ಸಾರಾಂಶ
- ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲ್ಲ
- ಇದು ಗೊತ್ತಿದ್ದೇ ಕಾಂಗ್ರೆಸ್ ದಲಿತ ಪಿಎಂ ಆಟ ಆಡುತ್ತಿದೆ- ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಆರೋಪ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಮಲ್ಲಿಕಾರ್ಜುನ ಖರ್ಗೆ ತಮ್ಮ ಪ್ರಧಾನಮಂತ್ರಿ ಅಭ್ಯರ್ಥಿ ಎಂಬುದು ಕಾಂಗ್ರೆಸ್‌ನ ಮೋಸದಾಟ ಅಷ್ಟೇ. ಈ ಸಲ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲ್ಲ ಎಂಬುದು ಕಾಂಗ್ರೆಸ್‌ಗೂ ಗೊತ್ತು. ಹೀಗಾಗಿ, ದಲಿತರನ್ನು ಪಿಎಂ ಮಾಡುತ್ತೇವೆ ಎಂದು ಹೇಳುತ್ತಿದೆ ಅಷ್ಟೇ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2013ರಲ್ಲಿ ಸ್ಪಷ್ಟ ಬಹುಮತ ಬಂದಿತ್ತು. ಆಗಲೇ ಮುಖ್ಯಮಂತ್ರಿಯನ್ನಾಗಿ ಮಾಡಲಿಲ್ಲ. ಕುತಂತ್ರದಿಂದ ಪರಮೇಶ್ವರ ಅವರನ್ನು ಸೋಲಿಸಿದರು. ಖರ್ಗೆ ಅವರಿಗೆ ಆಂತರಿಕ ಚುನಾವಣೆಯಲ್ಲಿ ಹೆಚ್ಚಿಗೆ ಮತ ಬರಲಿಲ್ಲ ಎಂದು ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿದರು. ಮನಸು ಮಾಡಿದ್ದರೆ ಆಗಲೇ ಮಾಡಬಹುದಿತ್ತು ಅಲ್ವಾ? ಆಗ ಖರ್ಗೆ ಕೆಪಿಸಿಸಿ ಕಚೇರಿಯಿಂದ ಕಣ್ಣೀರು ಸುರಿಸುತ್ತ ಹೊರಬಂದಿದ್ದರು. ಯಾವಾಗ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಖಚಿತವಾಗುತ್ತದೆಯೋ ಆಗ ಖರ್ಗೆ ಹೆಸರನ್ನು ಮುಂದೆ ಬಿಡುವುದು ಕಾಂಗ್ರೆಸ್ ಕೆಲಸ ಎಂದರು.
ಈಗಲೂ ಅಷ್ಟೇ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲ್ಲ ಎಂಬುದು ಖಚಿತವಾಗಿದೆ. ಹೀಗಾಗಿ, ಖರ್ಗೆ ಹೆಸರನ್ನು ಹೇಳುತ್ತಿದೆ. ಮುಂದೆ ನಾವು ದಲಿತರನ್ನು ಪಿಎಂ ಅಭ್ಯರ್ಥಿಯೆಂದು ಘೋಷಿಸಿದೆವು. ಆದರೆ, ಪಕ್ಷ ಅಧಿಕಾರಕ್ಕೆ ಬರಲಿಲ್ಲ ಎಂದು ಜನರ ಮೇಲೆಯೇ ಗೂಬೆ ಕೂರಿಸುವ ಹುನ್ನಾರ ಅಷ್ಟೇ. ಕಾಂಗ್ರೆಸ್ ಮುಳುಗುವ ಹಡಗು. ಅದಕ್ಕೆ ಖರ್ಗೆ ಅವರನ್ನು ನಾಯಕರನ್ನಾಗಿ ಮಾಡಿದ್ದಾರೆ ಎಂದು ಕಾರಜೋಳ ಲೇವಡಿ ಮಾಡಿದರು.52 ಪರ್ಸೇಂಟೇಜ್ ಸರ್ಕಾರ:
ರಾಜ್ಯದಲ್ಲಿರುವುದು 52 ಪರ್ಸೇಂಟೇಜ್ ಸರ್ಕಾರ. ಯಾವುದೇ ಅಭಿವೃದ್ಧಿ ನಡೆಯುತ್ತಿಲ್ಲ. ನಾವು ಮಂಜೂರು ಮಾಡಿದ ಕೆಲಸಗಳನ್ನು ನಿಲ್ಲಿಸಿ, ಮತ್ತೆ ಪ್ರಾರಂಭಿಸಲು ಲಂಚ ಕೇಳುತ್ತಿದ್ದಾರೆ. ನಮ್ಮ ಮೇಲೆ ಆಗ ಸುಳ್ಳು ಆರೋಪ ಮಾಡಿದರು. ಇದೊಂದು ಭ್ರಷ್ಟಾತಿಭ್ರಷ್ಟ ಸರ್ಕಾರ. ತಮ್ಮ 40 ವರ್ಷದ ರಾಜಕೀಯದಲ್ಲಿ ಇಂಥ ದರಿದ್ರ ಸರ್ಕಾರ ನೋಡಿರಲಿಲ್ಲ ಎಂದರು.ಹೇಗೆ ದುಡ್ಡು ವಸೂಲಿ ಮಾಡಬೇಕು ಎಂಬುದೊಂದೇ ಇವರ ಚಿಂತೆಯಾಗಿದೆ. ಅದಕ್ಕೆ ನೌಕರರ ವರ್ಗಾವಣೆ ದಂಧೆಯಾಗಿದೆ.
6 ತಿಂಗಳಿಂದ ವರ್ಗಾವಣೆಯೊಂದೇ ಇವರ ಉದ್ಯೋಗವಾಗಿದೆ. ಮೇನಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆಗ ನೂರೆಂಟು ಸಂಸಾರದ ಸಮಸ್ಯೆಗಳಿರುತ್ತವೆ. ಆ ಸಮಯದಲ್ಲಿ ವರ್ಗಾವಣೆ ಮಾಡಿದರೆ ನೌಕರರೇನು ಆತ್ಮಹತ್ಯೆ ಮಾಡಿಕೊಳ್ಳಬೇಕಾ? ವರ್ಗಾವಣೆ ಮಾಡಿ ಸುಗ್ಗಿ ಮಾಡುತ್ತೇವೆ ಎಂದರೆ ಯಾರೂ ಒಪ್ಪಲ್ಲ. ಈಗ ಏನಾದರೂ ಚುನಾವಣೆ ನಡೆದರೆ ಕಾಂಗ್ರೆಸ್‌ಗೆ 10 ಸೀಟ್ ಕೂಡ ಬರಲ್ಲ ಎಂದರು.ಸರ್ಕಾರಕ್ಕೆ ಬರುವ ಎಲ್ಲ ಆದಾಯವನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ. ಅಭಿವೃದ್ಧಿಗೆ ಅನುದಾನ ತೆಗೆದಿಟ್ಟು ಬೇರೆ ಕೆಲಸ ಮಾಡಬೇಕು.
ಮಹದಾಯಿ ಯೋಜನೆ:ಕಾಂಗ್ರೆಸ್ ಬಂದ ಮೇಲೆ ಒಂದು ಕಾಮಗಾರಿ ಮಂಜೂರು ಮಾಡಿಲ್ಲ. ಮಹದಾಯಿಗೆ ಸಾವಿರ ಕೋಟಿ ತೆಗೆದಿಟ್ಟು ಟೆಂಡರ್ ಕರೆದಿದ್ದೇವು. ನಾವು ತೆಗೆದಿಟ್ಟ ಹಣವನ್ನು ವಾಪಸ್ ಪಡೆದಿದ್ದಾರೆ. ಅದನ್ನು ಮುಂದುವರಿಸಿಕೊಂಡು ಹೋಗುವ ಬದಲಿಗೆ ಕಾಂಗ್ರೆಸ್ ಗಿಮಿಕ್ ಮಾಡುತ್ತಿದೆ ಎಂದರು.
40 ಶಾಸಕರು ಅತೃಪ್ತರು:ಕಾಂಗ್ರೆಸ್‌ನ 40 ಶಾಸಕರು ಸರ್ಕಾರದ ಬಗ್ಗೆ ಅತೃಪ್ತರಾಗಿದ್ದಾರೆ. ಆದರೆ ಬಿ.ಆರ್. ಪಾಟೀಲ, ಬಸವರಾಜ ರಾಯರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆ. ಉಳಿದವರು ಹೇಳುವ ಧೈರ್ಯ ಮಾಡಿಲ್ಲ ಅಷ್ಟೇ ಎಂದರು.
ಹಾಲು ಕುಡಿದೆ ಸಾಯ್ತಾರೆ ಎನ್ನುವಾಗ ಅವರಿಗೆ ವಿಷ ಯಾಕೆ ಕೊಡಬೇಕು ಎಂದು ಮಾರ್ಮಿಕವಾಗಿ ನುಡಿದ ಅವರು, ನಾವು ಯಾರ ಜೊತೆಗೂ ಸಂಪರ್ಕದಲ್ಲಿಲ್ಲ. ಸಂಪರ್ಕವನ್ನೂ ಮಾಡುವುದಿಲ್ಲ. ಅವರಲ್ಲಿನ ಅಸಮಾಧಾನ ತಾನಾಗಿಯೇ ಹೊರಬರುತ್ತದೆ ನೋಡಿ ಎಂದು ಭವಿಷ್ಯ ನುಡಿದರು.ವಿ. ಸೋಮಣ್ಣ, ಸೋಮಶೇಖರ್ ಸೇರಿ ಯಾರು ಪಕ್ಷ ಬಿಟ್ಟು ಹೋಗಲ್ಲ. ಪಂಚರಾಜ್ಯ ಚುನಾವಣೆ ಫಲಿತಾಂಶದ ನಂತರ ಯಾರೂ ಹೋಗುವ ಧೈರ್ಯ ಮಾಡಿಲ್ಲ ಎಂದರು.
ಲೋಕಸಭೆಗೆ ಸ್ಪರ್ಧಿಸಲ್ಲನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ವಿಜಯಪುರ ಕ್ಷೇತ್ರ ಸೇರಿ ಯಾವುದೇ ಕ್ಷೇತ್ರವನ್ನು ನಾನು ಕೇಳಿಲ್ಲ. ಚುನಾವಣೆಗೆ ಸ್ಪರ್ಧಿಸುತ್ತೇನೆ ಎನ್ನುವುದು ಮಾಧ್ಯಮಗಳ ಸೃಷ್ಟಿ. ಬಿಜೆಪಿ ಹೈಕಮಾಂಡ್ ಅಳೆದು ತೂಗಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದೆ ಎಂದು ಕಾರಜೋಳ ಸ್ಪಷ್ಟಪಡಿಸಿದರು.ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ನಾವು ನಿನ್ನೆ ಬೆಂಗಳೂರಲ್ಲಿ ಚರ್ಚಿಸಿದ್ದೇವೆ. ನಮ್ಮ ಗುರಿ ಏನಿದ್ದರೂ ಲೋಕಸಭೆ ಚುನಾವಣೆ. ಪ್ರಧಾನಿ ಮೋದಿ ಮಾಡಿರುವ ಯೋಜನೆ ಬಗ್ಗೆ ತಿಳಿಸಿ ಹೇಳುವುದು. ಮತ್ತೆ ಬಿಜೆಪಿ ನೇತೃತ್ವದ ಸರ್ಕಾರವನ್ನು ಅಸ್ತಿತ್ವಕ್ಕೆ ತರುವುದಷ್ಟೇ ಎಂದರು.