ಅಪಹರಣವಾಗಿದ್ದ ಸಂತ್ರಸ್ತೆ ರೇವಣ್ಣ ಪಿಎ ಮನೇಲಿ ಪತ್ತೆ!

| Published : May 05 2024, 02:03 AM IST / Updated: May 05 2024, 06:14 AM IST

ಅಪಹರಣವಾಗಿದ್ದ ಸಂತ್ರಸ್ತೆ ರೇವಣ್ಣ ಪಿಎ ಮನೇಲಿ ಪತ್ತೆ!
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಆರ್.ನಗರದಿಂದ ಇತ್ತೀಚೆಗೆ ಕಿಡ್ನಾಪ್ ಆಗಿದ್ದ, ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ವಿಡಿಯೋದಲ್ಲಿದ್ದಾರೆನ್ನಲಾದ ಸಂತ್ರಸ್ತೆ ಕೊನೆಗೂ ಪತ್ತೆಯಾಗಿದ್ದಾರೆ. 

 ಮೈಸೂರು :  ಕೆ.ಆರ್.ನಗರದಿಂದ ಇತ್ತೀಚೆಗೆ ಕಿಡ್ನಾಪ್ ಆಗಿದ್ದ, ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ವಿಡಿಯೋದಲ್ಲಿದ್ದಾರೆನ್ನಲಾದ ಸಂತ್ರಸ್ತೆ ಕೊನೆಗೂ ಪತ್ತೆಯಾಗಿದ್ದಾರೆ. ಹುಣಸೂರು ತಾಲೂಕಿನ ಕಾಳೇನಹಳ್ಳಿಯಲ್ಲಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಆಪ್ತ ಸಹಾಯಕ ರಾಜಶೇಖರ್ ಅವರ ತೋಟದ ಮನೆಯಿಂದ ಮಹಿಳೆಯನ್ನು ಎಸ್ಐಟಿ ಪೊಲೀಸರು ಶನಿವಾರ ರಕ್ಷಣೆ ಮಾಡಿದ್ದಾರೆ.

ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋದಲ್ಲಿನ ಸಂತ್ರಸ್ತೆಯೂ ಆಗಿರುವ ಈ ಮಹಿಳೆಯನ್ನು ಏ.29ರಂದು ಭವಾನಿ ರೇವಣ್ಣ ಅವರ ಸಂಬಂಧಿ ಸತೀಶ್ ಬಾಬು ಕರೆದೊಯ್ದಿದ್ದರು. ಅಂದಿನಿಂದಲೂ ಹುಣಸೂರು ತಾಲೂಕಿನ ಕಾಳೇನಹಳ್ಳಿಯ ರೇವಣ್ಣ ಆಪ್ತ ಸಹಾಯಕ ರಾಜಶೇಖರ್ ತೋಟದಲ್ಲೇ ಸಂತ್ರಸ್ತೆಯನ್ನು ಇರಿಸಲಾಗಿತ್ತು.

ಈ ನಡುವೆ ಮೇ 2ರ ತಡರಾತ್ರಿ ಸಂತ್ರಸ್ತೆಯ ಪುತ್ರ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ತಾಯಿ ನಾಪತ್ತೆಯಾಗಿರುವ ಕುರಿತು ದೂರು ದಾಖಲಿಸಿದ್ದರು. ಅದರಂತೆ ಎಚ್.ಡಿ.ರೇವಣ್ಣ ಮತ್ತು ಸತೀಶ್ ಬಾಬು ವಿರುದ್ಧ ಅಪಹರಣ ಪ್ರಕರಣ ದಾಖಲಾಗಿತ್ತು. ಈ ಕೇಸ್‌ನಡಿ ತನಿಖೆ ಆರಂಭಿಸಿದ ಕೆ.ಆರ್.ನಗರ ಠಾಣೆ ಪೊಲೀಸರು, ಪ್ರಕರಣದ 2ನೇ ಆರೋಪಿ ಹೆಬ್ಬಾಳುಕೊಪ್ಪಲು ಗ್ರಾಮದ ಸತೀಶ್ ಬಾಬುನನ್ನು ಶುಕ್ರವಾರ ಬಂಧಿಸಿ, ವಿಚಾರಣೆ ನಡೆಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಪ್ರಕರಣದ ಬೆನ್ನಲ್ಲೇ ಮೈಸೂರು ಜಿಲ್ಲೆ ಪೊಲೀಸರು, ಎಸ್ಐಟಿ ತಂಡದ ಪೊಲೀಸರು ವಿವಿಧ ತಂಡಗಳನ್ನು ರಚಿಸಿಕೊಂಡು ಎಚ್.ಡಿ.ರೇವಣ್ಣ ಅವರಿಗೆ ಸಂಬಂಧಿಸಿದ ತೋಟದ ಮನೆ, ಆಪ್ತರ ನಿವಾಸಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದರು. ಅದರಂತೆ ಹುಣಸೂರಿನ ಕಾಳೇನಹಳ್ಳಿಯಲ್ಲಿ ರೇವಣ್ಣ ಅವರ ಆಪ್ತ ಸಹಾಯಕ ರಾಜಶೇಖರ್ ತೋಟದಲ್ಲಿ ಸಂತ್ರಸ್ತೆ ಪತ್ತೆಯಾಗಿದ್ದು, ಆಕೆಯನ್ನು ರಕ್ಷಿಸಿದ್ದಾರೆ. ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ಪತ್ತೆಯಿಂದ ಮೈಸೂರು ಜಿಲ್ಲಾ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.

ಪ್ರಜ್ವಲ್‌ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ಮುಂದೆ ಯಾವುದೇ ವಿಚಾರ ಬಾಯ್ಬಿಡದಂತೆ ಭವಾನಿ ರೇವಣ್ಣ ಅವರ ಸಂಬಂಧಿ ಸತೀಶ್ ಬಾಬು ಬೆದರಿಕೆ ಹಾಕಿದ್ದ. ಅಲ್ಲದೆ, ಭವಾನಿ ರೇವಣ್ಣ ಕರೆಯುತ್ತಿದ್ದಾರೆಂದು ಹೇಳಿ ತಾಯಿಯನ್ನು ಕರೆದೊಯ್ದಿದ್ದ ಎಂದು ಸಂತ್ರಸ್ತೆ ಪುತ್ರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದ.