ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಜಿಲ್ಲೆಯ ಚಿತ್ತಾಪುರದ ಕಾಗಿಣಾ ತೀರದಲ್ಲಿ ಎಗ್ಗಿಲ್ಲದೆ ಸಾಗಿರುವ ಅಕ್ರಮ ಮರಳುಗಾರಿಕೆಗೆ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕುಮ್ಮಕ್ಕು ಇದೆ ಎಂದು ಆರೋಪ ಮಾಡಿರುವ ಆಂದೋಲಾ ಸಿದ್ದಲಿಂಗ ಸ್ವಾಮೀಜಿ, 10 ದಿನದಲ್ಲಿ ಅಕ್ರಮದ ವಿರುದ್ಧ ಕ್ರಮ ಆಗದೆ ಹೋದಲ್ಲಿ ಜಿಲ್ಲಾಡಳಿತದ ವಿರುದ್ಧವೇ ಕೋರ್ಟ್ ಮೆಟ್ಟಿಲೇರುವುದಾಗಿ ಗುಡುಗಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರ ಚಿತ್ತಾಪುರ. ಅಲ್ಲೇ ಅಕ್ರಮ ಮರಳುಗಾರಕೆ ನಡೆದಿದೆ ಎಂದರೆ ಇದಕ್ಕಿಂತ ಬೇರೆ ಅನಾಹುತ ಏನಿದೆ? ಸಚಿವರ ಕೃಪಾಪೋಷಣೆಯಲ್ಲೇ ಅಕ್ರಮ ಸಾಗಿದೆ. ಹಿಂಬಾಲಕರೇ ಮರಳುಗಾರಿಕೆಯಲ್ಲಿ ಮುಳುಗಿದ್ದರೂ ಸಚಿವರಿಗೆ ಅದನ್ನು ತಡೆಯುವ, ಮೂಗುದಾರ ಹಾಕುವ ಧಮ್ಮಿಲ್ಲ, ಇನ್ನು ಅಧಿಕಾರಿಗಳಂತೂ ಅತ್ತ ಇಣುಕಿ ನೋಡುವ ದೈರ್ಯವೂ ಮಾಡಿಲ್ಲವೆಂದರು.
ಅಕ್ರಮ ಮರಳುಗಾರಿಕೆಯ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ನೀಡಿದರೂ ಕೇರ್ ಮಾಡುತ್ತಿಲ್ಲ, ರಾಜ್ಯದ ಗಮಿ ಇಲಾಖೆಗೆ ದೂರು ಸಲ್ಲಿಸಿದಾಗ ಅಲ್ಲಿಂದ ಬಂದ ತಂಡದವರು ಚಿತ್ತಾಪುರದಲ್ಲಿನ ಮರಲು ಅಕ್ರಮಕ್ಕೆ ಕಕ್ಕಾಬಿಕ್ಕಿಯಾಗಿದ್ದಾರೆಂದು ತಂಡ ನೀಡಿದ ವರದಿಗಳನ್ನು ಉಲ್ಲೇಖಿಸಿದರು.ಚಿತ್ತಾಪುರದಲ್ಲಿರುವ ಅಬ್ದುಲ್ ರಶೀದ್ ಹಾಗೂ ಅಬ್ದುಲ್ ಹಫೀಜ್ ತಂದೆ ಮಕ್ಕಳಿಬ್ಬರೂ 10 ಎಕರೆ ಮಣ್ಣು ಟೆಂಡರ್ ಪಡೆದವರು ಅದನ್ನು ಮೀರಿ, ಕಾನೂನು ಉಲ್ಲಂಘಿಸಿ 40 ರಿಂದ 50 ಎಕರೆ ಮರಳುಗಾರಿಕೆ ಮಾಡಿದ್ದಾರೆ. ಇದನ್ನು ಗುರುತಿಸಿದ್ದ ರಾಜ್ಯ ತಂಡದವರು ಇವರಿಬ್ಬರಿಗೂ ತಲಾ ₹85. 57 ಲಕ್ಷ ಹಾಗೂ ₹94 ಲಕ್ಷ ನಂತೆ ದಂಡ ವಿಧಿಸಿದ್ದಾರೆ. ಇದಲ್ಲದೆ 2023 ರಲ್ಲಿ ಚಿತ್ತಾಪುರದಲ್ಲಿ ಇವರಿಬ್ಬರ ಮೇಲೆಯೂ ಕೇಸ್‌ಗಳಾಗಿದ್ದವು.
ಇನ್ನೂ ಹಲವು ಪ್ರಕರಣಗಲು ಚಿತ್ತಾಪುರದಿಂದಲೇ ವರದಿಯಾಗಿ ದಂಡ ವಿಧಿಸಲ್ಪಟ್ಟಿದ್ದು ಅವರೆಲ್ಲರೂ ಸೇರಿಕೊಂಡು ದಂಡ ಹಾಕಿದ್ದರ ಬಗ್ಗೆ ತಡೆಯಾಜ್ಞೆ ತಂದಿದ್ದಾರೆ. ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ಈ ತಡೆಯಾಜ್ಞೆಗಳನ್ನು ತೆರವು ಮಾಡಿ ವಂಚನೆ ತಡೆಯಲು ಆಗುತ್ತಿಲ್ಲ ಎಂದು ಆಂದೋಲಾ ಶ್ರೀಗಳು ದೂರಿದರು.ಸೇಡಂ ಸಹಾಯಕ ಆಯುಕ್ತರು, ಚಿತ್ತಾಪುರ ತಹಸೀಲ್ದಾರ್, ಇಲ್ಲಿನ ಗಣಿ ಇಲಾಖೆಯ ಉಪ ನಿರ್ದೇಶಕರು ಸೇರಿಕೊಂಡು ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ರಾಯಲ್ಟಿಯಲ್ಲಿ ವಾಹನದ ತೂಕದಲ್ಲಿ, ಮರಲು ಸಂಗ್ರಹ ಇತ್ಯಾದಿಯಲ್ಲಿ ಅವ್ಯಾಹತ ಮೋಸ ಮಾಡಲಾಗುತ್ತ ರಾಜಧನ ವಂಚಿಸಲಾಗುತ್ತಿದ್ದರೂ ಕೇಳುವವರಿಲ್ಲದಂತಾಗಿದೆ. ಇದು ಜಿಲ್ಲಾ ಉಸ್ತುವಾರಿ ಸಚಿವರ ತವರೂರಲ್ಲೇ ಹೀಗಾದಲ್ಲಿ ಭೀಮಾ ತೀರದಲ್ಲಿ ಇನ್ನೂ ಅಘ್ವಾನವಾಗೋದರಲ್ಲಿ ದೂಸ್ರಾ ಮಾತಿಲ್ಲ ಎಂದರು.
ಮರಳು ಅಕ್ರಮ ತಡೆಗೆ ಇರುವ ಜಿಲ್ಲಾ ಕಾರ್ಯಪಡೆಯಲ್ಲಿ ಜಿಲ್ಲಾಧಿಕಾರಿಗಳೇ ಅಧ್ಯಕ್ಷರು. ಇವರಿಗೆ ಎಲ್ಲವೂ ಗೊತ್ತಿದ್ದರೂ ಅಕ್ರಮ, ವಂಚನೆ ತಡೆಯೋ ಧೈರ್ಯ ತೋರುತ್ತಿಲ್ಲ. ಇವರೂ ಸಚಿವರ ಕೈಗೊಂಬೆ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು.ನಾವು ದಾಖಲೆ ಸಂಗ್ರಹಿಸಿದ್ದೇವೆ. ಇನ್ನೊಂದು 10 ದಿನ ಗಡವು ಕೊಡುತ್ತೇವೆ. ಆರೋಪ ಬಂದಿರುವ ಹಿನ್ನೆಲೆ ಜಿಲ್ಲಾಧಿಕಾರಿಗಳು ಚಿತ್ತಾಪೂರ ಮರಲುಗಾರಿಕೆಯ ಕ್ಷೇತ್ರಗಳಲ್ಲಿ ಖುದ್ದು ಸಂಚರಿಸಿ ಸಮೀಕ್ಷೆ ನಡೆಸಿ ಸಾಕ್ಷಾತ್ ವರದಿ ಪಡೆಯಬೇಕು. ಆ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು, ವಿಫಲವಾದಲ್ಲಿ ಕೋರ್ಟ್ ಮೆಟ್ಟಿಲೇರೋದು ನಿಶ್ಚಿತ ಎಂದು ಹೇಳಿದ್ದಾರೆ. ಶ್ರೀರಾಮ ಸೇನೆಯ ಮುಖಂಡರಾದ ರಾಕೇಶ ಜಮಾದಾರ್, ಮಲ್ಕಣ್ಣ ಹಿರೇಪೂಜಾರಿ, ಮಲ್ಲಣಗೌಡ ಕಟ್ಟಿಸಂಗಾವಿ, ಹುಲ್ಲೇಶ ಕಾಸರಭೋಸ್ಗಾ ಇದ್ದರು.
ಸಚಿವರ ಬಂಧು ಕೆಆರ್‌ಐಡಿಎಲ್ ಮರಳು ಗಣಿಗಾರಿಕೆ ಗುತ್ತಿಗೆದಾರ!ಚಿತ್ತಾಪುರದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರ ಬಂಧು ಒಬ್ಬರಿಗೆ ಕೆಆರ್‌ಐಡಿಎಲ್‌ನ ಮರಳುಗಾರಿಕೆ ಗುತ್ತಿಗೆವಹಿಸಿ ಕೊಡಲಾಗಿದೆ. ಇದರಿಂದ ಗಣಿಗಾರಿಕೆ ನಡೆಸಿ ಸರ್ಕಾರಿ ಕಾಮಗಾರಿಗಳಿಗೆ ಮರಳು ಪೂರೈಸುವ ಹೊಣೆ ಸಚಿವರ ಬಂಧು ಹೊತ್ತಿದ್ದಾರೆ. ಹೀಗಾಗಿ ಇಲ್ಲಿ ಕೆಆರ್‌ಐಡಿಲ್ ಹೆಸರಲ್ಲಿಯೂ ಮೋಸ ಸಾಗಿದ್ದರೂ ಕೇಳುವವರಿಲ್ಲದಂತಾಗಿದೆ. ಅವರು ತೋಡಿದ ಖೆಡ್ಡಾದಲ್ಲೇ ಕುರಾಗಾಹಿ ಶ್ರೀಧರ ಬಿದ್ದು ಸಾವನ್ನಪ್ಪಿದ. ಆ ಕೇಸ್ ಹಣ ಕೊಟ್ಟು ಮುಚ್ಚಿ ಹಾಕಿದ್ದಾರೆ. ಇಷ್ಟೆಲ್ಲಾ ರಾದ್ಯಾಂತವಾದರೂ ಜಿಲ್ಲಾಡಳಿತದ ಯಾರೊಬ್ಬರೂ ಭೇಟಿ ನೀಡಿಲ್ಲ. ಏನಾಗುತ್ತಿದೆ, ಆರೋಪಗಳು ಕೇಳಿ ಬರುತ್ತಿವೆಯಲ್ಲ ಎಂದು ಸ್ಥಳ ಪರಿಶೀಲನೆಗೂ ಹೋಗಿಲ್ಲ ಎಂದು ಆಂದೋಲಾ ಶ್ರೀ ದೂರಿದರು.