ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಸ್ಥಳೀಯ ಪಪಂ ಸದಸ್ಯ ನಾಗರಾಜ ಅಪಹರಣ ಹಾಗೂ ಚುನಾವಣೆ ಮುಂದೂಡುವಂತೆ ಆಗ್ರಹಿಸಿ ಜಿಲ್ಲಾ ಬಿಜೆಪಿಯಿಂದ ಸೋಮವಾರ ಕಿತ್ತೂರು ಚಲೋ ಪ್ರತಿಭಟನೆ ನಡೆಸಲಾಯಿತು. ಇದೆ ವೇಳೆ ಕಾಂಗ್ರೆಸ್ ನೀತಿಯನ್ನು ಬಿಜೆಪಿ ನಾಯಕರು, ಸಂಸದರು, ಮಾಜಿ ಶಾಸಕರು ತೀವ್ರವಾಗಿ ಖಂಡಿಸಿದರು.ಹೆದ್ದಾರಿ ಪಕ್ಕದ ಚನ್ನಮ್ಮ ವರ್ತುಲದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಅಧಿಕಾರದ ಆಸೆಗಾಗಿ ಅಪಹರಣದಂತಹ ಕೃತ್ಯಕ್ಕೆ ಕಾಂಗ್ರೆಸ್ ಮುಂದಾಗಿದೆ. ಅಧಿಕಾರಿಗಳನ್ನು ಕೈಗೊಂಬೆಯಾಗಿಸಿಕೊಂಡು ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಹೊರಟಿರುವುದು ದುರದೃಷ್ಟಕರ ಎಂದು ಕಿಡಿಕಾರಿದ ಅವರು, ಆಡಳಿತದಲ್ಲಿರುವವರು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಸತ್ಯ ಬಚ್ಚಿಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಪೊಲೀಸ್ ಇಲಾಖೆ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.
ಈ ಹಿಂದೆ ನಾಗರಾಜ ಅಸುಂಡಿಗೆ ಕಾಂಗ್ರೆಸ್ ಪಕ್ಷದ ಕೆಲವರಿಂದ ಆಮಿಷ ಬಂದಿದ್ದರೂ ಅವರು ಅದಕ್ಕೆ ಒಪ್ಪಿರಲಿಲ್ಲ. ಪಕ್ಷಕ್ಕೆ ನಿಷ್ಠರಾಗಿ ದುಡಿಯುವ ವ್ಯಕ್ತಿಯನ್ನು ಬಲವಂತವಾಗಿ ಅಪಹರಣ ಮಾಡುವ ಮೂಲಕ ಕಾಂಗ್ರೆಸ್ ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿದೆ. ಶಾಸಕರ ಮೂಗಿನ ನೇರಕ್ಕೆ ಇಂತಹ ದುಷ್ಕೃತ್ಯ ನಡೆಯುತ್ತಿದೆ. ಪೊಲೀಸರು ಹಾಗೂ ತಹಸೀಲ್ದಾರರು ಕೈಕಟ್ಟಿ ವಾಮಮಾರ್ಗದಿಂದ ಕಾಂಗ್ರೆಸ್ ಗೆಲ್ಲಲು ಪ್ರಯತ್ನಿಸುತ್ತಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಇಂತಹ ಯಾವುದೇ ಕೆಟ್ಟ ಕೆಲಸಕ್ಕೂ ಕೈ ಹಾಕಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಾಯಿಗಿಂತಲೂ ಜಗತ್ತಿನಲ್ಲಿ ಮತ್ತೊಂದಿಲ್ಲ. ನಿಮ್ಮ ತಾಯಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ. ಜೀವಕ್ಕೆ ಅಂಜದೆ ಧಮಕಿ ಲೆಕ್ಕಿಸದೇ ಯಾರಿಗೂ ಬಗ್ಗದೆ ಅಪಹರಣಕಾರರನ್ನು ಒದ್ದಾದರೂ ಸರಿ ಬಂದು ನಿಮ್ಮ ತಾಯಿಯನ್ನು ಸೇರಿಕೊ ಎಂದು ಅಪಹರಣಕ್ಕೊಳಗಾದ ನಾಗರಾಜ ಅಸುಂಡಿಗೆ ಬಹಿರಂಗ ಸಭೆಯ ಮೂಲಕ ಕಿವಿಮಾತು ಹೇಳಿದರು.
ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಜಗದೀಶ ಶೆಟ್ಟರ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಮತ್ತು ನೆತ್ತಿಗೇರಿ ಅಪಹರಣದಂತಹ ದುಷ್ಕೃತ್ಯಕ್ಕೆ ಮುನ್ನುಡಿ ಬರೆಯುತ್ತಿದೆ. ಅದರ ಶಕ್ತಿ ಕುಂದುತ್ತಿದೆ ಎಂಬುದನ್ನು ತೋರಿಸಿಕೊಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.ಇಂತಹ ಕೃತ್ಯಕ್ಕೆ ಕೈ ಹಾಕದೆ ಮುಂಬರುವ ಕಿತ್ತೂರು ವಿಜಯದ ದ್ವಿಶತಮಾನೋತ್ಸವ ಆಚರಣೆಯನ್ನು ವೈಭವದಿಂದ ನಡೆಸಲು ಪಯತ್ನಿಸಿ ಎಂದು ಹೇಳಿದ ಅವರು, ಅಪಹರಣಕ್ಕೊಳಗಾದ ನಾಗರಾಜ ಅಸುಂಡಿಯ ಲೊಕೇಶನ್ ನಮಗೆ ಸಿಕ್ಕಿದೆ. ಆದರೆ, ಇದು ಪೊಲೀಸರಿಗೆ ದೊತೆಯುತ್ತಿಲ್ಲವೇ ಎಂದು ವ್ಯಂಗ್ಯವಾಡಿದರು.
ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಸೋನಾಲಿ ಸರ್ನೊಬತ್, ಬೆಳಗಾವಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಕೆ.ವಿ.ಪಾಟೀಲ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಬೇಸ್ಮಿ, ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ, ವಿಶ್ವನಾಥ ಪಾಟೀಲ, ಮಂಡಳ ಅಧ್ಯಕ್ಷ ಡಾ.ಬಸವರಾಜ ಪರವಣ್ಣವರ, ಶ್ರೀಕರ ಕುಲಕರ್ಣಿ, ಅಪ್ಪಣ್ಣ ಪಾಗಾದ, ಲಕ್ಷ್ಮೀ ಇನಾಮದಾರ, ಮುರುಘೇಂದ್ರ ಪಾಟೀಲ, ಉಳವಪ್ಪ ಉಳ್ಳೇಗಡ್ಡಿ, ದಿನೇಶ ವಳಸಂಗ, ಬಸವರಾಜ ಮಾತನವರ, ಉಮಾದೇವಿ ಬಿಕ್ಕಣ್ಣವರ, ಕಾರ್ಯಕರ್ತರು ಇದ್ದರು.