ಸಾರಾಂಶ
ಗದಗ: ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಮೂವರು ಕುಖ್ಯಾತ ಕಳ್ಳರನ್ನು ಲಕ್ಷ್ಮೇಶ್ವರ ಪೊಲೀಸರು ಬಂಧಿಸಿದ್ದು, ಅವರಿಂದ ₹46 ಲಕ್ಷ ಮೌಲ್ಯದ ದೇವರ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೈಲಿನಲ್ಲಿ ಪರಿಚಯವಾಗಿದ್ದ ಕಳ್ಳರನ್ನೇ ಬಳಸಿಕೊಂಡು ದೇವಾಲಯಗಳಲ್ಲಿ ಕಳ್ಳತನ ಮಾಡಿಸಿ ಅಮಾನತ್ತಾದ ಜೈಲು ವಾರ್ಡನ್ ಈ ಕೃತ್ಯದ ಪ್ರಮುಖ ಆರೋಪಿಯಾಗಿರುವುದು ವಿಶೇಷ.
ಈ ತಂಡದ ಬಂಧನದಿಂದ ಮುಂದೆ ಆಗಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕಳ್ಳರ ಗ್ಯಾಂಗ್‌ನ ನಡುವೆ ಕದ್ದ ಆಭರಣ, ಹಣ ಹಂಚಿಕೊಳ್ಳುವ ವಿಚಾರಕ್ಕೆಮನಸ್ತಾಪವಾಗಿ ತಮ್ಮದೇ ಗ್ಯಾಂಗಿನ ವ್ಯಕ್ತಿಯನ್ನು ಹತ್ಯೆಗೈದಿದ್ದೂ ಸಹ ಇದೇ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.ಗದಗ, ಹಾವೇರಿ, ವಿಜಯನಗರ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಯಲ್ಲಿನ ಪ್ರಮುಖ ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಈ ಗ್ಯಾಂಗ್‌ಗೆ ಬಂಧಿಖಾನೆ ಇಲಾಖೆಯ ಅಮಾನತ್ತಾಗಿರುವ ನೌಕರ ಶ್ರೀಕಾಂತನೇ ಲೀಡರ್ ಎನ್ನಲಾಗಿದೆ. ಆತನ ಸಹಚರರಾದ ಪ್ರಸಾದ ಸಿಳ್ಳಿಕೇತರ, ಗುರುಪ್ರಸಾದ ಸಿಳ್ಳಿಕೇತರ ಸಹ ಬಂಧನಕ್ಕೊಳಗಾಗಿದ್ದಾರೆ.
ಅಂಬಾಭವಾನಿ ದೇವಸ್ಥಾನ, ಹೇಮಗಿರಿ ಮಠ ಬನ್ನಿಕೊಪ್ಪ, ದುರ್ಗಾದೇವಿ ಹಾಗೂ ಮಾರುತಿ ದೇವಸ್ಥಾನ, ಹೇಮಗಿರಿ ಚನ್ನಬಸವೇಶ್ವರ ಮಠ ಗುತ್ತಲ ಗ್ರಾಮ, ಬನಶಂಕರಿ ದೇವಸ್ಥಾನ ತುಮ್ಮಿನಕಟ್ಟಿ, ಗ್ರಾಮದೇವತೆ ದೇವಸ್ಥಾನ ನೀರಲಗಿ, ಬನಶಂಕರಿ ದೇವಸ್ಥಾನ ತುಮ್ಮಿನಕಟ್ಟೆ, ಹಾಲು ಹಾಲುರಾಮೇಶ್ವರ, ಗಂಗಮ್ಮ ದೇವಸ್ಥಾನ ಗೂಳಿಹೊಸಳ್ಳಿ ಸೇರಿದಂತೆ ಗದಗ, ಹಾವೇರಿ, ವಿಜಯನಗರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಹಲವಾರು ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದು ತನಿಖೆಯ ವೇಳೆಯಲ್ಲಿ ಬಳಕಿಗೆ ಬಂದಿದೆ.ಲಕ್ಷ್ಮೇಶ್ವರ, ಶಿಗ್ಲಿ ಗ್ರಾಮ, ಗದಗ ಶಹರ, ವಿಜಯನಗರ ಜಿಲ್ಲೆಯ ಕೊಟ್ಟೂರು, ಹರಪನಹಳ್ಳಿ, ಶಿವಮೊಗ್ಗ ಜಿಲ್ಲೆಯ ಆನವಟ್ಟಿ, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಗಳಲ್ಲಿಯೂ ವ್ಯಾಪಕ ಸರಗಳ್ಳತನ ಪ್ರಕರಣಗಳಲ್ಲಿ ಈ ಮೂರು ಜನ ಆರೋಪಿಗಳು ಭಾಗಿಯಾಗಿದ್ದಾರೆ ಎನ್ನುವುದು ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪ್ರಕರಣವೊಂದರಲ್ಲಿ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿದ ವೇಳೆಯಲ್ಲಿ ಕಿರಾತಕ ಕಳ್ಳರ ಕೃತ್ಯಗಳು ಬಯಲಿಗೆ ಬಂದಿವೆ.
ಕೊಲೆ ಮಾಡಿ ಹೂತುಹಾಕಿದರು:ಹಲವಾರು ಜಿಲ್ಲೆಗಳಲ್ಲಿ ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಈ ಖರ್ತನಾಕ್ ಗ್ಯಾಂಗ್ ಕಳ್ಳತನ ಮಾಡಿದ ವಸ್ತುಗಳನ್ನು ಹಂಚಿಕೊಳ್ಳುವ ವಿಷಯದಲ್ಲಿ ತೀವ್ರ ಗಲಾಟೆ ಮಾಡಿಕೊಂಡು, ಕಳ್ಳತನ ಮಾಡಿದ ವಿಷಯ ಹೊರಗಡೆ ಹೇಳುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ ರಮೇಶ ಎನ್ನುವ ವ್ಯಕ್ತಿಯನ್ನೇ ಕೊಲೆ ಮಾಡಿ ಹೂತು ಹಾಕಿರುವ ಪ್ರಕರಣವೂ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಅದರ ಬಗ್ಗೆ ಮತ್ತಷ್ಟು ತನಿಖೆ ತೀವ್ರಗೊಳ್ಳಬೇಕಿದೆ.
₹46 ಲಕ್ಷದ ವಸ್ತುಗಳ ವಶ: ಒಟ್ಟು 15 ವಿವಿಧ ಪ್ರಕರಣಗಳನ್ನು ಬೇಧಿಸಿರುವ ಗದಗ ಮತ್ತು ಲಕ್ಷ್ಮೇಶ್ವರ ಪೊಲೀಸರು 3 ಜನ ಆರೋಪಿಗಳಿಂದ ₹46 ಲಕ್ಷ ಮೌಲ್ಯದ ದೇವರ ಆಭರಣ ಹಾಗೂ ನಗದು, ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದ್ದು, ಲಕ್ಷ್ಮೇಶ್ವರ ಪೊಲೀಸರ ಈ ಭರ್ಜರಿ ಕಾರ್ಯಕ್ಕೆ ಗದಗ ಪ್ರಭಾರ ಎಸ್ಪಿ ಅಮರನಾಥ ರೆಡ್ಡಿ, ಹೆಚ್ಚುವರಿ ಎಸ್ಪಿ ಎಂ.ಬಿ. ಸಂಕದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.ಈ ಕಾರ್ಯಾಚರಣೆಯಲ್ಲಿ ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್ಐ ಈರಪ್ಪ ರಿತ್ತಿ, ಎಎಸ್ಐ ಎನ್.ಎ. ಮೌಲ್ವಿ, ಮಾರುತಿ ಜೋಗದಂಡರ ಹಾಗೂ ಅವರ ಸಿಬ್ಬಂದಿ ಭಾಗವಹಿಸಿದ್ದರು.