ಕಿತ್ತೂರು ರಾಣಿ ಚನ್ನಮ್ಮನಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವಮಾನ : ರೇಣುಕಾಚಾರ್ಯ

| Published : Jan 24 2025, 12:48 AM IST / Updated: Jan 24 2025, 12:06 PM IST

ಕಿತ್ತೂರು ರಾಣಿ ಚನ್ನಮ್ಮನಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವಮಾನ : ರೇಣುಕಾಚಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಿಯಾಂಕಾ ವಾದ್ರಾರನ್ನು ವೀರ ರಾಣಿ ಕಿತ್ತೂರು ಚನ್ನಮ್ಮನಿಗೆ ಹೋಲಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ನಾಚಿಕೆಯಾಗಬೇಕು, ಇದು ಕಿತ್ತೂರು ಚನ್ನಮ್ಮನಿಗೆ ಮಾಡಿದ ಅವಮಾನ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ಹೊರ ಹಾಕಿದರು.

  ದಾವಣಗೆರೆ :  ಪ್ರಿಯಾಂಕಾ ವಾದ್ರಾರನ್ನು ವೀರ ರಾಣಿ ಕಿತ್ತೂರು ಚನ್ನಮ್ಮನಿಗೆ ಹೋಲಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ನಾಚಿಕೆಯಾಗಬೇಕು, ಇದು ಕಿತ್ತೂರು ಚನ್ನಮ್ಮನಿಗೆ ಮಾಡಿದ ಅವಮಾನ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ಹೊರ ಹಾಕಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಕಲಿ ಗಾಂಧಿಗಳೆಲ್ಲಾ ಬೆಳಗಾವಿಯಲ್ಲಿ ಸಮಾವೇಶ ನಡೆಸಿದ್ದು, ಎಐಸಿಸಿ ಅಧ್ಯಕ್ಷರಾಗಿ ಮುಂದುವರಿಸುತ್ತಾರೆಂಬ ಉದ್ದೇಶದಿಂದ ಮಲ್ಲಿಕಾರ್ಜುನ ಖರ್ಗೆ ಪ್ರಿಯಾಂಕಾ ವಾದ್ರಾರನ್ನು ಹೊಗಳುತ್ತಿದ್ದಾರೆ. ಪ್ರಿಯಾಂಕಾರನ್ನು ಕಿತ್ತೂರು ಚನಮ್ಮನಿಗೆ ಹೋಲಿಕೆ ಮಾಡಿದ್ದು ನಾಚಿಕೆಗೇಡು ಎಂದರು.

ಕಿತ್ತೂರು ಚನ್ನಮ್ಮನಿಗೆ ಮಾಡಿದ ಅವಮಾನ ಇದಾಗಿದೆ. ನಕಲಿ ಗಾಂಧಿಗಳೆಲ್ಲಾ ಸೇರಿಕೊಂಡು, ಬೆಳಗಾವಿಯಲ್ಲಿ ಸಮಾವೇಶ ಮಾಡಿ, ಕುರ್ಚಿಗಾಗಿ ಕೆಲಸ ಮಾಡುತ್ತಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ಗೆ ಅವಮಾನ ಮಾಡಿದ್ದು ಇದೇ ಕಾಂಗ್ರೆಸ್ಸಿನವರು ಎಂದು ಆರೋಪಿಸಿದರು.

ಚುನಾವಣೆಗಾಗಿ ಕಾಂಗ್ರೆಸ್ ಪಕ್ಷದವರು ಅಂಬೇಡ್ಕರ್ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಇದೇ ಅಂಬೇಡ್ಕರ್ ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸಿ ಸೋಲಿಸಿದ್ದು, ಅಂಬೇಡ್ಕರ್‌ಗೆ ಪದೇ ಪದೇ ಅವಮಾನಿಸುವ ಕೆಲಸ ಮಾಡಿದ್ದು, ಬಾಬಾ ಸಾಹೇಬ್ ಅಂಬೇಡ್ಕರ್ ನಿಧನರಾದ ಮೇಲೆ ಅವರ ಅಂತ್ಯಕ್ರಿಯೆಗೂ ಕಾಂಗ್ರೆಸ್‌ನವರು ದೆಹಲಿಯಲ್ಲಿ ಜಾಗ ನೀಡಲಿಲ್ಲ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ಹೆಚ್ಚುತ್ತಿದ್ದು, ಮಹಿಳೆಯರ ಗೋಳಾಟ ಹೆಚ್ಚುತ್ತಿದೆ. ಮಹಿಳೆಯರ ಹಿತ ಕಾಯಬೇಕಾದ ಸರ್ಕಾರ ಕುರ್ಚಿಗಾಗಿ ಕಿತ್ತಾಟ ನಡೆಸಿದೆ. ನನ್ನ ಕ್ಷೇತ್ರದಲ್ಲೇ ಹಲವಾರು ಮಹಿಳೆಯರು ನನಗೆ ಕರೆ ಮಾಡಿ, ಮೈಕ್ರೋ ಫೈನಾನ್ಸ್‌ಗಳಿಂದ ಆಗುತ್ತಿರುವ ಕಿರುಕುಳದ ಬಗ್ಗೆ ಗೋಳು ಹೇಳಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಕ್ಷೇತ್ರದಲ್ಲೂ ಇದು ಮಿತಿ ಮೀರಿದೆ. ಮೈಕ್ರೋ ಫೈನಾನ್ಸ್‌ಗಳಿಗೆ ಕಡಿವಾಣ ಹಾಕಬೇಕಾದ ಗೃಹ ಸಚಿವರೇ ನಮ್ಮ ರಾಜ್ಯದಲ್ಲಿ ಅಸಮರ್ಥರಾಗಿದ್ದಾರೆ. ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆಯೂ ಹದಗೆಡುತ್ತಿದೆ ಎಂದು ದೂರಿದರು.

ಬಿಜೆಪಿ ಮುಖಂಡರಾದ ಮಾಡಾಳ್ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ, ಎನ್.ಎಚ್.ಹಾಲೇಶ ಇತರರು ಇದ್ದರು.

ನಾವು ಇದ್ದಿದ್ದಕ್ಕೆ ದಾವಣಗೆರೇಲಿ ಬಿಜೆಪಿ ಕಡಿಮೆ ಅಂತರದ ಸೋಲು

ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋತಿದ್ದು ಸ್ವಯಂಕೃತಾಪರಾಧದಿಂದಲೇ ಹೊರತು ನಮ್ಮಿಂದ ಅಲ್ಲವೇ ಅಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪುನರುಚ್ಛರಿಸಿದರು.

ಲೋಕಸಭೆ ಚುನಾವಣೆ ಸೋಲಿಗೆ ನಮ್ಮ ಮೇಲೆ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮೇಲೆ ಆರೋಪ ಮಾಡುತ್ತಿದ್ದಾರೆ. ನಾವೆಲ್ಲರೂ ಇದ್ದುದಕ್ಕೆ ಅತ್ಯಂತ ಕಡಿಮೆ ಅಂತರದಲ್ಲಿ ಬಿಜೆಪಿ ಇಲ್ಲಿ ಸೋತಿದೆ. ಇಲ್ಲದಿದ್ದರೆ ಅಭ್ಯರ್ಥಿ ಠೇವಣಿಯನ್ನೇ ಕಳೆದುಕೊಳ್ಳುತ್ತಿದ್ದರು ಎಂದು ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ್ ಗೌಡ ಆರೋಪಗಳಿಗೆ ತಿರುಗೇಟು ನೀಡಿದರು.

ಕಾಂಗ್ರೆಸ್ ಪಕ್ಷಕ್ಕೆ ಸೇಲ್ ಆಗಿರುವ ಶಾಸಕ ಬಿ.ಪಿ.ಹರೀಶ್‌ಗೆ ನಮ್ಮ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಮನೆ ಗೆದ್ದು, ಮಾರು ಗೆಲ್ಲಬೇಕು. ಅದನ್ನು ಬಿಟ್ಟು, ಹರಿಹರ ಕ್ಷೇತ್ರವ

ನ್ನೇ ಅಭಿವೃದ್ಧಿಪಡಿಸದೆ, ಮಹಾನ್ ನಾಯಕನ ಜತೆಗೆ ರಾಜ್ಯ ಸುತ್ತುತ್ತಿದ್ದಾನೆ ಎಂದು ಎಂದು ರೇಣುಕಾಚಾರ್ಯ ಎದುರಾಳಿ ಬಣದ ಬಿ.ಪಿ.ಹರೀಶ, ಜಿ.ಎಂ.ಸಿದ್ದೇಶ್ವರರ ವಿರುದ್ಧ ವಾಗ್ದಾಳಿ ನಡೆಸಿದರು.

ಶ್ರೀರಾಮುಲು ಯಾವುದೇ ಕಾರಣಕ್ಕೂ ಕಾಂಗ್ರೆಸ್ಸಿಗೆ ಹೋಗುವುದಿಲ್ಲ. ನಮ್ಮ ಪಕ್ಷದ ವರಿಷ್ಠರು ಎಲ್ಲವನ್ನೂ ಸರಿಪಡಿಸುತ್ತಾರೆ. ನಾನೂ ಸಹ ಈಗಷ್ಟೇ ಈ ಇಬ್ಬರ ಸುದ್ದಿಗೋಷ್ಟಿಯನ್ನು ನೋಡಿದೆ. ಯಾವುದೇ ಕಾರಣಕ್ಕೂ ರಾಮುಲು ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ.

ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ.