ಸಾರಾಂಶ
ಹುಬ್ಬಳ್ಳಿ: ಭಾರತದ ಎಂಟು ಜನರ ವಿಶೇಷ ತಂಡವು ಶ್ರೀಲಂಕಾದಿಂದ ಭಾರತದ ಧನುಷ್ಕೋಡಿವರೆಗೂ (ರಾಮಸೇತು) 28 ಕಿಮೀ ಕಡಲಲ್ಲಿ ಈಜುವ ಮೂಲಕ ಸಾಧನೆ ಮಾಡಿದ್ದಾರೆ. ಈ ತಂಡದಲ್ಲಿ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮುರುಗೇಶ ಚೆನ್ನಣ್ಣವರ ಹಾಗೂ ಹುಬ್ಬಳ್ಳಿ ಕೆಎಂಸಿಆರ್‌ಐನಲ್ಲಿ ಎಂಬಿಬಿಎಸ್ ಓದುತ್ತಿರುವ ಅಮನ್ ಶಾನಭಾಗ ಕೂಡ ಇರುವುದು ವಿಶೇಷ.
28 ಕಿಮೀ ಈಜನ್ನು ಎಂಟು ಜನ ಸೇರಿಕೊಂಡು ರಿಲೇ ಮಾದರಿಯಲ್ಲಿ ಈಜಿದ್ದಾರೆ. ಶುಕ್ರವಾರ ಬೆಳಿಗ್ಗೆ 5.50ಕ್ಕೆ ಪ್ರಾರಂಭವಾದ ಈಜು, ಮಧ್ಯಾಹ್ನ 2.20ಕ್ಕೆ ಪೂರ್ಣಗೊಳಿಸಿದೆ. ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾದ (ಎಸ್‌ಎಫ್‌ಐ) ಉಸ್ತುವಾರಿಯಲ್ಲಿ ಈ ಈಜು ನಡೆಯಿತು. ಈಜಿನ ಸಮಯ ಹಾಗೂ ಸ್ಪೀಡ್ ಪರಿಶೀಲಿಸಲು ಎಸ್‌ಎಫ್‌ಐನಿಂದ ವಿಜಯಕುಮಾರ ಎಂಬುವವರು ಬಂದಿದ್ದರು. ಈ ತಂಡವೂ 28 ಕಿಮೀ ಅಂತರವನ್ನು ಬರೋಬ್ಬರಿ 8.30 ಗಂಟೆಯಲ್ಲಿ ಪೂರ್ಣಗೊಳಿಸಿದೆ ಎಂದು ವಿಜಯಕುಮಾರ ಸ್ಪಷ್ಟಪಡಿಸಿದ್ದಾರೆ.ಈ ಎಂಟು ಜನರ ತಂಡದಲ್ಲಿ ಉತ್ತರ ಪ್ರದೇಶದ ಐಎಎಸ್ ಅಧಿಕಾರಿ ಅಭಿನವ ಗೋಪಾಲ, ಹರಿಯಾಣದ ಐಎಎಸ್ ಅಧಿಕಾರಿ ದೀಪಕ ಕಾರ್ವಾ, ಪಶ್ಚಿಮ ಬಂಗಾಲದ ಅಂಗವಿಕಲ ಈಜು ಪಟು ಪ್ರಶಾಂತ ಕರಮಾಕರ, ರೈಲ್ವೆ ಇಲಾಖೆಯ ಟಿಕೆಟ್ ತಪಾಸಣೆ ಅಧಿಕಾರಿ (ಟಿಟಿ) ರಾಬಿನ್, ಅಂಗವಿಕಲ ಈಜುಪಟು ರಾಜವೀರ, ಹರಿಯಾಣದ 17 ವರ್ಷದ ಇಶಾಂತ ಇವರೆಲ್ಲರೂ ಸೇರಿಕೊಂಡು ಈ ಸಾಧನೆ ಮಾಡಿದ್ದಾರೆ.
ಹಿಂದೂ ಮಹಾಸಾಗರ ಹಾಗೂ ಬಂಗಾಲಕೊಲ್ಲಿಯ ಸಮುದ್ರದಲ್ಲಿ ಪ್ರತಿಕೂಲ ವಾತಾವರಣ ಹಾಗೂ ಭಾರೀ ಅಲೆಗಳ ನಡುವೆ 28 ಕಿಮೀ ದೂರದ ರಾಮಸೇತುವನ್ನು 8.30 ಗಂಟೆಯಲ್ಲಿ ಈಜಿ ಸೈ ಎನಿಸಿಕೊಂಡಿದ್ದಾರೆ. ಈ ಈಜಿನ ಪೂರ್ವ ತಯಾರಿ ಮಾಡಿ ನಿಗದಿ ಪಡಿಸಿದ್ದೇ ಅಂಗಿವಿಕಲ ಈಜುಪಟು ಪ್ರಶಾಂತ ಕರಮಾಕರ ಎನ್ನುವುದು ವಿಶೇಷ.ಈ ಮೊದಲು ಚೆನ್ನಣ್ಣವರ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕ್ಲಿಂಗ್ ಮಾಡಿದ್ದರು. ಇದೀಗ 28 ಕಿಮೀ ಕಡಲಿಜಿದ ತಂಡದಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ. ರಾಮಸೇತು ಈಜಲು ಸ್ಫೂರ್ತಿಯಾಗಿ ಚೆನ್ನಣ್ಣವರ ಪತ್ನಿ ಶ್ವೇತಾ ಅವರು ಜೊತೆಯಲ್ಲೇ ಬೋಟಿನಲ್ಲಿ ಶ್ರೀಲಂಕಾಕ್ಕೆ ತೆರಳಿದ್ದರು. ಪೊಲೀಸ್ ಇಲಾಖೆಗೆ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಅಧಿಕಾರಿ ವರ್ಗ ಶ್ಲಾಘಿಸಿದೆ.
ಮುಂದೆ 36 ಕಿಮೀ: ಚೆನ್ನಣ್ಣವರ ಸೇರಿದಂತೆ ಎಂಟು ಜನರ ತಂಡ ಜೂನ್ ತಿಂಗಳಲ್ಲಿ ವಿಶ್ವದ ಅತಿ ಕಷ್ಟಕರವಾದ ಇಂಗ್ಲಿಷ್ ಕಾಲುವೆ (ಇಂಗ್ಲೆಂಡ್ ಮತ್ತು ಫ್ರಾನ್ಸ್ ಮಧ್ಯೆ 36 ಕಿಮೀ)ಯನ್ನು ಈಜಲು ಸಿದ್ಧತೆ ನಡೆಸಿದ್ದಾರೆ. ಈ ಎಂಟು ಜನರು ಅಲ್ಲಿ ಭಾಗವಹಿಸಲಿದ್ದಾರೆ. ಇವರೊಂದಿಗೆ ಇನ್ನು ನಾಲ್ಕು ಜನ ಸೇರಿಕೊಳ್ಳಲಿದ್ದಾರೆ. ಎಲ್ಲಿ ಆರಾರು ಜನರ ಎರಡು ತಂಡಗಳಲ್ಲಿ ಈಜಲಿದ್ದಾರೆ.;Resize=(128,128))
;Resize=(128,128))