ಮಾನವ ಕಳ್ಳ ಸಾಗಣೆ ವಿರುದ್ಧ ಖಾಕಿ ಸಮರ: ದಯಾನಂದ್‌

| Published : Jan 10 2024, 01:45 AM IST

ಸಾರಾಂಶ

ಮಾನವ ಕಳ್ಳ ಸಾಗಣೆ ವಿರುದ್ಧ ಖಾಕಿ ಸಮರ: ದಯಾನಂದ್‌, ಮಂಗಳವಾರ ಸುದ್ದಿಗೋಷ್ಠಿ, ಸ್ಪಾಗಳ ತಾಪಸಣೆ, ಪೊಲೀಸರ ಶಾಮೀಲು ವಿಚಾರಣೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ವೇಶ್ಯಾವಾಟಿಕೆ ಅಥವಾ ಮಾನವ ಕಳ್ಳ ಸಾಗಾಣಿಕೆ ಎನ್ನುವುದು ಭಯೋತ್ಪಾದಕ ಚಟುವಟಿಕೆಗಳಿಗಿಂತಲೂ ಹೀನ ಕೃತ್ಯವಾಗಿದ್ದು, ಇದರ ವಿರುದ್ಧ ನಗರ ಪೊಲೀಸರು ಸಮರವನ್ನೇ ಸಾರಿದ್ದೇವೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ಗುಡುಗಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಾನವ ಕಳ್ಳ ಸಾಗಾಣಿಕೆ ಅಥವಾ ವೇಶ್ಯಾವಾಟಿಕೆ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದರು.

ಭಯೋತ್ಪಾದಕ ಕೃತ್ಯವು ಒಂದು ಸಲ ನಡೆಯುವ ಕೃತ್ಯವಾಗಿದ್ದು, ಅದರಲ್ಲಿ ಸಾಕಷ್ಟು ಸಾವು ನೋವು ಸಂಭವಿಸುತ್ತದೆ. ಆದರೆ ವೇಶ್ಯಾವಾಟಿಕೆ ಅಥವಾ ಮಾನವ ಕಳ್ಳ ಸಾಗಾಣಿಕೆ ಜಾಲದಲ್ಲಿ ಸಿಲುಕಿದ ಸಂತ್ರಸ್ತರು ಜೀವನ ಪರ್ಯಂತ ಮಾನಸಿಕ ಹಾಗೂ ದೈಹಿಕ ಆಘಾತ ಅನುಭವಿಸಿ ಜರ್ಝಿತರಾಗುತ್ತಾರೆ. ಆತ್ಮಗೌರವ ಧಕ್ಕೆ ಮಾಡುವ ಕೃತ್ಯವಾಗಿದೆ. ಹೀಗಾಗಿ ಈ ಕೃತ್ಯವು ಭಯೋತ್ಪಾದಕ ಚಟುವಟಿಕೆಗಳಿಗಿಂತಲೂ ಹೀನಾಯವಾಗಿದೆ ಎಂದು ಕಟುವಾಗಿ ನುಡಿದರು.

ಈ ಹಿನ್ನೆಲೆಯಲ್ಲಿ ಸಿಸಿಬಿ ಹಾಗೂ ಪೂರ್ವ ವಿಭಾಗದ ಪೊಲೀಸರು ಕೆಲವೊಂದು ವೇಶ್ಯಾವಾಟಿಕೆ ಜಾಲಗಳನ್ನು ಪತ್ತೆ ಹಚ್ಚಿದ್ದಾರೆ. ಈ ಜಾಲದ ವಿರುದ್ಧ ಕಾರ್ಯಾಚರಣೆ ನಿರಂತವಾಗಿ ನಡೆಯಲಿದೆ ಎಂದು ಹೇಳಿದರು.

ಸ್ಪಾಗಳ ತಾಪಸಣೆ:

ಅಕ್ರಮ ಚಟುವಟಿಕೆ ಆರೋಪಗಳ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯ ಎಲ್ಲ ಸ್ಪಾಗಳನ್ನು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಕೆಲವು ಸ್ಪಾಗಳು ಕಾನೂನು ಪ್ರಕಾರ ವಹಿವಾಟು ನಡೆಸಿದರೆ, ಕೆಲವು ಅಕ್ರಮದಲ್ಲಿ ತೊಡಗಿರುವುದು ಕಂಡು ಬಂದಿದೆ. ಅಕ್ರಮ ಚಟುವಟಿಕೆಗಳಲ್ಲಿ ತೊಡಗುವ ಸ್ಪಾಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ದಯಾನಂದ್‌ ತಿಳಿಸಿದರು.

ಪೊಲೀಸರ ಶಾಮೀಲು ವಿಚಾರಣೆ

ಇತ್ತೀಚೆಗೆ ಬೆಳಕಿಗೆ ಬಂದ ಮಹದೇವಪುರ ವ್ಯಾಪ್ತಿಯ ಹೈಟೆಕ್‌ ಸ್ಪಾದಲ್ಲಿ ನಡೆದಿದ್ದ ವೇಶ್ಯಾವಾಟಿಕೆ ಜಾಲದಲ್ಲಿ ಪೊಲೀಸರು ಶಾಮೀಲಾಗಿರುವ ಆರೋಪಗಳ ಕುರಿತು ವಿಚಾರಣೆ ನಡೆಸಲಾಗುತ್ತದೆ.

-ಬಿ.ದಯಾನಂದ್‌, ಪೊಲೀಸ್‌ ಆಯುಕ್ತ