- ಡಿಕೆಶಿ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ಶುರುವಾಗಿದ್ದರಿಂದ ಗೊಂದಲ ಸೃಷ್ಟಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ - - -
ಕನ್ನಡಪ್ರಭ ವಾರ್ತೆ ದಾವಣಗೆರೆಡಿ.ಕೆ.ಶಿವಕುಮಾರಗೆ ಮುಖ್ಯಮಂತ್ರಿ ಮಾಡುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌ನಲ್ಲಿ ಚರ್ಚೆ ಶುರುವಾಗಿದ್ದರಿಂದ ಅದರ ದಾರಿ ತಪ್ಪಸಲೆಂದೇ ಮುಖ್ಯಮಂತ್ರಿ ಹುದ್ದೆಗೆ ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕುಟುಕಿದ್ದಾರೆ.
ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ತರುವ ಮೂಲಕ ಗೊಂದಲ ಸೃಷ್ಟಿ ಮಾಡಿದ್ದಾರೆ. ಕಾಂಗ್ರೆಸ್ಸಿನಲ್ಲಿ ಗೊಂದಲ ಇದ್ದೇ ಇದೆ ಎಂದರು.ಮುಖ್ಯಮಂತ್ರಿ ಸ್ಥಾನಕ್ಕೆ ಡಿ.ಕೆ. ಶಿವಕುಮಾರ ಹೆಸರು ಹೈಕಮಾಂಡ್‌ನಲ್ಲಿ ಚರ್ಚೆ ಶುರುವಾಗುತ್ತಿದ್ದಂತೆ ಅದನ್ನು ತಪ್ಪಿಸಲೆಂದು ಕಾಂಗ್ರೆಸ್ಸಿನವರೇ ದಾರಿ ಹುಡುಕಿದ್ದಾರೆ. ಖರ್ಗೆ ಜೊತೆಗೆ ಡಾ. ಜಿ.ಪರಮೇಶ್ವರ ಹೆಸರನ್ನೂ ಮುನ್ನೆಲೆಗೆ ತಂದಿದ್ದಾರೆ. ಅದು ಕಾಂಗ್ರೆಸ್ ಪಕ್ಷದ ಆಂತರಿಕ ವಿಷಯ. ಅದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಅವರು ಹೇಳಿದರು.
ಕಾಂಗ್ರೆಸ್ಸಿನಲ್ಲಿ ಅಧಿಕಾರ ಹಂಚಿಕೆ ಒಪ್ಪಂದ ಆಗಿದೆಯೋ ಇಲ್ಲವೋ, ಆ ಪುಣ್ಯಾತ್ಮರಿಗೆ ಗೊತ್ತು. ಇದೆಲ್ಲದರ ಪರಿಣಾಮ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸರ್ಕಾರಿ ನೌಕರರಿಗೆ ವೇತನ ನೀಡುವುದಕ್ಕೂ ಈ ಸರ್ಕಾರದಲ್ಲಿ ಹಣ ಇಲ್ಲ. ಅಭಿವೃದ್ಧಿ ಕಾರ್ಯಗಳೂ ಆಗದಂತಹ ಸ್ಥಿತಿಗೆ ರಾಜ್ಯವನ್ನು ಕಾಂಗ್ರೆಸ್ಸಿಗರು ತಂದು ನಿಲ್ಲಿಸಿದ್ದಾರೆ ಎಂದು ಅವರು ದೂರಿದರು.
ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಹೆಚ್ಚುತ್ತಿದ್ದು, ಹುಬ್ಬಳ್ಳಿ-ಧಾರವಾಡದಲ್ಲಿ ಡ್ರಗ್ಸ್ ಗಾಂಜಾ ಕನ್ಸ್ಯೂಮ್ ನೆಗೆಟಿವ್ ಬಂದವರ ಬಳಿ ಹಣ ವಸೂಲಿ ಮಾಡಿದ್ದಾರೆ. ಒಂದೇ ದಿನ 80 ಜನರ ಬಳಿ ಹಣವನ್ನು ವಸೂಲಿ ಮಾಡಿದ್ದಾರೆ. ಅರವಿಂದ ಬೆಲ್ಲದ್ ಆರೋಪ ಗಂಭೀರ ವಿಷಯವಾಗಿದ್ದು, ಪೊಲೀಸ್ ಮತ್ತು ಕಂದಾಯ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಈ ಸಂದರ್ಭ ಕೇಂದ್ರದ ಮಾಜಿ ಸಚಿವ ಡಾ. ಜಿ.ಎಂ.ಸಿದ್ದೇಶ್ವರ ಇತರರು ಇದ್ದರು.- - -
(ಬಾಕ್ಸ್)* ಪ.ಬಂಗಾಳ, ಅಸ್ಸಾಂನಲ್ಲಿ ನಮ್ಮದೇ ಸರ್ಕಾರ ರಚನೆ - ತಮಿಳುನಾಡು, ಕೇರಳದಲ್ಲೂ ಉತ್ತಮ ಸಾಧನೆ ಮಾಡುತ್ತೇವೆ: ಪ್ರಹ್ಲಾದ ಜೋಶಿ ದಾವಣಗೆರೆ: ಪಂಚ ರಾಜ್ಯಗಳ ಚುನಾವಣೆಯಲ್ಲಿ ನಾವು ಬಹುದೊಡ್ಡ ಸಾಧನೆ ಮಾಡಲಿದ್ದು, ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಪಂಚ ರಾಜ್ಯಗಳಲ್ಲಿ ನಡೆದ ಚುನಾವಣೆ ಅತ್ಯಂತ ಶಾಂತಿಯುತವಾಗಿ ಆಗಿದ್ದು, ಪಶ್ಚಿಮ ಬಂಗಾಳದಲ್ಲಿ ಸೋಲಿನ ಭಯದಿಂದಾಗಿ ಮಮತಾ ಬ್ಯಾನರ್ಜಿ ಸ್ಟ್ರಾಂಗ್ ರೂಂಗೆ ನುಗ್ಗುವುದನ್ನು ಮಾಡಿದ್ದಾರೆ. ಇ-ಮೇಲ್ ನೋಡದೇ ಅಧಿಕಾರಿಗಳನ್ನು ಬಾಯಿಗೆ ಬಂದಂತೆ ಬೈಯ್ಯುವುದನ್ನು ಮಮತಾ ಬ್ಯಾನರ್ಜಿ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮಮತಾ ಬ್ಯಾನರ್ಜಿಗೆ ನಂಬಿಕೆ ಇಲ್ಲ. ಹೆಸರಿಗೆ ಚುನಾವಣೆ ನಡೆಸಿ, ಅಧಿಕಾರವನ್ನು ತಾವೇ ಮಾಡಬೇಕೆಂಬ ಕಪಟತೆ ಮಮತಾ ಬ್ಯಾನರ್ಜಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದವರದ್ದಾಗಿದೆ ಎಂದು ಅವರು ದೂರಿದರು.ಕಳೆದ ಚುನಾವಣೆಯ ಬಳಿದ ಮಮತಾ ಬ್ಯಾನರ್ಜಿ ನಡೆದುಕೊಂಡ ರೀತಿ, ಜನರನ್ನು ಹೇಗೆಲ್ಲಾ ನಡೆಸಿಕೊಂಡರೆಂಬುದು ಎಲ್ಲರಿಗೂ ಗೊತ್ತಿದೆ. ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ತಮಿಳುನಾಡಿನಲ್ಲಿ ಎಐಡಿಎಂಕೆ- ಬಿಜೆಪಿ ಮೈತ್ರಿಗೆ ಒಳ್ಳೆಯ ಸಂಖ್ಯೆ ಬರಲಿದೆ. ಕೇರಳದಲ್ಲೂ ಉತ್ತಮ ಸಾಧನೆ ಮಾಡುತ್ತೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಕಾಂಗ್ರೆಸ್ ಪಕ್ಷ ಪಂಚ ರಾಜ್ಯಗಳಲ್ಲಿ ಎಲ್ಲಿಯೂ ಕಾಣುತ್ತಿಲ್ಲ. ಅಸ್ಸಾಂನಲ್ಲಿ ಕಾಂಗ್ರೆಸ್ ಪಕ್ಷ 20 ಸೀಟು ಬರಬಹುದು ಎಂಬ ಅಂದಾಜಿದೆ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ಸಿನ ಸ್ಥಿತಿ ಶೂನ್ಯವಾಗಿದೆ. ತಮಿಳುನಾಡಿನಲ್ಲಿ ಕಾಂಗ್ರೆಸ್ಸಿಗೆ 20-21 ಸ್ಥಾನ ದಕ್ಕಿದೆಯಷ್ಟೇ. ರಾಜ್ಯದ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆಯಲ್ಲೂ ಬಿಜೆಪಿ ಗೆಲ್ಲುವ ಸಂಪೂರ್ಣ ವಿಶ್ವಾಸ ನಮಗಿದೆ ಎಂದು ಪ್ರಹ್ಲಾದ ಜೋಶಿ ತಿಳಿಸಿದರು.- - -
(ಬಾಕ್ಸ್-2)* ವಾಣಿಜ್ಯ ಎಲ್‌ಪಿಜಿ ದರ ಕಂಪನಿ ಹೆಚ್ಚಿಸಿವೆ
- ತೈಲ, ಅನಿಲ ಇಲ್ಲದೇ ಅನೇಕ ದೇಶದಲ್ಲಿ ವರ್ಕ್ ಫ್ರಂ ಹೋಂ ಶುರುವಾಗಿದೆ ದಾವಣಗೆರೆ: ಹಾರ್ಮೋಜ್ ಜಲಸಂಧಿ ಮೂಲಕ ಬರಬೇಕಿದ್ದ ತೈಲ, ಗ್ಯಾಸ್ ಬರುವುದಕ್ಕೆ ಸಮಸ್ಯೆ ಆಗಿದ್ದರಿಂದ ಶೇ.50ರಷ್ಟು ಆಮದು ಡಿಫೆಂಡೆನ್ಸಿ ಇರುವುದರಿಂದ ಕಂಪನಿಗಳು ವಾಣಿಜ್ಯ ಬಳಕೆ ಸಿಲಿಂಡರ್ ದರ ಹೆಚ್ಚಿಸಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.ಅಡುಗೆ ಅನಿಲ ಸಿಲಿಂಡರ್ ದರ ಅಲ್ಲ, ವಾಣಿಜ್ಯ ಬಳಕೆ ಸಿಲಿಂಡರ್ ದರವನ್ನು ಕಂಪನಿಗಳು ಹೆಚ್ಚಿಸಿವೆ. ವಿಪಕ್ಷದವರ ಆರೋಪವನ್ನು ನಾನು ನೋಡಿಲ್ಲ. ವಾಣಿಜ್ಯ ಬಳಕೆಯ ಎಲ್‌ಪಿಜಿ ದರ ಹೆಚ್ಚಿಸುವುದನ್ನು ಕಂಪನಿ ನಿರ್ಣಯ ಮಾಡುತ್ತವೆ. ಎರಡು ಸಂಗತಿಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಇದೆಲ್ಲಾ ತೀರ್ಮಾನ ಲಿಬರೈಸ್ ಎಲ್ಲ ಹಂತದಲ್ಲೂ ಆಗಿದೆ. 2004ರಿಂದ 10ರವರೆಗೆ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಕಂಪನಿಗಳು ಫ್ರೀ ಅವಕಾಶ ನೀಡಿದ್ದಾರೆ. ಜಾಗತಿಕ ಸ್ಥಿತಿಗತಿಗಳ ಆಧಾರದಲ್ಲೂ ದರ ನಿರ್ಣಯ ಆಗುತ್ತದೆ ಎಂದು ಹೇಳಿದರು.
ಇವತ್ತಿನ ಪರಿಸ್ಥಿತಿಯಲ್ಲಿ ಜಾಗತಿಕ ಮಟ್ಟದಲ್ಲಿ ಸಂಪೂರ್ಣ ವಿದೇಶದಿಂದ ಬರುವಾಗ ಸಾಕಷ್ಟು ದೊಡ್ಡ ಸಮಸ್ಯೆಯಾಗುತ್ತಿದೆ. ಅನೇಕ ದೇಶಗಳಲ್ಲಿ ತೈಲ, ಅನಿಲ ಯಾವುದೇ ಇಲ್ಲವೇ ಇಲ್ಲ. ಹಲವಾರು ರಾಷ್ಟ್ರಗಳಲ್ಲಿ ಪೆಟ್ರೋಲ್, ಡೀಸೆಲ್ ಯಾವುದೂ ಸಿಗುತ್ತಿಲ್ಲ. ಹಲವಾರು ರಾಷ್ಟ್ರಗಳಲ್ಲಿ ವರ್ಕ್ ಫ್ರಂ ಹೋಂ ನಡೆದಿದೆ. ಪಾಕಿಸ್ತಾನದಂತಹ ದರಿದ್ರ ದೇಶಗಳಲ್ಲಿ ಚಟುವಟಿಕೆಗಳೇ ಬಂದ್ ಆಗಿವೆ. ಭಾರತದಲ್ಲಿ ಅಂತಹ ಸ್ಥಿತಿ ಇಲ್ಲ ಎಂದು ತಿಳಿಸಿದರು.ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು ಆಯಾ ಕಂಪನಿಗಲು ಹೆಚ್ಚಿಸಿದ್ದು, ಗೃಹ ಬಳಕೆ ಸಿಲಿಂಡರ್ ದರ ಹೆಚ್ಚಾಗಿಲ್ಲ. ಮಧ್ಯ ಪ್ರಾಚ್ಯದ ಯುದ್ಧದಿಂದಾಗಿ ಹಾರ್ಮೋಜ್ ಜಲಸಂಧಿ ಮೂಲಕ ಬರಬೇಕಾಗಿದ್ದ ತೈಲ, ಅನಿಲ ಬರಲು ಸಮಸ್ಯೆಯಾಗಿದ್ದು, ಶೇ.50ರಷ್ಟು ಆಮದು ಡಿಫೆಂಡೆನ್ಸಿ ಇರುವ ಕಾರಣಕ್ಕಾಗಿ ಕಂಪನಿಗಳು ವಾಣಿಜ್ಯ ಬಳಕೆ ಸಿಲಿಂಡರ್ ದರ ಹೆಚ್ಚಿಸಿವೆ. ಜಾಗತಿಕ ಮಟ್ಟದಲ್ಲಿ ದರ ಕಡಿಮೆಯಾಗುತ್ತಿದ್ದಂತೆಯೇ ಮತ್ತೆ ಕಡಿಮೆ ಮಾಡುತ್ತವೆ ಎಂದು ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದರು.
- - -(ಸಾಂದರ್ಭಿಕ ಚಿತ್ರ)