗಿ ಗರ್ಭಪಾತ ನಡೆಸುತ್ತಿದ್ದ ನಕಲಿ ವೈದ್ಯ ಅಬ್ದುಲಗಫಾರ ಲಾಡಖಾನ್‌ ವಿರುದ್ಧ ಕಿತ್ತೂರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಶನಿವಾರ ಕಾರ್ಯಪ್ರವೃತ್ತರಾದ ಪೊಲೀಸರು ಆತನ ಸಹಚರರನ್ನು ಲಾಡಖಾನ್‌ಗೆ ಸಂಬಂಧಪಟ್ಟ ಮತ್ತೊಂದು ಜಮೀನಿ(ಮಾಲೀಕತ್ವ ಅಲ್ಲದ)ಗೆ ಕರೆದೊಯ್ದು ಸ್ಥಳ ಪರಿಶೀಲನೆ ನಡೆಸಿದರು.

ಈ ವೇಳೆ ಕೆಲವು ಗುಪ್ತ ಮಾಹಿತಿಗಳು ಬೆಳಕಿಗೆ ಬಂದಿವೆ ಎಂಬ ಮಾಹಿತಿ ಸಿಕ್ಕಿದೆ. ಹೀಗಾಗಿ, ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದು, ಪೂರ್ಣ ತನಿಖೆಯ ಸತ್ಯಾಸತ್ಯತೆ ಹೊರಬರಲಿದೆ ಎನ್ನಲಾಗಿದೆ. ಅನಧಿಕೃತ ವೈದ್ಯಕೀಯ ವೃತ್ತಿ ಹಾಗೂ ಗರ್ಭಪಾತ ನಡೆಸುತ್ತಿದ್ದ ಆರೋಪದಡಿ ಕಿತ್ತೂರು ಠಾಣೆಯಲ್ಲಿ ಬುಧವಾರ ರಾತ್ರಿ ತಾಲೂಕು ವೈದ್ಯಾಧಿಕಾರಿ ಎಸ್.ಎಸ್.ಶಿದ್ದಣ್ಣವರ ಲಾಡಖಾನ್‌ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ಚುರುಕುಗೊಂಡಿದೆ.

ಬೈಲಹೊಂಗಲ ಡಿವೈಎಸ್ಪಿ ಹಾಗೂ ಕಿತ್ತೂರು ಪೊಲೀಸರ ತಂಡ ಗುರುವಾರ ಲಾಡಖಾನ ಮಾಲೀಕತ್ವದ ಜಮೀನಿಗೆ ಭೇಟಿ ನೀಡಿ ಪರೀಶೀಲನೆ ನಡೆಸಿದೆ. ಸಂಬಂಧಪಟ್ಟ (ಮಾಲೀಕತ್ವ ಅಲ್ಲದ) ಇನ್ನೊಂದು ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಲ್ಲಿಯೂ ಚಿಕಿತ್ಸೆಗೆ ಬಳಸಿದ್ದ ವೈದ್ಯಕೀಯ ಪರಿಕರಗಳು ದೊರೆತಿವೆ.

ಲಾಡಖಾನ್‌ಗೆ ಎರಡು ಜಮೀನು:

ಲಾಡಖಾನ್‌ಗೆ ಸಂಬಂಧಿಸಿದ ೨ ಜಮೀನಗಳಿವೆ. ತಿಗಡೊಳ್ಳಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಒಂದು ಜಮೀನು ಬಲ ಭಾಗದಲ್ಲಿದ್ದರೆ, ಮತ್ತೊಂದು ಈತನಿಗೆ ಸಂಬಂಧಿಸಿದ (ಮಾಲೀಕತ್ವ ಅಲ್ಲದ) ಜಮೀನು ಎಡಭಾಗದಲ್ಲಿದೆ. ಈ ಕುರಿತು ಸ್ಥಳೀಯರು ಕಿತ್ತೂರು ಪೊಲೀಸರಿಗೆ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಎರಡು ಜಮೀನುಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.