ಪ್ರಧಾನಿ ವಿರುದ್ಧ ಖರ್ಗೆ, ರಾಗಾ ವಿಷ ಉಗುಳುವ ಕಾರ್ಯ: ಶೆಟ್ಟರ್

| Published : Jul 27 2025, 01:55 AM IST

ಪ್ರಧಾನಿ ವಿರುದ್ಧ ಖರ್ಗೆ, ರಾಗಾ ವಿಷ ಉಗುಳುವ ಕಾರ್ಯ: ಶೆಟ್ಟರ್
Share this Article
  • FB
  • TW
  • Linkdin
  • Email

ಸಾರಾಂಶ

ಖರ್ಗೆ, ರಾಹುಲ್ ಗಾಂಧಿ ಈಗ ವಿಷಕಾರುವ ಕೆಲಸ ಮಾಡುತ್ತಿದ್ದಾರೆ. ಆರ್.ಎಸ್.ಎಸ್. ಹಾಗೂ ಮೋದಿಯವರ ಬಗ್ಗೆ ಕೆಟ್ಟ ಭಾಷೆ ಬಳಕೆ ಮಾಡುತ್ತಿದ್ದಾರೆ. ದೇಶದಲ್ಲಿ ಆರ್‌ಎಸ್‌ಎಸ್‌ ಇರದೇ ಇದ್ದರೆ ಕಾಂಗ್ರೆಸ್ ಭಾರತವನ್ನು ಮುಸ್ಲಿಂ ದೇಶವನ್ನಾಗಿ ಮಾಡುತ್ತಿತ್ತು.

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ ಬಗೆಗೆ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ವಿಷ ಉಗುಳುವ ಪ್ರಕ್ರಿಯೆ ಆರಂಭ ಮಾಡಿದ್ದಾರೆ. ಬಾಯಿ ಬಿಟ್ಟರೆ ಮೋದಿ ಅವರ ಬಗ್ಗೆ ಆರ್.ಎಸ್.ಎಸ್ ಬಗ್ಗೆ ಕೆಟ್ಟ ಭಾಷೆ ಬಳಸುತ್ತಿದ್ದಾರೆ ಎಂದು ಸಂಸದ ಜಗದೀಶ ಶೆಟ್ಟರ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖರ್ಗೆ, ರಾಹುಲ್ ಗಾಂಧಿ ಈಗ ವಿಷಕಾರುವ ಕೆಲಸ ಮಾಡುತ್ತಿದ್ದಾರೆ. ಆರ್.ಎಸ್.ಎಸ್. ಹಾಗೂ ಮೋದಿಯವರ ಬಗ್ಗೆ ಕೆಟ್ಟ ಭಾಷೆ ಬಳಕೆ ಮಾಡುತ್ತಿದ್ದಾರೆ. ದೇಶದಲ್ಲಿ ಆರ್‌ಎಸ್‌ಎಸ್‌ ಇರದೇ ಇದ್ದರೆ ಕಾಂಗ್ರೆಸ್ ಭಾರತವನ್ನು ಮುಸ್ಲಿಂ ದೇಶವನ್ನಾಗಿ ಮಾಡುತ್ತಿತ್ತು ಎಂದು ಕಿಡಿಕಾರಿದರು.

ಜವಾಹರಲಾಲ್ ನೆಹರುವಿನಿಂದ ಹಿಡಿದು ನೆಹರು ಕುಟುಂಬ ಹಾಗೂ ಇಂದಿರಾ ಗಾಂಧಿ, ರಾಹುಲ್ ಗಾಂಧಿ ದೇಶಕ್ಕಾಗಿ ಏನನ್ನೂ ಮಾಡಿಲ್ಲ. ಬರೀ ದೇಶವನ್ನು ಹಾಳು ಮಾಡುವ ಕೆಲಸ ಮಾಡಿದ್ದಾರೆ. ದೇಶಕ್ಕೆ ಯಾವುದೇ ಕೊಡುಗೆ ಇಲ್ಲ. ಹಿಂದುಳಿದಿರುವ ವರ್ಗಗಳ ಬಗ್ಗೆ ಮಾತನಾಡುವ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಏನನ್ನೂ ಮಾಡಿಲ್ಲ. ಕೇವಲ ಭಾಷಣ ಮಾಡಿದೆ ವಿನಃ ಯಾವುದೇ ರೀತಿಯಲ್ಲಿ ಅಭಿವೃದ್ಧಿ ಕಾರ್ಯವನ್ನು ಮಾಡಿಲ್ಲ ಎಂದರು.

ಕಾಂಗ್ರೆಸ್ ಪಕ್ಷದ ನಿಲುವು ಅರ್ಥವಾಗುತ್ತಿಲ್ಲ. ಆ ಪಕ್ಷ ದೇಶದ ಎಲ್ಲ ಕಡೆಯೂ ಸೋಲುತ್ತಿದೆ. ಹೀಗಾಗಿ, ಫೇಕ್ ವೋಟರ್‌ ಬಗ್ಗೆ, ಇವಿಎಂ ಸರಿಯಿಲ್ಲ ಎಂದು ವಿನಾಕಾರಣ ಆರೋಪ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೆದ್ದಾಗ ಸುಮ್ಮನಿದ್ದು, ಸೋತಾಗ ಗಲಾಟೆ: ಕಾಂಗ್ರೆಸ್ಸಿಗರ ಬಳಿ ಸೂಕ್ತ ದಾಖಲೆಗಳು, ಅಂಕಿ ಸಂಖ್ಯೆಯಿದ್ದರೆ ಕೋರ್ಟಿಗೆ ಹೋಗಲಿ. ಅದನ್ನು ಬಿಟ್ಟು ಗೆದ್ದಾಗ ಸುಮ್ಮನಿದ್ದು, ಸೋತಾಗ ಹೀಗೆ ಆರೋಪ ಮಾಡುವುದು ಸರಿಯಲ್ಲ. ಇನ್ನು ರಾಹುಲ್ ಗಾಂಧಿ ಪ್ರಧಾನಿ ಗೆಲುವಿನ ಬಗ್ಗೆ ಮಾಡಿರುವ ಆಪಾದನೆ ಸತ್ಯಕ್ಕೆ ದೂರವಾಗಿದೆ. ಬೇಕಾಬಿಟ್ಟಿಯಾಗಿ ಸಂಸತ್ತಿನಲ್ಲಿ ಮಾತನಾಡಿ ಗೊಂದಲ ಸೃಷ್ಟಿಸುವ ಬದಲಿಗೆ ಕೋರ್ಟಿನಲ್ಲಿ ಇತ್ಯರ್ಥ ಮಾಡಲಿ ಎಂದು ಸವಾಲು ಹಾಕಿದರು.

ಮಹದಾಯಿ ಸಮಸ್ಯೆ ಶೀಘ್ರವೇ ಇತ್ಯರ್ಥ: ಮಹದಾಯಿ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಟ್ರಿಬ್ಯೂನಲ್‌ನಲ್ಲಿ ಹಂಚಿಕೆಯಾಗಿದೆ. ಕೇವಲ ಅನುಷ್ಠಾನ ಕಾರ್ಯ ಮಾತ್ರ ಬಾಕಿ ಉಳಿದಿದೆ‌. ಆದಷ್ಟು ಬೇಗ ಅನುಮತಿ ಸಿಗುತ್ತದೆ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.

ನಗರದಲ್ಲಿ ಶನಿವಾರ ಮಹದಾಯಿ ಕುರಿತಂತೆ ಮಾತನಾಡಿದ ಅವರು, ಯೋಜನೆ ಜಾರಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಲ್ಲ ರೀತಿಯ ಕೆಲಸ ಮಾಡುತ್ತಿದೆ. ಈಗಾಗಲೇ ಫಾರೆಸ್ಟ್ ಕ್ಲಿಯರೆನ್ಸ್ ಸಂಬಂಧಿಸಿದಂತೆ ಕೆಲವೊಂದು ದಾಖಲೆಗಳನ್ನು ಕೇಳಿದ್ದು, ಅದನ್ನು ಕೂಡ ನೀಡಿದೆ. ಆದಷ್ಟು ಬೇಗ ಇತ್ಯರ್ಥ ಆಗಲಿದೆ ಎಂದರು.