ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಮಾಡುತ್ತಿರುವ ಜನಪರ ಕಾರ್ಯಗಳನ್ನು ನೋಡಿ ಜನರ ಒಲವು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಕಡೆ ಇದೆ ಹೀಗಾಗಿ ಈಶಾನ್ಯ ಪದವೀಧರ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಶರಣಪ್ಪ ಮಟ್ಟೂರ ಗೆಲವು ನಿಶ್ಚಿತವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್‌

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಮಾಡುತ್ತಿರುವ ಜನಪರ ಕಾರ್ಯಗಳನ್ನು ನೋಡಿ ಜನರ ಒಲವು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಕಡೆ ಇದೆ ಹೀಗಾಗಿ ಈಶಾನ್ಯ ಪದವೀಧರ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಶರಣಪ್ಪ ಮಟ್ಟೂರ ಗೆಲವು ನಿಶ್ಚಿತವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಅವರು ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ವಿಧಾನ ಪರಿಷತ್ತಿನಲ್ಲಿ ಶಿಕ್ಷಕರ ಸಮಸ್ಯೆ ಆಲಿಸಿದ ಅನುಭವ ಶರಣಪ್ಪ ಮಟ್ಟೂರ ಅವರಿಗೆ ಇದೆ. ಅವರು ಶಿಕ್ಷಕರ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿದು ಸಮಸ್ಯೆ ಬಗೆಹರಿಸಿದ್ದಾರೆ, ಹೀಗಾಗಿ ಇದೇ ಅ. 23ರಂದು ನಡೆಯಲಿರುವ ಚುನಾವಣೆಯಲ್ಲಿ ಶರಣಪ್ಪ ಮಟ್ಟೂರ ಅವರಿಗೆ ಮತದಾರರು ಮತ ನೀಡಿ ಪ್ರಚಂಡ ಬಹುಮತದಿಂದ ಆರಿಸಬೇಕೆಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಸುಮಾರು 7 ಸಾವಿರ ಮತದಾರರಿದ್ದು, ಇದಕ್ಕಾಗಿ 33 ಮತದಾನ ಕೇಂದ್ರಗಳಲ್ಲಿ ಮತದಾನ ನಡೆಯಲಿದೆ. ಶಿಕ್ಷಕರ ಕ್ಷೇತ್ರ ಎಂದರೆ ಇದೊಂದು ಚಿಂತಕರ ಚಾವಡಿ ಇದ್ದಂತೆ. ವಿಧಾನ ಪರಿಷತ್ತಿನ 75 ಸ್ಥಾನಗಳಲ್ಲಿ 7 ಸ್ಥಾನಗಳು ಶಿಕ್ಷಕರಿಗೆ ಮೀಸಲಿವೆ ಎಂದರು.

ಸಂಘಟನ್‌ ಸೃಜನ್‌ ಅಭಿಯಾನ-2ರ ವೀಕ್ಷಕರಾದ ಮಾಜಿ ಶಾಸಕ ಹಸನಸಾಬ್‌ ದೋತಿಹಾಳ್‌ ಮಾತನಾಡಿ, ಕಾಂಗ್ರೆಸ್‌ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ಉದ್ದೇಶದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ ಗಾಂಧಿ ಅವರ ಮಾರ್ಗದರ್ಶನದಲ್ಲಿ ರಾಷ್ಟ್ರವ್ಯಾಪಿ ''''''''ಸಂಘಟನ್‌ ಸೃಜನ್‌'''''''' ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮೊದಲ ಹಂತದಲ್ಲಿ ಬೀದರ್‌ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಮನ್ನಾನ್‌ ಸೇಠ್‌ ಅವರನ್ನು ನೇಮಿಸಲಾಗಿದೆ. ಎರಡನೇ ಹಂತದಲ್ಲಿ ಬ್ಲಾಕ್‌, ಗ್ರಾಮ ಪಂಚಾಯಿತಿ, ವಾರ್ಡ್‌ ಹಾಗೂ ಬೂತ್‌ ಮಟ್ಟದ ಸಂಘಟನೆಯನ್ನು ಬಲಪಡಿಸಲಾಗುವುದು. ಪ್ರತಿ 10 ಬೂತ್‌ಗಳಿಗೆ ಒಬ್ಬ ಅಧ್ಯಕ್ಷರನ್ನು ಆಯ್ಕೆ ಮಾಡುವ ಉದ್ದೇಶವಿದೆ, ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಆಧ್ಯತೆ ನೀಡಿ, ಅ. 30ರೊಳಗೆ ಕೆಪಿಸಿಸಿ ಅಧ್ಯಕ್ಷರಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮನ್ನಾನ್ ಸೇಠ್‌ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಹಾಗೂ ಶಾಸಕ ರಹೀಮ್‌ ಖಾನ್‌, ವಿಧಾನ ಪರಿಷತ್‌ ಸದಸ್ಯ ಭೀಮರಾವ್‌ ಪಾಟೀಲ್‌, ಸಂಘಟನ್‌ ಸೃಜನ್‌ ಅಭಿಯಾನದ ವೀಕ್ಷಕರಾದ ಜ್ಯೋತಿ ಮದರಿಗಿ, ಸುಭಾಷ್‌ ರಾಠೋಡ್‌, ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಅಮೃತರಾವ್‌ ಚಿಮಕೋಡೆ, ಪಂಡಿತರಾವ್‌ ಚಿದ್ರಿ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಾರ್ಜ್‌ ಫರ್ನಾಂಡಿಸ್‌ ಹಾಗೂ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.