ಸಾರಾಂಶ
ಕಲಬುರಗಿ : ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಡಾ.ಮಲ್ಲಿಕಾರ್ಜುನ ಖರ್ಗೆಯವರ ಅಳಿಯ ರಾಧಾಕೃಷ್ಣ ರಾಜೇಂದ್ರಪ್ಪ ದೊಡ್ಮನಿ ಅವರ ಒಟ್ಟು ಆಸ್ತಿಯ ಮೌಲ್ಯ 53.15 ಕೋಟಿ ರು.
ಈ ಪೈಕಿ, ಅವರ ಪತ್ನಿ ಡಾ. ಜಯಶ್ರೀ ಹೆಸರಲ್ಲಿರುವ ಆಸ್ತಿ ಮೌಲ್ಯ 13.3 ಕೋಟಿ, ಅವಿಭಕ್ತ ಕುಟುಂಬದ ಹೆಸರಲ್ಲಿ ರಾಧಾಕೃಷ್ಣ ಅವರ ಹತ್ತಿರವಿರುವ ಒಟ್ಟು ಆಸ್ತಿ 10.85 ಕೋಟಿ. ಇವರ ಬಳಿ ಇನ್ನೋವಾ ಮತ್ತು ಮಹೀಂದ್ರಾ ಕಾರುಗಳಿವೆ. ಕಲಬುರಗಿ ಜಿಲ್ಲೆಯ ಗುಂಡಗುರ್ತಿ ಹಾಗೂ ಕನಕಪುರದ ಸಾತನೂರು ಹೋಬಳಿಯಲ್ಲಿ 2.3 ಕೋಟಿ ರು.ಮೌಲ್ಯದ ಕೃಷಿ ಭೂಮಿ ಹಾಗೂ ಕಲಬುರಗಿಯ ಕಸನೂರು, ಕಲಬುರಗಿ ಮತ್ತು ಬೆಂಗಳೂರಲ್ಲಿ 16.32 ಕೋಟಿ ರು.ಮೌಲ್ಯದ ಕೃಷಿಯೇತರ ಮಳಿಗೆ, ಮುಂಗಟ್ಟುಗಳು, ನಿವೇಶನಗಳನ್ನು ಹೊಂದಿದ್ದಾರೆ. ಇವರ ಪತ್ನಿ ಬೆಂಗಳೂರಿನ ರಾಚೇನಹಳ್ಳಿ, ಸದಾಶಿವನಗರದಲ್ಲಿ 4.65 ಕೋಟಿ ರು.ಮೊತ್ತದ ಕೃಷಿಯೇತರ ನಿವೇಶನ, ವಸಂತ ನಗರ ಹಾಗೂ ಸದಾಶಿವ ನಗರದಲ್ಲಿ 5.47 ಕೋಟಿ ರು ಮೌಲ್ಯದ ಮನೆಗಳನ್ನು ಹೊಂದಿದ್ದಾರೆ.
ಇನ್ನು, ರಾಧಾಕೃಷ್ಣ ಅವರು 4.18 ಕೋಟಿ ರು. ಹಾಗೂ ಇವರ ಪತ್ನಿ 52.83 ಲಕ್ಷ ರು. ಸಾಲ ಮಾಡಿದ್ದಾರೆ.ಈಶ್ವರಪ್ಪ 33 ಕೋಟಿಯ ಒಡೆಯ:
ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಒಟ್ಟು ಆಸ್ತಿ 33.50 ಕೋಟಿ ರು. ಈ ಪೈಕಿ 8.5 ಕೋಟಿ ರು.ಚರಾಸ್ತಿ, 25.45 ಕೋಟಿ ರು.ಸ್ಥಿರಾಸ್ಥಿ.
ಅವರ, ಅವರ ಪತ್ನಿ ಜಯಲಕ್ಷೀ ಬಳಿ ಯಾವುದೇ ವಾಹನವಿಲ್ಲ. ಈಶ್ವರಪ್ಪನವರು 6.57 ಕೋಟಿ ರು. ಸಾಲ ಮಾಡಿದ್ದಾರೆ, ಜೊತೆಗೆ, ಹೆಂಡತಿಗೆ 15 ಲಕ್ಷ ರು. ಸಾಲ ನೀಡಿದ್ದಾರೆ. ತಮ್ಮ ಮೇಲಿದ್ದ ಎಲ್ಲಾ 5 ಮೊಕದ್ದಮೆಗಳಿಂದ ಖುಲಾಸೆಗೊಂಡಿದ್ದಾರೆ. ಈಶ್ವರಪ್ಪನವರ ಬಳಿ 22.35 ಕೋಟಿ ರು.ಮತ್ತು ಪತ್ನಿ ಜಯಲಕ್ಷ್ಮಿ ಅವರ ಹೆಸರಿನಲ್ಲಿ 3.10 ಕೋಟಿ ರು ಸೇರಿದಂತೆ ಒಟ್ಟು 25.45 ಕೋಟಿ ರು.ಮೌಲ್ಯದ ಕೃಷಿ ಮತ್ತು ವಾಣಿಜ್ಯ ಭೂಮಿ ಇದೆ.
ಶ್ರೀರಾಮುಲು ಆಸ್ತಿ 85 ಕೋಟಿ:
ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿರುವ ಮಾಜಿ ಸಚಿವ ಬಿ.ಶ್ರೀರಾಮುಲು ಒಟ್ಟು 85.40 ಕೋಟಿ ಆಸ್ತಿಗೆ ಒಡೆಯರಾಗಿದ್ದಾರೆ. ಈ ಪೈಕಿ, 75 ಕೋಟಿ ಸ್ಥಿರಾಸ್ತಿ ಮತ್ತು 10.40 ಕೋಟಿ ಚರಾಸ್ತಿ. ಜೊತೆಗೆ, 6.69 ಕೋಟಿ ಸಾಲ ಮಾಡಿಕೊಂಡಿದ್ದಾರೆ.₹1.20 ಕೋಟಿ ಮೌಲ್ಯದ ಬಿಎಂಡಬ್ಲ್ಯು, ₹38.81 ಲಕ್ಷ ಮೌಲ್ಯದ ಬಸ್., ₹30 ಲಕ್ಷ ಮೌಲ್ಯದ ಇನೋವಾ ಕಾರನ್ನು ಹೊಂದಿದ್ದಾರೆ. ಇನ್ನು, ಇವರ ವಿರುದ್ಧ ಭೂ ಕಬಳಿಕೆಗೆ ಸಂಬಂಧಿಸಿದಂತೆ ಬೆಂಗಳೂರಿನ ವಿಶೇಷ ಕೋರ್ಟ್‌ನಲ್ಲಿ, ಅಕ್ರಮ ಆಸ್ತಿ ಪಡೆದ ಬಗ್ಗೆ ಬಳ್ಳಾರಿ ಲೋಕಾಯುಕ್ತದಲ್ಲಿ, ತೆರಿಗೆ ವಂಚನೆ ಕುರಿತು ಬೆಂಗಳೂರಿನಲ್ಲಿ, ಎನ್‌ಎಂಡಿ ಆಕ್ಟ್-2005 ಅಡಿ ಚೆಳ್ಳಿಕೆರೆಯಲ್ಲಿ ಸೇರಿ ಒಟ್ಟು ಐದು ಪ್ರಕರಣಗಳಿವೆ.ಕೈ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಆಸ್ತಿ ₹44.53 ಕೋಟಿ:
ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ, ಎಸ್.ಎಸ್. ಕೇರ್ ಟ್ರಸ್ಟ್‌ನ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ₹44.53 ಕೋಟಿ ಆಸ್ತಿಗೆ ಒಡತಿ. ಜೊತೆಗೆ, ₹97.28 ಲಕ್ಷ ಸಾಲ ಕೂಡ ಮಾಡಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ, ಹಿರಿಯ ಕೈಗಾರಿಕೋದ್ಯಮಿ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ ಆಗಿರುವ ಡಾ.ಪ್ರಭಾ ಬಳಿ ಒಟ್ಟು ₹1.80 ಕೋಟಿ ಮೌಲ್ಯದ ಚಿನ್ನಾಭರಣ, 5.976 ಗ್ರಾಂ ಇತರ ಆಭರಣಗಳಿವೆ. ಆದರೆ, ಬೆಳ್ಳಿ ಆಭರಣ ಇಲ್ಲ. ₹1.54 ಕೋಟಿ ಮೌಲ್ಯದ 47.11 ಎಕರೆ ಕೃಷಿ ಭೂಮಿ, ₹16.1 ಲಕ್ಷ ಮೌಲ್ಯದ 11,050 ಚದರಡಿ ಕೃಷಿಯೇತರ ಭೂಮಿ, 34,484 ಚದರಡಿ ಮನೆ ಹಾಗೂ 2,500 ಚದರ ಅಡಿ ಬಿಲ್ಡ್ ಏರಿಯಾಗೆ ಒಡತಿಯಾಗಿದ್ದಾರೆ.ಕಾಗೇರಿ ಬಳಿಯಿದೆ ₹10.23 ಕೋಟಿ ಆಸ್ತಿ
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು ₹10.23 ಕೋಟಿಗೆ ಒಡೆಯರಾಗಿದ್ದಾರೆ. ಇವರ ಹೆಸರಿನಲ್ಲಿ ಯಾವುದೇ ಕೃಷಿ ಭೂಮಿ ಇಲ್ಲ.
ಹೆಗಡೆಯವರ ಬಳಿ ₹5.78 ಕೋಟಿ, ಅವಿಭಕ್ತ ಕುಟುಂಬದ ಸದಸ್ಯರ ಬಳಿ ₹3.48 ಕೋಟಿ ಮೌಲ್ಯದ ಆಸ್ತಿಯಿದೆ. ಉಳಿದಂತೆ ಪತ್ನಿ ಭಾರತಿಯವರ ಬಳಿ ₹79.32 ಲಕ್ಷ, ಮಕ್ಕಳಾದ ರಾಜಲಕ್ಷ್ಮೀ ಬಳಿ ₹12.54 ಲಕ್ಷ, ಶ್ರೀಲಕ್ಷ್ಮೀ ಬಳಿ ₹4.90 ಲಕ್ಷ ಮೌಲ್ಯದ ಆಸ್ತಿಗಳಿವೆ.