ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಕೊಲೆ ಆರೋಪಿಗಳನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಹಂತಕರು ದಾಳಿ ನಡೆಸಿದಾಗ ಆತ್ಮರಕ್ಷಣೆಗಾಗಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ದುಷ್ಕರ್ಮಿಗಳು ಕಾಲಿಗೆ ಗುಂಡೇಟು ಬಿದ್ದು ಗಾಯಗೊಂಡಿರುವ ಘಟನೆ ನಗರದ ಹೊರವಲಯದ ಇಟ್ಟಂಗಿಹಾಳ ಗ್ರಾಮದ ಬಳಿ ಮಂಗಳವಾರ ಬೆಳಗಿನ ಜಾವ ನಡೆದಿದೆ. ಜತೆಗೆ ಘಟನೆಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿಯೂ ಗಾಯಗೊಂಡಿದ್ದಾರೆ.ಆಕಾಶ ಕಲ್ಲವ್ವಗೋಳ ಹಾಗೂ ಸುದೀಪ ಅಲಿಯಾಸ್ ಸುಭಾಷ ಬಗಲಿ ಗಾಯಗೊಂಡ ಆರೋಪಿಗಳು. ಆರೋಪಿಗಳು ಸೇರಿದಂತೆ ಗಾಯಗೊಂಡ ಮೂವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.
ನಗರದ ಎಸ್‌ಎಸ್ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ಕಂಟ್ರಿ ಪಿಸ್ತೂಲ್‌ನಿಂದ ಬೆನ್ನಿಗೆ ಗುಂಡು ಹಾರಿಸಿ ಮಾರಕಾಸ್ತ್ರಗಳಿಂದ ಹೊಡೆದು ಸುಶೀಲ ಕಾಳೆ(39) ಎಂಬಾತನನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಆರೋಪಿಗಳು ಬೈಕ್‌ನಲ್ಲಿ ಹೊರಟಾಗ ಅವರನ್ನು ಬಂಧಿಸಲು ಗಾಂಧಿಚೌಕ್ ಠಾಣೆ ಪೊಲೀಸರು ತೆರಳಿದ್ದರು. ಆಗ ಪೊಲೀಸರು ದುಷ್ಕರ್ಮಿಗಳನ್ನು ಬೆನ್ನತ್ತಿದ್ದ ವೇಳೆ ನಗರದ ಹೊರವಲಯದ ಇಟ್ಟಂಗಿಹಾಳ ಗ್ರಾಮದ ಬಳಿ ಆರೋಪಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೆ ಕಂಟ್ರಿ ಪಿಸ್ತೂಲ್‌ನಿಂದ ದಾಳಿ ಮಾಡಿದ್ದಾರೆ. ಆಗ ಆತ್ಮರಕ್ಷಣೆಗಾಗಿ ಸಿಪಿಐ ಪ್ರದೀಪ ತಳಕೇರಿ ಅವರು ಆರೋಪಿಗಳಾದ ಆಕಾಶ ಹಾಗೂ ಸುದೀಪ ಅಲಿಯಾಸ್ ಸುಭಾಷ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ರಾಜು ನಾಯಕ ಎಂಬ ಓರ್ವ ಪೊಲೀಸ್ ಸಿಬ್ಬಂದಿ ಸಹ ಗಾಯಗೊಂಡಿದ್ದು, ಮೂವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಒಂದು ಬೈಕ್, ಒಂದು ಕಂಟ್ರಿಮೇಡ್ ಪಿಸ್ತೂಲ್ ಹಾಗೂ ಮೂರು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.ರೌಡಿಶೀಟರ್ ಆಗಿದ್ದ ಸುಶೀಲ:
ಸೋಮವಾರ ಮಧ್ಯಾಹ್ನ ಕೊಲೆಯಾದ ಸುಶೀಲ ಕಾಳೆ ರೌಡಿಶೀಟರ್ ಎನ್ನಲಾಗಿದೆ. ನಗರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಸ್ಟಾಫ್‌ನರ್ಸ್ ಆಗಿ ಕೆಲಸ ಮಾಡುತ್ತಿದ್ದ. ಈ ಹಿಂದೆ ಭೀಮಾತೀರದ ಹಂತಕ ಬಾಗಪ್ಪ ಹರಿಜನನ ಸಹಚರನಾಗಿದ್ದ ಎನ್ನಲಾಗಿದೆ. ಬಳಿಕ ಬಾಗಪ್ಪ ಹರಿಜನನಿಂದ ದೂರ ಉಳಿದು ಫೈನಾನ್ಸ್ ಕೂಡ ನಡೆಸುತ್ತಿದ್ದ. ಕಳೆದ 2014 ಆಗಸ್ಟ್ 23ರಂದು ನಗರದಲ್ಲಿ ನಡೆದಿದ್ದ ಬಸ್ ಕಂಡಕ್ಟರ್ ಸುರೇಶ ಲಾಳಸಂಗಿ ಕೊಲೆ ಪ್ರಕರಣದಲ್ಲಿಯೂ ಈತ ಪ್ರಮುಖ ಆರೋಪಿಯಾಗಿದ್ದ. ಶಸ್ತ್ರಾಸ್ತ ಕಾಯ್ದೆ ಅಡಿಯಲ್ಲಿ ಈತನ ಮೇಲೆ ಹಲವು ಪ್ರಕರಣಗಳಿದ್ದವು. ಅಲ್ಲದೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕೇಸ್‌ನಲ್ಲಿ ಪರಾರಿಯಾಗಿದ್ದ ಆರೋಪಿಗಳ ಜೊತೆಗೆ ನಂಟು ಹೊಂದಿದ್ದನೆಂಬ ಸಂಶಯದ ಆಧಾರದ ಮೇರೆಗೆ ಪೊಲೀಸರು ಸುಶೀಲ ಕಾಳೆಯನ್ನು ವಿಚಾರಣೆಗೆ ಒಳಪಡಿಸಿದ್ದರು. ಮಹಾರಾಷ್ಟ್ರದ ಸೋಲಾಪೂರದಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ನಡೆಸುತ್ತಿದ್ದ ಎನ್ನಲಾಗಿದೆ.ನಗರದಲ್ಲಿ ಸೋಮವಾರ ನಡೆದಿದ್ದ ಸುಶೀಲ ಕಾಳೆ ಎಂಬಾತನ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಲೆಂದು ಹೋಗಿದ್ದ ವೇಳೆ ಪೊಲೀಸರ ಮೇಲೆ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ನಮ್ಮ ಪೊಲೀಸರು ಸಹ ಗುಂಡು ಹಾರಿಸಿದ್ದಾರೆ. ಇಬ್ಬರು ಆರೋಪಿಗಳ ಕಾಲಿಗೆ ಗುಂಡು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ವೇಳೆ ಆರೋಪಿಗಳ ಬಳಿಯಿದ್ದ ಒಂದು ಕಂಟ್ರಿ ಪಿಸ್ತೂಲ್ ಹಾಗೂ ನಂಬರ್ ಪ್ಲೇಟ್ ಇಲ್ಲದ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.ಬೆಳಗ್ಗೆ 10.30ಕ್ಕೆ ಬ್ಯಾಂಕ್‌ಗೆ ಎಂದು ಹೋಗಿದ್ದ ನನ್ನ ಮಗನ ಮೇಲೆ ದಾಳಿ ನಡೆಸಿ ಕೊಲೆ ಮಾಡಲಾಗಿದೆ. ಯಾರಮೇಲು ನಮಗೆ ಸಂಶಯವೇ ಇಲ್ಲ. ಆದರೂ ಯಾಕೆ ಕೊಲೆ ಮಾಡಿದ್ದಾರೋ ಮಾಹಿತಿಯೇ ನಮಗೆ ಸಿಕ್ಕಿಲ್ಲ. ನನ್ನ ಮಗ ಜಗಳಗಂಟನೇ ಅಲ್ಲ. ಈತನ ಜೊತೆಗಾರರೆಲ್ಲರೂ ಒಳ್ಳೆಯವರೇ ಇದ್ದರು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಬೇಕು ಎಂದು ವಿನಂತಿಸುತ್ತೇನೆ ಎಂದು ಕೊಲೆಯಾದ ಸುಶೀಲ ತಾಯಿ ಸುಚಿತ್ರಾ ಕಾಳೆ ತಿಳಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))