ಡಿ.೫ರಿಂದ ನಗರದಲ್ಲಿ ಖಾತಾ ಆಂದೋಲನ: ಸಿಪಿ ಯೋಗೇಶ್ವರ್

| Published : Nov 26 2024, 12:47 AM IST

ಸಾರಾಂಶ

ನಗರ ಪ್ರದೇಶದಲ್ಲಿ ನಡೆದಿರುವ ಕಾಮಗಾರಿಗಳು ಕಳೆಪೆಯಾಗಿವೆ. ಕಾಮಗಾರಿಗೆ ಅನುಮೋದನೆ ನೀಡುವಾಗ ನಗರಸಭೆ ಸದಸ್ಯರನ್ನು ಅಧಿಕಾರಿಗಳು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಕಾಮಗಾರಿಗಳನ್ನು ಸರಿಯಾಗಿ ಪರಿಶೀಲನೆ ಮಾಡದೇ ಬಿಲ್ ಪಾಸ್ ಮಾಡಲಾಗುತ್ತಿದೆ. ನಗರಸಭೆ ಸದಸ್ಯರ ಕುರಿತು ಅಧಿಕಾರಿಗಳಿಗೆ ಗೌರವವಿಲ್ಲ. ನಮ್ಮ ಕರೆಯನ್ನು ಸ್ವೀಕರಿಸುವುದಿಲ್ಲ.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ನಗರ ಪ್ರದೇಶದಲ್ಲಿನ ಖಾತೆ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಡಿ.೫ರಿಂದ ನಗರ ವ್ಯಾಪ್ತಿಯಲ್ಲಿ ಖಾತಾ ಆಂದೋಲನ ನಡೆಸಲಾಗುವುದು. ಇದಕ್ಕೆ ನಗರಸಭೆ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ನೂತನ ಶಾಸಕ ಸಿ.ಪಿ.ಯೋಗೇಶ್ವರ್ ಸೂಚಿಸಿದರು.

ಪಟ್ಟಣದ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಡಿ.೫ರಂದು ಒಂದನೇ ವಾರ್ಡ್‌ನಿಂದ ಖಾತಾ ಆಂದೋಲನಕ್ಕೆ ಚಾಲನೆ ನೀಡಲಾಗುವುದು. ಪ್ರತಿ ದಿನ ಒಂದೊಂದು ವಾರ್ಡ್‌ನಂತೆ ಖಾತಾ ಆಂದೋಲನ ನಡೆಸಲಾಗುವುದು ಎಂದರು.

ಶನಿವಾರ ಭಾನುವಾರ ಹೊರತುಪಡಿಸಿ ವಾರದ ಐದು ದಿನ ಖಾತಾ ಆಂದೋಲನ ನಡೆಸಲಾಗುವುದು. ಒಂದು ದಿನ ಒಂದನೇ ವಾರ್ಡ್ ಮರುದಿನ ೩೧ನೇ ವಾರ್ಡ್ ಎಂಬ ರೀತಿಯಲ್ಲಿ ಖಾತಾ ಆಂದೋಲನಕ್ಕೆ ಸಿದ್ಧತೆ ಮಾಡಿಕೊಳ್ಳಿ. ಎರಡು ತಿಂಗಳ ಒಳಗೆ ಖಾತಾ ಆಂದೋಲನ ಪೂರ್ಣಗೊಳಿಸಲಾಗುವುದು ಎಂದರು.

ಸಮಸ್ಯೆ ಪಟ್ಟಿ ಮಾಡಿ: ನಗರ ವ್ಯಾಪ್ತಿಯಲ್ಲಿ ಇರುವ ರಸ್ತೆ, ಚರಂಡಿ, ಯುಜಿಡಿ ಸೇರಿದಂತೆ ಮೂಲಭೂತ ಸಮಸ್ಯೆಗಳ ಬಗ್ಗೆ ಪಟ್ಟಿಮಾಡಿ ಆದ್ಯತೆ ಮೇರೆಗೆ ಎಲ್ಲವನ್ನೂ ಸರಿಪಡಿಸುವ ಕೆಲಸ ಮಾಡೋಣ. ಹಿಂದಿನ ಆರು ವರ್ಷಗಳಲ್ಲಿ ಪಟ್ಟಣದಲ್ಲಿ ಯಾವುದೇ ಕೆಲಸ ಆಗಿಲ್ಲ, ಅಭಿವೃದ್ಧಿ ರಥ ನಿಂತಲ್ಲಿಯೇ ಪಂಕ್ಚರ್ ಆಗಿ ನಿಂತಿದೆ. ಹಾಳಾಗಿರುವ ನಗರವನ್ನು ಸರಿಪಡಿಸುವ ಕೆಲಸ ಮಾಡೋಣ. ಇದಕ್ಕೆ ಸದಸ್ಯರು ಸಹ ಕೈಜೋಡಿಸಬೇಕು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಚನ್ನಪಟ್ಟಣ ನಗರಸಭೆಯಲ್ಲಿಯೂ ನಮ್ಮದೇ ಮೆಜಾರಿಟಿ ಇದೆ. ನಗರದ ಅಭಿವೃದ್ಧಿಗೆ ಅಗತ್ಯವಾಗಿರುವ ಅನುದಾನವನ್ನು ನಾನು ತರುತ್ತೇನೆ. ಎಲ್ಲರೂ ಸೇರಿ ನಗರವನ್ನು ಅಭಿವೃದ್ಧಿಪಡಿಸೋಣ ಎಂದರು.

ಯುಜಿಡಿಗೆ ೩೦೦ ಕೋಟಿ ಬೇಕು:

ಪಟ್ಟಣದಲ್ಲಿರುವ ಯುಜಿಡಿ ಸಮಸ್ಯೆ ಪರಿಹಾರವಾಗಲು ಸುಮಾರು ೨೦೦ ರಿಂದ ೩೦೦ ಕೋಟಿ ರು. ಅನುದಾನದ ಅವಶ್ಯಕತೆ ಇದೆ, ಈ ಹಿಂದೆ ಮಾಡಿರುವ ಕೆಲಸ ಪ್ರಯೋಜನವಿಲ್ಲ, ಅಂದಿನ ಜನಸಂಖ್ಯೆ ಆಧಾರದಲ್ಲಿ ಆಗ ಯೋಜನೆ ರೂಪಿಸಲಾಗಿತ್ತು. ಈಗ ನಗರ ಬೆಳೆದಿದ್ದು, ಜನಸಂಖ್ಯೆ ಸಹ ಬೆಳೆದಿದೆ. ಇದನ್ನು ಆಧರಿಸಿ ಈಗ ಹೊಸದಾಗಿಯೇ ಯೋಜನೆ ಮಾಡಬೇಕಿದೆ. ಹಾಗಾಗಿ ಹೊಸ ಯೋಜನೆ ತಯಾರಿಸಿ ಅದಕ್ಕೆ ಅನುದಾನ ತರುತ್ತೇನೆ ಎಂದು ಭರವಸೆ ನೀಡಿದರು.

ಇದೇ ವೇಳೆ ನೂತನ ಶಾಸಕ ಸಿ.ಪಿ.ಯೋಗೇಶ್ವರ್ ಅವರನ್ನು ನಗರಸಭೆಯಿಂದ ಸನ್ಮಾನಿಸಲಾಯಿತು.

ಪೌರಾಯುಕ್ತ ಮಹೇಂದ್ರ, ನಗರಸಭೆ ಮಾಜಿ ಅಧ್ಯಕ್ಷ ಪ್ರಶಾಂತ್, ಸದಸ್ಯರಾದ ವಾಸೀಲ್ ಅಲಿಖಾನ್, ಕೋಟೆ ಚಂದ್ರು, ಶ್ರೀನಿವಾಸ್ ಮೂರ್ತಿ, ರಫೀಕ್, ಜಯಮಾಲ, ಸುಮಾರವೀಶ್, ಮಂಗಳಮ್ಮ ಮುಂತಾದವರು ಉಪಸ್ಥಿತರಿದ್ದರು.

ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ ಸದಸ್ಯರು:

ನಗರ ಪ್ರದೇಶದಲ್ಲಿನ ಕುಡಿಯುವ ನೀರಿನ ಸಮಸ್ಯೆ, ಯುಜಿಡಿ ಸಮಸ್ಯೆ, ರಸ್ತೆ, ಚರಂಡಿ ಸೇರಿ ಇನ್ನಿತರ ಸಮಸ್ಯೆಗಳ ಕುರಿತು ಇದೇ ವೇಳೆ ನಗರಸಭೆ ಸದಸ್ಯರು ನೂತನ ಶಾಸಕರ ಗಮನ ಸೆಳೆದರು.

ನಗರ ಪ್ರದೇಶದಲ್ಲಿ ನಡೆದಿರುವ ಕಾಮಗಾರಿಗಳು ಕಳೆಪೆಯಾಗಿವೆ. ಕಾಮಗಾರಿಗೆ ಅನುಮೋದನೆ ನೀಡುವಾಗ ನಗರಸಭೆ ಸದಸ್ಯರನ್ನು ಅಧಿಕಾರಿಗಳು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಕಾಮಗಾರಿಗಳನ್ನು ಸರಿಯಾಗಿ ಪರಿಶೀಲನೆ ಮಾಡದೇ ಬಿಲ್ ಪಾಸ್ ಮಾಡಲಾಗುತ್ತಿದೆ. ನಗರಸಭೆ ಸದಸ್ಯರ ಕುರಿತು ಅಧಿಕಾರಿಗಳಿಗೆ ಗೌರವವಿಲ್ಲ. ನಮ್ಮ ಕರೆಯನ್ನು ಸ್ವೀಕರಿಸುವುದಿಲ್ಲ ಎಂದು ಆರೋಪಿಸಿದರು.

ನಗರದಲ್ಲಿ ಕಸದ ಸಮಸ್ಯೆ ಸೇರಿದಂತೆ ಸಾಕಷ್ಟು ಸಮಸ್ಯೆ ಇದೆ. ಏನೇ ಕೇಳಿದರೂ ಸಿಬ್ಬಂದಿ ಕೊರತೆ ಇದೆ ಎನ್ನುತ್ತಾರೆ. ನಗರಸಭೆಯಲ್ಲಿ ಎಂಜಿನಿಯರ್‌ಗಳು, ಆರೋಗ್ಯ ಇಲಾಖೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊರತೆ ಇದೆ, ಇದನ್ನು ಸರಿಪಡಿಸುವಂತೆ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಯೋಗೇಶ್ವರ್, ನಗರಸಭೆಯಲ್ಲಿ ಇರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕೊರತೆಯನ್ನು ಪಟ್ಟಿಮಾಡಿಕೊಡಿ. ಅದೇ ರೀತಿ ಆಗಬೇಕಾಗಿರುವ ಕೆಲಸಗಳನ್ನು ಪಟ್ಟಿ ಮಾಡಿಕೊಡಿ. ನಾಳೆಯೇ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ಸಂಬಂಧಿಸಿದ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಚರ್ಚಿಸಿ ಸಿಬ್ಬಂದಿ ಕೊರತೆ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಸರಿಪಡಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.