ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡಲಗಿ
ಕಳೆದ ಬುಧವಾರ ಚೆನ್ನೈನ ಭಾರತೀಯ ನೌಕಾಪಡೆಯಲ್ಲಿ ಕರ್ತವ್ಯದಲ್ಲಿದಾಗ ಆಕಸ್ಮಿಕ ಗುಂಡು ತಗುಲಿ ಮರಣ ಹೊಂದಿದ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ ಪ್ರವೀಣ ಸುಭಾಸ ಖಾನಗೌಡ್ರ (24) ಅಂತ್ಯಕ್ರಿಯೆ ಶುಕ್ರವಾರ ಸ್ವ-ಗ್ರಾಮದಲ್ಲಿ ಸಕಲ ಸರಕಾರಿ ಗೌರವದೊಂದಿಗೆ ನಡೆಯಿತು.ಐದು ವರ್ಷಗಳಿಂದ ಭಾರತೀಯ ನೌಕಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ ಪ್ರವೀಣ ಸುಭಾಸ ಖಾನಗೌಡ್ರ ಕಳೆದ ಬುಧವಾರ ಚೆನ್ನೈನ ಭಾರತೀಯ ನೌಕಾಪಡೆಯಲ್ಲಿ ಕರ್ತವ್ಯದಲ್ಲಿದಾಗ ಆಕಸ್ಮಿಕ ಗುಂಡು ತಗುಲಿ ಮರಣ ಹೊಂದಿದ್ದು, ಅವರ ಮೃತದೇಹ ಚನ್ನೈದಿಂದ ರಸ್ತೆ ಮಾರ್ಗವಾಗಿ ಗೋಕಾಕಕ್ಕೆ ತಲುಪಿತು.
ಗೋಕಾಕದಿಂದ ಬೆಳಗಾವಿಯ ಸೇನಾ ಕೇಂದ್ರ ವಾಹನದಲ್ಲಿ ತಾಲೂಕಿನ ಮಾಜಿ ಸೈನಿಕ ಸಂಘದವರಿಂದ ಬೈಕ ರ್‍ಯಾಲಿ ಮುಖಾಂತರ ಕಲ್ಲೋಳಿ ಪಟ್ಟಣಕ್ಕೆ ಆಗಮಿಸುತ್ತಿದಂತೆ ಪಟ್ಟಣದ ಶಾಲಾ ವಿದ್ಯಾರ್ಥಿಗಳು ಯೋಧನ ಪಾರ್ಥಿವ ಶರೀರ ಇದ್ದ ವಾಹನಕ್ಕೆ ಪುಷ್ಪವೃಷ್ಟಿ ಗೈದು ಪ್ರವೀಣ ಅಮರ ರಹೇ, ಜೈ ಜವಾನ್ ಜೈ ಕಿಸಾನ್, ಒಂದೇ ಮಾತರಂ ಎಂಬ ಜಯ ಘೋಷ ವಾಕ್ಯಗಳೊಂದಿಗೆ ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆವರಣದವರಿಗೆ ಬರಮಾಡಿಕೊಂಡರು. ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸಾವರ್ಜನಿಕರಿಗೆ ಯೋಧನ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.ಮುಗಿಲು ಮುಟ್ಟಿದ ಅಕ್ರಂದನ:
ಯೋಧ ಪಾರ್ಥಿವ ಶರೀರ ಕಲ್ಲೋಳಿ ಪಟ್ಟಣಕ್ಕೆ ಬರುತ್ತಿದಂತೆ ಕುಟುಂಬದವರ ಮತ್ತು ಗ್ರಾಮದ ಜನರ ಅಕ್ರಂದನ ಮುಗಿಲು ಮುಟ್ಟುವಂತಿತ್ತು.ಶ್ರದ್ಧಾಂಜಲಿ ಸಭೆ:
ಯುವ ಮುಖಂಡ ಮತ್ತು ಕಾನಿಪ ಸಂಘದ ಮೂಡಲಗಿ ತಾಲೂಕ ಘಟಕದ ಗೌರವಾಧ್ಯಕ್ಷ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ, ಭಾರತ ದೇಶಕ್ಕೆ ಸೇವೆಸಲ್ಲಿಸಿದ ಯೋಧ ಪ್ರವೀಣ ಖಾನಗೌಡ್ರನ್ನು ನಮ್ಮ ಜೀವನದಲ್ಲಿ ಮಾರ್ಗದರ್ಶನವಾಗಿ ಇಟ್ಟುಕೊಂಡು ಕಲ್ಲೋಳಿ ಗ್ರಾಮದ ಯುವಕರು ಭಾರತ ಮಾತೇಯ ಸೇವೆ ಮಾಡಬೇಕು ಎಂದ ಅವರು, ಖಾನಗೌಡ್ರ ಕುಟುಂಬಕ್ಕೆ ಭಗವಂತ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.ಅಶೋಕ ಪೂಜೇರಿ ಮಾತನಾಡಿ, ದೇಶಕ್ಕಾಗಿ ತನ್ನ ಪ್ರಾಣವನ್ನೇ ಮುಡುಪಾಗಿಟ್ಟ ಯೋಧ ಪ್ರವೀಣ ಖಾನಗೌಡ್ರನ ತ್ಯಾಗದ ಗುಣಗಾನ ಮಾಡಿದರು.
ಅಂತಿಮ ನಮನ:ಯೋಧನ ಪಾರ್ಥಿವ ಶರೀರಕ್ಕೆ ಮೂಡಲಗಿ ತಾಲೂಕು ಆಡಳಿತದಿಂದ ತಹಸೀಲ್ದಾರ್ ಶಿವಾನಂದ ಬಬಲಿ, ಮುಖಂಡರಾದ ಸರ್ವೋತ್ತಮ ಜಾರಕಿಹೊಳಿ, ಅಶೋಕ ಪೂಜೇರಿ, ಬಸಗೌಡ ಪಾಟೀಲ, ಅಜೀತ ಬೆಳಕೂಡ, ಬಸವರಾಜ ಕಡಾಡಿ, ಮಹಾಂತೇಶ ಕಪ್ಪಲಗುದಿ, ಬಸವಂತ ದಾಸನಾಳ , ಅಖಿಲ ಕರ್ನಾಟಕ ಮಾಜಿ ಸೈನಿಕ ಸಂಘದ ಮೂಡಲಗಿ ತಾಲೂಕು ಘಟಕದ ಅಧ್ಯಕ್ಷ ಚರಂತಯ್ಯ ಮಳ್ಳಿಮಠ ಮತ್ತು ಸದಸ್ಯರು, ಪಟ್ಟಣದ ಶಾಲಾ-ಕಾಲೇಜ ವಿದ್ಯಾರ್ಥಿಗಳು, ಶಿಕ್ಷಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಕುಟುಂಬ ವರ್ಗದವರು, ಸ್ನೇಹಿತರು, ಹಿತೈಷಿಗಳು, ಗ್ರಾಮಸ್ಥರು ಅಂತಿಮ ನಮನ ಸಲ್ಲಿಸಿದರು.
ಯೋಧ ಅಂತ್ಯ ಸಂಸ್ಕಾರಕ್ಕೆ ಶಿಕ್ಷಣ ಸಂಸ್ಥೆಯ ಆವರಣದಿಂದ ಹೂ ಮಾಲೆಗಳಿಂದ ಅಲಂಕೃತಗೊಂಡ ಸೈನ್ಯದ ವಾಹನದಲ್ಲಿ ದೇಶ ಭಕ್ತಿ ಗೀತೆ, ಬೆಳಗಾವಿ ಯೋಧರು, ಚೆನ್ನೈನ ಭಾರತೀಯ ನೌಕಾ ಪಡೆಯ ಯೋಧರು, ಗ್ರಾಮಸ್ಥರು, ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಮೆರವಣಿಗೆ ಮೂಲಕ ಪಟ್ಟಣ ಪಂಚಾಯಿತಿ ಆವರಣ ಹತ್ತಿರ ವಿಧಿ ವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿತು.ಚೆನ್ನೈ ಭಾರತೀಯ ನೌಕಾ ಪಡೆಯ ಕಮಾಂಡರ್ ಮಾಯಾಂಕ ಬಾಗೂರ, ಬೆಳಗಾವಿ ಮಹಾರ ರೆಜಿಮೆಂಟ್ ಸುಬೇದಾರ ಸುಭಾಸ ಗೂಡರ ಮೃತ ಯೋಧನ ಕುಟುಂಬದವರಿಗೆ ಭಾರತ ಧ್ವಜವನ್ನು ಹಸ್ತಾಂತರಿಸಿದರು.