ಖರ್ಗೆ ನಿರಾಸೆಯಾಗಿ ಏನೇನೋ ಮಾತನಾಡುತ್ತಿದ್ದಾರೆ

| Published : May 23 2025, 12:29 AM IST

ಸಾರಾಂಶ

ಉಗ್ರರನ್ನು ಹೇಗೆ ಬಗ್ಗು ಬಡಿಯೋದು ಅಂತ 27 ನಿಮಿಷದಲ್ಲಿ ಮೋದಿ ಅವರು ಕೊಟ್ರಲ್ಲಾ ಆ ಇಂಜೆಕ್ಷನ್ ತಡೆದುಕೊಳ್ಳೋದಕ್ಕೆ ಪಾಕಿಸ್ತಾನದವರಿಗೆ 25 ವರ್ಷ ಬೇಕು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಆಪರೇಷನ್ ಸಿಂದೂರ ಚಿಟ್‌ ಪುಟ್ ಯುದ್ಧ ಎಂಬ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಪ್ರತಿಕ್ರಿಯಿಸಿ, ಮಲ್ಲಿಕಾರ್ಜುನ ಖರ್ಗೆಗೆ ಇದು ಅರ್ಥ ಆಗಿದೆಯೋ ಇಲ್ವೋ ಗೊತ್ತಿಲ್ಲ. 27 ನಿಮಿಷದಲ್ಲಿ ಇಡೀ ವಿಶ್ವಕ್ಕೆ ಮೋದಿ ಅವರು ಏನು?, ಅವರ ಆಡಳಿತ ಶೈಲಿಯೇನು ಅಂತ ಗೊತ್ತಾಗಿದೆ. ಆದರೆ ಮಲ್ಲಿಕಾರ್ಜುನ ಖರ್ಗೆಗೆ ಇದು ಅರ್ಥಾನೆ ಆಗಿಲ್ಲ ಎಂದಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರರನ್ನು ಹೇಗೆ ಬಗ್ಗು ಬಡಿಯೋದು ಅಂತ 27 ನಿಮಿಷದಲ್ಲಿ ಮೋದಿ ಅವರು ಕೊಟ್ರಲ್ಲಾ ಆ ಇಂಜೆಕ್ಷನ್ ತಡೆದುಕೊಳ್ಳೋದಕ್ಕೆ ಪಾಕಿಸ್ತಾನದವರಿಗೆ 25 ವರ್ಷ ಬೇಕು. ಆಪರೇಷನ್ ಸಿಂದೂರ ಉಗ್ರಗಾಮಿಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಆದರೆ ಇವತ್ತಿನ ಈ ಹೊಗಳು ಭಟ್ಟರಿಗೆ ದೇಶದ ಬಗ್ಗೆ ಗಾಂಭೀರ್ಯತೆ ಇದ್ರೆ ಹೀಗೆ ಮಾತಾಡೋದಿಲ್ಲ ಎಂದರು.

ನಮ್ಮ ಪಾಕಿಸ್ತಾನ ಎಂಬ ಮಲ್ಲಿಕಾರ್ಜುನ ಖರ್ಗೆಗೆ ಹೇಳಿಕೆಗೆ ತಿರುಗೇಟು ನೀಡಿದ ಸೋಮಣ್ಣ, ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಈ ರಾಷ್ಟ್ರದ ಒಬ್ಬ ನಾಯಕರು. ಅವರಿಗೆ ಏನು ಮಾತಾಡಬೇಕು ಅನ್ನೋದೆ ಅರ್ಥ ಆಗ್ತಿಲ್ಲ. ಅವರು ನಿರಾಶರಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಭಾವನೆ ಈ ತರಹ ಇದೆ ಅಂದಾಗ ಇದು ಒಳ್ಳೆಯದಲ್ಲ. ನೀವು ಯಾರಿಗೋಸ್ಕರ ಯಾರ ತೃಪ್ತಿಗೋಸ್ಕರ ಈ ಮಾತು ಹೇಳ್ತಿದಿರೋ ಗೊತ್ತಿಲ್ಲ. ದೇಶ ಇದ್ರೆ ನಾವು. ನಿಮ್ಮ ಕುಟುಂಬವನ್ನು ನಿಮ್ಮ ಕಣ್ಣೆದುರೆ, ನಿಮ್ಮ ತಾಯಿ, ತಂಗಿ ಸಜೀವ ದಹನವನ್ನು ನೀವು ನಿಮ್ಮ ತಂದೆಯವರು ಮರದ ಹಿಂದೆ ನಿಂತು ನೋಡಿದ ಸಂದರ್ಭದ ಒಂದು ಕಹಿ ಘಟನೆ ನೆನೆಸಿಕೊಂಡರೆ ಸಾಕು, ಪಾಕಿಸ್ತಾನ ಹೆಸರು ಹೇಳೋದಕ್ಕೂ ನಿಮ್ಮ ಬಾಯಲ್ಲಿ ಬರಬಾರದು. ಯಾರನ್ನೋ ತೃಪ್ತಿ ಪಡಿಸೋದಕ್ಕೋಸ್ಕರ, ಇತಿಹಾಸದಲ್ಲಿ ಇಂತವರು ಅದು ಖರ್ಗೆಯವರಾ ಎನ್ನುವ ಕೆಳಹಂತಕ್ಕೆ ಇಳಿದಿರೋದು ನನ್ನಂತವನಿಗೆ ನೋವು ತಂದಿದೆ ಎಂದರು.

ಸಿಎಂ ಸಿದ್ದರಾಮಯ್ಯಗೆ ಮರೆವು ಜಾಸ್ತಿ ಆಗಿದೆ:

ಸಿದ್ದರಾಮಯ್ಯಗೆ ಚೇರ್ ಉಳಿಸಿಕೊಳ್ಳೋದೆ ಸಾಕಾಗಿದೆ. ಹಳೆ ಸಿದ್ದರಾಮಯ್ಯ ಇಲ್ಲ ಅಂತ ಸಾವಿರ ಸಾರಿ ಹೇಳಿದ್ದೇನೆ. ಸಿದ್ದರಾಮಯ್ಯ ಹಾಗೂ ನಾವೆಲ್ಲ ಒಂದೇ ಟೀಮನಲ್ಲಿದ್ದವರು. ಅವರು ಏನು ಮಾತಾಡ್ತಾರೋ ಅವರಿಗೆ ಗೊತ್ತಿಲ್ಲ. ಅವರಿಗೆ ಮರೆವು ಜಾಸ್ತಿ ಆಗಿದೆ. ಏನಾದರೂ ಕೇಳಿದರೆ ಹಾಂ ಅಂತಾರೆ ಎಂದು ಮೇಲೆ ಮುಖ ಮಾಡಿ ವ್ಯಂಗ್ಯ ಮಾಡಿದ ಸೋಮಣ್ಣ ಅವರು, ಮರೆವಿನಲ್ಲಿ ಇನ್ಯಾರನ್ನೋ ತೃಪ್ತಿ ಪಡಿಸಲು ಹೋಗಿ, ನನ್ನ ಎಲ್ಲಿ ತೆಗೆದು ಬಿಡ್ತಾರೋ ಅಂತ ಅಂದ್ಬುಟ್ಟು ಏನೇನೊ ಮಾತಾಡ್ತಾರೆ. ನಾನು ಸಿದ್ದರಾಮಯ್ಯ ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ, ಅವತ್ತಿನ ಸಿದ್ದರಾಮಯ್ಯನೆ ಬೇರೆ ಇವತ್ತಿನ ಸಿದ್ದರಾಮಯ್ಯನೆ ಬೇರೆ ಎಂದರು.

ಸಿಎಂ ಸಿದ್ದರಾಮಯ್ಯ ಮೆಂಟಲಿ ಡಿಸ್ಟರ್ಬ್‌ ಆಗಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸೋಮಣ್ಣ, ಸಿದ್ದರಾಮಯ್ಯಗೆ ಪಾಪ ಮರೆವು ಆಗಿದೆ. ಅದೇನೊ ಅಂತಾರಲ್ಲ ಬಿ 22 ಅಂತ ಒಂದು ಔಷಧಿ ಇದೆ. ಅದನ್ನು ಕೊಟ್ಟರು ಕೂಡ ಕಷ್ಟ ಕಣ್ರಿ, ವಯಸ್ಸಾಯ್ತು, ವಯಸ್ಸಾಯ್ತು ಅನ್ನೋದಕ್ಕಿಂತ ಟೆನ್ಶನ್ ಜಾಸ್ತಿಯಾಗಿದೆ. ಅವರಿಗೆ ಕಿವಿ ಕಚ್ಚೋರೆ ಜಾಸ್ತಿ ಆಗಿದ್ದಾರೆ. ಅದನ್ನು ತಡೆದುಕೊಳ್ಳಲಾಗದೆ ಮರೆವು ಜಾಸ್ತಿ ಆಗಿದೆ. ಇದು ಇನ್ನು ತುಂಬಾ ದಿನ ನಡೆಯೋದಿಲ್ಲ, ಪ್ರಧಾನಿ ಮೋದಿ ತೆಗೆದುಕೊಂಡ ತೀರ್ಮಾನಕ್ಕೆ ಅಪಚಾರ ಮಾಡೋದರಲ್ಲಿ ನೀವು ಇದ್ದೀರಿ. ಅದನ್ನು ಕೈ ಬಿಡಿ ಇಲ್ಲದಿದ್ದರೆ ಮುಂದೆ ಯಾರು ನಿಮ್ಮನ್ನು ಮೂಸೋರು ಇಲ್ಲ, ನಿಮಗೆ ಮಾರ್ಕೆಟ್ ಇಲ್ಲ ಎಂದು ಸಚಿವ ಸೋಮಣ್ಣ ಹೇಳಿದರು.

ನಾವೆಲ್ಲ ಈ ದೇಶದ ಮಣ್ಣಿನ ಮಕ್ಕಳು. ಭಾರತ ದೇಶಕ್ಕೆ ಸಣ್ಣ ಅಪಚಾರ ಮಾಡಿದರೂ, ಭಾರತಾಂಬೆ ಸುಮ್ಮನೆ ಬಿಡೋದಿಲ್ಲ ಸುಟ್ಟು ಹೋಗ್ತಿರಾ. ಪ್ರಧಾನಿ ಮೋದಿ ಅವರು ಆಪರೇಷನ್ ಸಿಂದೂರ ವಿಚಾರದಲ್ಲಿ ಕೈಗೊಂಡ ತೀರ್ಮಾನಕ್ಕೆ ತಲೆ ಬಾಗಬೇಕು. ತಲೆಬಾಗದೆ ಇದ್ರೆ ಬಾಕಿದು ನೀವೆ ತೀರ್ಮಾನ ಮಾಡಿ ಎಂದು ವಿ.ಸೋಮಣ್ಣ ಹೇಳಿದರು.