ಕೆಎಚ್‌ಪಿ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ 10ರ ಸಂಭ್ರಮ

| Published : Jul 20 2025, 01:18 AM IST

ಕೆಎಚ್‌ಪಿ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ 10ರ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ಜಿಲ್ಲೆ ಸೇರಿದಂತೆ ಅಕ್ಕ-ಪಕ್ಕದ ಜಿಲ್ಲೆಗಳಿಗೆ ಆರೋಗ್ಯ ಸಂಜೀವಿನಿಯಾಗಿರುವ ಕೆ.ಎಚ್. ಪಾಟೀಲ (ಗದಗ) ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಶೈಕ್ಷಣಿಕ ವರ್ಷ ಪ್ರಾರಂಭವಾಗಿ 10 ವರ್ಷ ತುಂಬಿದೆ.

ಶಿವಕುಮಾರ ಕುಷ್ಟಗಿ

ಗದಗ: ಗದಗ ಜಿಲ್ಲೆ ಸೇರಿದಂತೆ ಅಕ್ಕ-ಪಕ್ಕದ ಜಿಲ್ಲೆಗಳಿಗೆ ಆರೋಗ್ಯ ಸಂಜೀವಿನಿಯಾಗಿರುವ ಕೆ.ಎಚ್. ಪಾಟೀಲ (ಗದಗ) ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಶೈಕ್ಷಣಿಕ ವರ್ಷ ಪ್ರಾರಂಭವಾಗಿ 10 ವರ್ಷ ತುಂಬಿದೆ.

ಈ ದಶಮಾನೋತ್ಸವ ಪ್ರಯುಕ್ತ "ಉತ್ತಮ” ಎಂಬಿಬಿಎಸ್ ಬ್ಯಾಚಿನ ವಿದ್ಯಾರ್ಥಿಗಳಿಂದ ಶಾಲಾ ಮಕ್ಕಳಲ್ಲಿ ವೈದ್ಯಕೀಯ ವಿಜ್ಞಾನದ ತಿಳಿವಳಿಕೆ ಮೂಡಿಸಲು ಹಾಗೂ ಆರೋಗ್ಯದ ಬಗ್ಗೆ ಅರಿವು ಮೂಡಿಸಲು “ಮೆಡಿವಿಜನ್-2025” ವೈದ್ಯಕೀಯ ವಿಜ್ಞಾನ ವಸ್ತು ಪ್ರದರ್ಶನವನ್ನು ಜು. 21ರಿಂದ 23ರ ವರೆಗೆ ಬೆಳಗ್ಗೆ 9 ರಿಂದ ಸಂಜೆ 5ರ ವರೆಗೆ ಹಮ್ಮಿಕೊಳ್ಳಲಾಗಿದೆ.

ಶಾಲಾ ಮಕ್ಕಳಿಗೆ ಆದ್ಯತೆ: “ಮೆಡಿವಿಜನ್-2025” ವೈದ್ಯಕೀಯ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಆದ್ಯತೆ ನೀಡಲಾಗುತ್ತಿದ್ದು, ಗದಗ ಜಿಲ್ಲೆ ಸೇರಿದಂತೆ ಅಕ್ಕ-ಪಕ್ಕದ ಜಿಲ್ಲೆಯೇ 6-10ನೇ ತರಗತಿಯ ಶಾಲಾ ಮಕ್ಕಳು ಹಾಗೂ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳು ಉಚಿತವಾಗಿ ಭಾಗವಹಿಸಬಹುದಾಗಿದೆ. ಈಗಾಗಲೇ 114 ಶಾಲೆಗಳ 20 ಸಾವಿರ ವಿದ್ಯಾರ್ಥಿಗಳು ನೋಂದಣಿಯಾಗಿದ್ದು, ಸಾರ್ವಜನಿಕರು ಸಹ ಭಾಗವಹಿಸಬಹುದಾಗಿದೆ,ಕಾರ್ಯಕ್ರಮವನ್ನು ಜು. 21ರಂದು ಬೆಳಗ್ಗೆ 9.30ಕ್ಕೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ.ಪಾಟೀಲ ಅವರು ಉದ್ಘಾಟಿಸಲಿದ್ದು, ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಸ್ವಾಯುತ್ತ ಸಂಸ್ಥೆಯಾಗಿರುವ ಕೆ.ಎಚ್. ಪಾಟೀಲ (ಗದಗ) ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಈಗಾಗಲೇ 5 ಎಂ.ಬಿ.ಬಿ.ಎಸ್ ಬ್ಯಾಚಿನ ವಿದ್ಯಾರ್ಥಿಗಳು ಹಾಗೂ 2 ಸ್ನಾತಕೋತ್ತರ ವಿದ್ಯಾರ್ಥಿಗಳು ಪದವಿಯನ್ನು ಪಡೆದಿದ್ದು, ಇಲ್ಲಿ ಅನೇಕ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಬಂಗಾರದ ಪದಕಕ್ಕೆ ಭಾಜನರಾಗಿದ್ದಾರೆ.

ಆಸ್ಪತ್ರೆಯಲ್ಲಿ ಕಳೆದ 10 ವರ್ಷಗಳಲ್ಲಿ ಒಟ್ಟು 36.14 ಲಕ್ಷ ಹೊರರೋಗಿಗಳು, 4.52 ಲಕ್ಷ ಒಳರೋಗಿಗಳು, 51700 ಸಾವಿರ ಮೇಜರ್‌ ಶಸ್ತ್ರ ಚಿಕಿತ್ಸೆಗಳು, 1.18 ಲಕ್ಷ ಮೈನರ್ ಶಸ್ತ್ರ ಚಿಕಿತ್ಸೆಗಳು, 56800 ಸಾವಿರ ಹೆರಿಗೆ ಮತ್ತು ಚಿಕಿತ್ಸೆ ಪಡೆದಿದ್ದಾರೆ.

ಸಂಸ್ಥೆಯಲ್ಲಿ 12 ಶಸ್ತ್ರಚಿಕಿತ್ಸಾ ಕೊಠಡಿಗಳು, 50 ಐಸಿಯು ಹಾಸಿಗೆಗಳು, 35 ತುರ್ತು ಹಾಸಿಗೆಗಳು ಮತ್ತು 450 ಸಾಮಾನ್ಯ ಹಾಸಿಗೆಗಳನ್ನು ಹೊಂದಿದ ಆಸ್ಪತ್ರೆ ಸಾರ್ವಜನಿಕ ಸೇವೆಗೆ ಲಭ್ಯವಿದ್ದು, 350 ಹಾಸಿಗೆಗಳ ಹಳೆಯ ಆಸ್ಪತ್ರೆಯೊಂದಿಗೆ ಜನತೆಗೆ ಉತ್ತಮ ಸೇವೆಯನ್ನು ನೀಡುತ್ತಿದೆ.

ಸಂಸ್ಥೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ ಪಾಟೀಲ ಅವರ ವಿಶೇಷ ಕಾಳಜಿಯಿಂದ ಕ್ಯಾಥಲ್ಯಾಬ್ ಹೊಂದಿರುವ ಹೃದಯ ಸಂಬಂಧಿತ ಸೂಪರ್ ಸ್ಪೇಷಾಲಿಟಿ ಘಟಕವು ಜನತೆಗೆ ಸೇವೆ ನೀಡುತ್ತಿದೆ. ಈಗಾಗಲೇ 204 ಜನರಿಗೆ ಚಿಕಿತ್ಸೆ ನೀಡಲಾಗಿದೆ. ಜೊತೆಗೆ ಪ್ಯಾರಾಮೆಡಿಕಲ್, ಬಿಎಸ್ಸಿ ಅಲೈಡ್ ಸೈನ್ಸ್, ಜಿ.ಎನ್.ಎಂ, ಬಿಎಸ್ಸಿ ನರ್ಸಿಂಗ್ ಹಾಗೂ ಪೋಸ್ಟ್ ಡಾಕ್ಟೋರಲ್ ಫೆಲೋಶಿಪ್ ಕೋರ್ಸಗಳು ಆರಂಭವಾಗಿ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿವೆ. ಸಂಸ್ಥೆಯು ಗ್ರಾಮೀಣ ಕರ್ನಾಟಕ ಆರೋಗ್ಯ ಸೇವೆಯಲ್ಲಿ ಹಾಗೂ ವೈದ್ಯಕೀಯ ಶಿಕ್ಷಣದಲ್ಲಿ ಉನ್ನತ ಮಾದರಿಯಾಗಿ ಗುರುತಿಸಿಕೊಂಡಿದೆ. ಮೇಡಿವಿಜನ್ ವೈದ್ಯಕೀಯ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಾನವ ಶರೀರ ರಚನೆ, ನೈಜ ಅಂಗಾಂಗಗಳ ಪ್ರದರ್ಶನ, ಶರೀರ ಕ್ರಿಯೆ-ತಿಳುವಳಿಕೆ, ಆರೋಗ್ಯದ ಬಗ್ಗೆ ಮಾಹಿತಿ, ಕ್ಯಾನ್ಸರ್, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯ ಕಾಯಿಲೆ, ಥೈರಾಯ್ಡ್ ಇನ್ನಿತರೆ ಕಾಯಿಲೆಗಳ ಬಗ್ಗೆ ತಿಳಿವಳಿಕೆ, ಅಧುನಿಕ ವೈದ್ಯಕೀಯ ಉಪಕರಣಗಳ ಪ್ರದರ್ಶನ, ಆಹಾರ ಪದ್ಧತಿಗಳ ಬಗ್ಗೆ ಅರಿವು ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಜೊತೆಗೆ ಮಕ್ಕಳಿಗಾಗಿ ಹಾಸ್ಯ ಆಟಗಳನ್ನು ಏರ್ಪಡಿಸಲಾಗಿದೆ. ವೈದ್ಯಕೀಯ ವಿಜ್ಞಾನದ ಅರಿವನ್ನು ಶಾಲಾ ಮಕ್ಕಳಿಗೆ ತಿಳಿಸುವ ಪ್ರಯುಕ್ತ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳು, ಮಾದರಿಗಳನ್ನು, ಚಿತ್ರಪಟಗಳನ್ನು ತಯಾರು ಮಾಡಿ ಪ್ರದರ್ಶಿಸಲಿದ್ದಾರೆ.

“ಮೆಡಿವಿಜನ್-2025” ವೈದ್ಯಕೀಯ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದ ಉದ್ದೇಶ ಮಕ್ಕಳಲ್ಲಿ ವೈದ್ಯಕೀಯ ವಿಜ್ಞಾನಗಳ ಬಗ್ಗೆ ಆಸಕ್ತಿ ಮೂಡಿಸುವುದು, ಸದೃಢ ಆರೋಗ್ಯವಂತ ಭಾರತ ನಿರ್ಮಾಣಕ್ಕಾಗಿ ಮಕ್ಕಳಿಗೆ ಆರೋಗ್ಯದ ಬಗ್ಗೆ ತಿಳಿವಳಿಕೆ, ಭವಿಷ್ಯದಲ್ಲಿ ವೈದ್ಯರಾಗುವ ಕನಸುಗಳಿಗೆ ಪ್ರೇರಣೆ ನೀಡುವುದಾಗಿದೆ ಜಿಮ್ಸ್‌ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಹೇಳಿದರು.ಕೆ.ಎಚ್. ಪಾಟೀಲ (ಗದಗ) ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ 10ರ ಸಂಭ್ರಮದಲ್ಲಿ ಶಾಲಾ ಮಕ್ಕಳಲ್ಲಿ ವೈದ್ಯಕೀಯ ವಿಜ್ಞಾನದ ತಿಳುವಳಿಕೆ ಮೂಡಿಸಲು ಹಾಗೂ ಆರೋಗ್ಯದ ಬಗ್ಗೆ ಅರಿವು ಮೂಡಿಸಲು “ಮೆಡಿವಿಜನ್-2025” ವೈದ್ಯಕೀಯ ವಿಜ್ಞಾನ ವಸ್ತು ಪ್ರದರ್ಶನ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಈ ಸಂಸ್ಥೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ವೈದ್ಯಕೀಯ ಉಪಕರಣಗಳೊಂದಿಗೆ ನುರಿತ ವೈದ್ಯರ ತಂಡ ಜನತೆಗೆ ಉತ್ತಮ ವೈದ್ಯಕೀಯ ಸೇವೆ ನೀಡುತ್ತಿದ್ದು, ರಾಜ್ಯಕ್ಕೆ ಮಾದರಿಯಾಗಿದೆ ಎಂದು ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಹೇಳಿದರು.