3 ಡಿಸಿಎಂ ಚರ್ಚೆಗೆ ಮಲ್ಲಿಕಾರ್ಜುನ ಖರ್ಗೆ ಗರಂ

| Published : Jan 10 2024, 01:45 AM IST / Updated: Jan 10 2024, 01:05 PM IST

ಸಾರಾಂಶ

ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಜಾತಿ ಆಧಾರದಲ್ಲಿ ಮೂರು ಉಪ ಮುಖ್ಯಮಂತ್ರಿ ಹುದ್ದೆಗಳು ಸೃಷ್ಟಿಯಾಗಬೇಕೆಂಬ ಆಗ್ರಹ ಕಾಂಗ್ರೆಸ್‌ ಪಕ್ಷದಲ್ಲಿ ಬಲಗೊಳ್ಳುತ್ತಿರುವ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಇದೆಲ್ಲವೂ ಊಹಾಪೋಹ ಎಂದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಜಾತಿ ಆಧಾರದಲ್ಲಿ ಮೂರು ಉಪ ಮುಖ್ಯಮಂತ್ರಿ ಹುದ್ದೆಗಳು ಸೃಷ್ಟಿಯಾಗಬೇಕೆಂಬ ಆಗ್ರಹ ಕಾಂಗ್ರೆಸ್‌ ಪಕ್ಷದಲ್ಲಿ ಬಲಗೊಳ್ಳುತ್ತಿರುವ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಇದೆಲ್ಲವೂ ಊಹಾಪೋಹ, ಚುನಾವಣೆ ಹೊಸ್ತಿಲಲ್ಲಿ ಇಂಥ ಚರ್ಚೆ ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಮಂಗಳವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರು ಡಿಸಿಎಂ ಹುದ್ದೆ ಸೃಷ್ಟಿ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಸಿಡಿಮಿಡಿಗೊಂಡ ಅವರು, ಅದನ್ನೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಲ್ಲಿ ಕೇಳಿ. ನಿಮಗೆಲ್ಲ ಗೊತ್ತಾಗುತ್ತದೆ. ಎಐಸಿಸಿ ಅಧ್ಯಕ್ಷರ ಬಳಿ ಈ ವಿಚಾರ ಚರ್ಚೆಗೆ ಬಂದಿಲ್ಲ ಎಂದರು. 

ಉಹಾಪೋಹದಿಂದ ಎಲ್ಲವೂ ಆಗೋದಿಲ್ಲ. ನಾವು ಚುನಾವಣೆ ಸಂದರ್ಭದಲ್ಲಿ ಈ ವಿಚಾರ ಪದೇ ಪದೇ ಚರ್ಚೆಗೆ ತರಬಾರದು. ನಮ್ಮ ಮುಂದೆ ಲೋಕಸಭಾ ಚುನಾವಣೆ ಇದೆ. ಈ ಸಮಯದಲ್ಲಿ ಈ ರೀತಿಯ ಚರ್ಚೆಗೆ ಯಾರೂ ಅವಕಾಶ ನೀಡಬಾರದು. 

ಹೈಕಮಾಂಡ್‌ ಅದನ್ನೆಲ್ಲ ಪುರಸ್ಕರಿಸುವುದೂ ಇಲ್ಲ ಎಂದರು.ಚುನಾವಣೆ ಸಮಯದಲ್ಲಿ ನಾವು ಜನರ ಕೆಲಸ ಮಾಡಬೇಕು. ಸದ್ಯಕ್ಕೆ ಸರ್ಕಾರ ನಡೆಸುವ ಕಡೆಗೆ, ಸಮಸ್ಯೆಗಳ ನಿವಾರಣೆ ಕಡೆಗೆ, ನಮ್ಮ ಪಂಚ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವ ಕಡೆಗೆ ಗಮನ ಕೊಡಬೇಕು. 

ನಮ್ಮ ಗುರಿ ಮುಟ್ಟುವವರೆಗೂ ಇಂಥದ್ದಕ್ಕೆಲ್ಲ ಅವಕಾಶ ಕೊಡಬಾರದು ಎಂದು ಪರೋಕ್ಷವಾಗಿ ರಾಜ್ಯದ ಕಾಂಗ್ರೆಸ್‌ ಮುಖಂಡರಿಗೆ ಖರ್ಗೆ ಕಿವಿಮಾತು ಹೇಳಿದರು.