ಸಾರಾಂಶ
ಇಂದು ವಿಧಾನಸೌಧದಲ್ಲಿ ಕೇಳಿಬಂದಿರುವ ಪಾಕಿಸ್ತಾನ ಜಿಂದಾಬಾದ್ ಜೈಕಾರಕ್ಕೆ ಕಾಂಗ್ರೆಸ್ ಈ ವರೆಗೆ ಮಾಡಿರುವ ತುಷ್ಟೀಕರಣದ ರಾಜಕಾರಣವೇ ಕಾರಣ ಎಂದು ಸಚಿವ ಜೋಶಿ ಹೇಳಿದರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಕರ್ನಾಟಕ ವಿಧಾನ ಸೌಧದೊಳಗೆ ರಾಜ್ಯಸಭಾ ಚನಾವಣೆ ಫಲಿತಾಂಶದ ವೇಳೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದವರನ್ನು ಸರ್ಕಾರ ಒದ್ದು ಒಳಗೆ ಹಾಕಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದ್ದಾರೆ.ರಾಜ್ಯ ಪೊಲೀಸ್ ಇಲಾಖೆ, ಗೃಹ ಸಚಿವರು ಮತ್ತು ಮುಖ್ಯಮಂತ್ರಿ ಅವರು ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ದೇಶದಲ್ಲಿ ಯಾವಾಗಲೆಲ್ಲ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆಯೋ, ಆಗ ದೇಶ ದ್ರೋಹಿಗಳಿಗೆ ಮತ್ತು ಪಾಕಿಸ್ತಾನ ಸಮರ್ಥಕರಿಗೆ ಬಲ ಬಂದಂತೆ ಆಗುತ್ತಿದೆ ಎಂದು ಟೀಕಿಸಿದ್ದಾರೆ. ಇಂದು ವಿಧಾನಸೌಧದಲ್ಲಿ ಕೇಳಿಬಂದಿರುವ ಪಾಕಿಸ್ತಾನ ಜಿಂದಾಬಾದ್ ಜೈಕಾರಕ್ಕೆ ಕಾಂಗ್ರೆಸ್ ಈ ವರೆಗೆ ಮಾಡಿರುವ ತುಷ್ಟೀಕರಣದ ರಾಜಕಾರಣವೇ ಕಾರಣ. ಕೂಡಲೇ ರಾಜ್ಯ ಪೊಲೀಸ್ ಇಲಾಖೆ ಮತ್ತು ಗೃಹ ಇಲಾಖೆ ಇದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅಲ್ಲದೇ ಘಟನೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.ರಾಹುಲ್ ಗಾಂಧಿ ಏನು ಹೇಳ್ತಾರೆ?
ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಸಾಮಾನ್ಯ ಸಂಗತಿಯಲ್ಲ. ದೇಶದ್ರೋಹಕ್ಕೆ ಕುಮ್ಮಕ್ಕು ಕೊಡುವ ರೀತಿ ನಡೆದುಕೊಳ್ಳುತ್ತಿದೆ. ಈ ಬಗ್ಗೆ ರಾಹುಲ್ ಗಾಂಧಿ ಏನು ಹೇಳುತ್ತಾರೆ ಸ್ಪಷ್ಟಪಡಿಸಬೇಕು. ಕಾಂಗ್ರೆಸ್ಸಿಗೆ, ದೇಶ, ದೇಶಭಕ್ತಿ, ಭಾರತ ಮಾತೆ ಬಗ್ಗೆ ಕಿಂಚಿತ್ತಾದರೂ ಗೌರವ ಇದ್ದರೆ ಮೊದಲು ಘೋಷಣೆ ಕೂಗಿದವರನ್ನು ಒದ್ದು ಒಳಗೆ ಹಾಕಿ ಎಂದು ಅಗ್ರಹಿಸಿದ್ದಾರೆ.