ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಮತ್ತು ಮಾಜಿ ಸಚಿವ ರಾಜಶೇಖರ ಪಾಟೀಲ್ ಹುಮನಾಬಾದ್ ನಡುವಿನ ರಾಜಕೀಯ ಭಿನ್ನಾಭಿಪ್ರಾಯ ಇಡೀ ಜಿಲ್ಲೆಗೇಕೆ ರಾಜ್ಯಕ್ಕೆ ತಿಳಿದಿರುವ ಸಂಗತಿ. ದಿ. ಭೀಮಣ್ಣ ಖಂಡ್ರೆ ಹಾಗೂ ಬಸವರಾಜ ಪಾಟೀಲ್ ಈ ಎರಡು ಬಲಿಷ್ಠ ರಾಜಕೀಯ ಕುಟುಂಬಗಳ ನಡುವಿನ ಒಳ ವೈಮನಸ್ಸಿನಿಂದಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಡೆ ಖಂಡ್ರೆ ಬಣ
ಕನ್ನಡಪ್ರಭ ವಾರ್ತೆ ಬೀದರ್
ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಮತ್ತು ಮಾಜಿ ಸಚಿವ ರಾಜಶೇಖರ ಪಾಟೀಲ್ ಹುಮನಾಬಾದ್ ನಡುವಿನ ರಾಜಕೀಯ ಭಿನ್ನಾಭಿಪ್ರಾಯ ಇಡೀ ಜಿಲ್ಲೆಗೇಕೆ ರಾಜ್ಯಕ್ಕೆ ತಿಳಿದಿರುವ ಸಂಗತಿ. ದಿ. ಭೀಮಣ್ಣ ಖಂಡ್ರೆ ಹಾಗೂ ಬಸವರಾಜ ಪಾಟೀಲ್ ಈ ಎರಡು ಬಲಿಷ್ಠ ರಾಜಕೀಯ ಕುಟುಂಬಗಳ ನಡುವಿನ ಒಳ ವೈಮನಸ್ಸಿನಿಂದಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಡೆ ‘ಖಂಡ್ರೆ ಬಣ’ ಹಾಗೂ ‘ರಾಜಶೇಖರ ಬಣ’ ಎಂದು ಎರಡು ಭಾಗವಾಗಿ ಗುರುತಿಸಿಕೊಂಡಿದೆ. ಈ ಬಣ ರಾಜಕೀಯದಿಂದ ಪಕ್ಷಕ್ಕೆ ಭಾರಿ ಹಾನಿಯಾಗುತ್ತಿದ್ದು, ಇದೀಗ ಇಬ್ಬರ ನಡುವಿನ ಮುನಿಸು ಮುರಿದು ಒಗ್ಗಟ್ಟು ಮೂಡಿಸಲು ಕಾಲ ಸನ್ನಿಹಿತವಾಗಿಸುವ ಪ್ರಯತ್ನಗಳು ಆರಂಭವಾಗಿವೆ.ಶುಕ್ರವಾರ ನಡೆದ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಬೀದರ್ ಶಾಸಕ ರಹೀಮ್ ಖಾನ್ ಈ ಮಹತ್ವದ ಒಗ್ಗಟ್ಟಿನ ಪ್ರಯತ್ನಕ್ಕೆ ಮುನ್ನುಡಿ ಬರೆದಿದ್ದಾರೆ. ಸಂಸದ ಸಾಗರ ಖಂಡ್ರೆ ಅವರ ಸಹಕಾರದೊಂದಿಗೆ ಸಚಿವ ಈಶ್ವರ ಖಂಡ್ರೆ ಹಾಗೂ ರಾಜಶೇಖರ ಪಾಟೀಲ್ ಅವರನ್ನು ಒಂದೇ ವೇದಿಕೆಯಲ್ಲಿ ಸಂಪೂರ್ಣವಾಗಿ ಒಂದಾಗಿಸುವ ಪಣ ತೊಟ್ಟಿದ್ದು, ಈ ಪ್ರಯತ್ನದಲ್ಲಿ ಯಶಸ್ವಿಯಾಗುವುದಾಗಿ ವಿಶ್ವಾಸ ವ್ಯಕ್ತಪಡಿಸಿ ದ್ದಾರೆ. ಈ ಎರಡೂ ಕುಟುಂಬಗಳು ಕಾಂಗ್ರೆಸ್ ಪಕ್ಷದ ಬಹುದೊಡ್ಡ ಆಸ್ತಿಯಾಗಿದ್ದು, ಇವರಿಬ್ಬರೂ ಒಂದಾದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಪೂರ್ಣ ಶಕ್ತಿಯುತವಾಗಲಿದೆ ಎಂದು ರಹೀಮ್ ಖಾನ್ ಪ್ರತಿಪಾದಿಸಿದರು.ಇದೇ ಕಾರ್ಯಕ್ರಮದಲ್ಲಿ ಖಂಡ್ರೆ ಹಾಗೂ ಪಾಟೀಲ್ ಅವರ ನಡುವೆ ಜಟಾಪಟಿಯ ಸಣ್ಣ ಸುಳಿವು ಸಿಕ್ಕಿತಾದರೂ, ನಾಯಕರು ಸಮಚಿತ್ತದ ಮಾತುಗಳನ್ನಾಡಿದರು. ಕಿರಿಯ ಸಂಸದರಾಗಿದ್ದರೂ ಹಿರಿತನದ ಒಗ್ಗಟ್ಟಿನ ಮಂತ್ರ ಜಪಿಸಿದ ಸಾಗರ ಖಂಡ್ರೆ, ಪಕ್ಷ ವಿರೋಧಿಗಳನ್ನು ಸಹಿಸಬಾರದು ಎಂದು ನೂತನ ಅಧ್ಯಕ್ಷರಿಗೆ ಕರೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಜಶೇಖರ ಪಾಟೀಲ್, ಪಕ್ಷ ವಿರೋಧಿಗಳನ್ನು ದಂಡಿಸುವುದು ಸರಿ, ಆದರೆ ಈ ಹಿಂದಿನ ಅಧ್ಯಕ್ಷರು ಏನು ಮಾಡಿದ್ದರು ಎಂದು ಖಂಡ್ರೆ ಬಣದವರೇ ಎಂದು ಗುರುತಿಸಿಕೊಂಡಿದ್ದ ಬಸವರಾಜ ಜಾಬಶೆಟ್ಟಿ ಅವರತ್ತ ಪರೋಕ್ಷವಾಗಿ ಪ್ರಶ್ನಿಸುತ್ತಲೇ ‘ನಮ್ಮಲ್ಲಿ ಖಾಯಂ ಭಿನ್ನಾಭಿಪ್ರಾಯವಿಲ್ಲ, ಕುಟುಂಬದಲ್ಲಿ ಸಣ್ಣಪುಟ್ಟ ಕಲಹಗಳು ಸಹಜ’ ಎಂದರು. ಅಲ್ಲದೆ ತಮ್ಮ ಕ್ಷೇತ್ರದ ಸಹಕಾರದಿಂದ ಸಾಗರ ಖಂಡ್ರೆ ಅವರು ಲೋಕಸಭೆಯಲ್ಲಿ ಹೆಚ್ಚಿನ ಮತ ಗಳಿಸಲು ಸಾಧ್ಯವಾಯಿತು ಎಂದು ನೆನಪಿಸಿದರು. ಅದಕ್ಕೂ ಮುನ್ನ ಮಾತನಾಡಿದ್ದ ಸಾಗರ ಖಂಡ್ರೆ, ಹಿಂದಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಎಲ್ಲರ ಸಹಕಾರದಿಂದ ಗೆಲುವು ಸಿಕ್ಕಿದ್ದನ್ನು ಉಲ್ಲೇಖಿಸಿ ಪಾಟೀಲ್ ಕುಟುಂಬದ ಗೆಲುವನ್ನು ಪರೋಕ್ಷವಾಗಿ ನೆನಪಿಸಿದ್ದರು.ಕಾರ್ಯಕ್ರಮದಲ್ಲಿ ಸಚಿವ ಈಶ್ವರ ಖಂಡ್ರೆ ಅವರು ಮಾಜಿ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಅವರಿಗಾಗಿ ಸಭಿಕರನ್ನು ಎದ್ದು ನಿಲ್ಲಿಸಿ ಚಪ್ಪಾಳೆ ತಟ್ಟಿಸಿದ್ದು ಎಲ್ಲರ ಗಮನ ಸೆಳೆಯಿತು. ವೇದಿಕೆಯಲ್ಲಿ ರಾಜಶೇಖರ ಪಾಟೀಲ್ ಹಾಗೂ ಈಶ್ವರ ಖಂಡ್ರೆ ಇಬ್ಬರೂ ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಸ್ನೇಹತ್ವದಿಂದ ಒಗ್ಗಟ್ಟಾಗಿ ಮುಂದೆ ಸಾಗುತ್ತೇವೆ ಎಂದು ಸ್ಪಷ್ಟಪಡಿಸಿದ್ದು, ಮುಂಬರುವ ದಿನಗಳಲ್ಲಿ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಿಗೆ ಯಾವ ರೀತಿಯ ಸವಾಲುಗಳನ್ನು ಎದುರಿಸ ಬೇಕಾದೀತು ಹಾಗೆಯೇ ಖಂಡ್ರೆ - ಪಾಟೀಲ್ ಮುನಿಸು ಮುಗಿಯುತ್ತಾ ಅಥವಾ ಮುಂದುವರೆಯುತ್ತಾ ಎಂಬುವುದಕ್ಕೆ ಕಾಲವೇ ಉತ್ತರಿಸಬೇಕಿದೆ.