20 ಗಂಟೆಯೊಳಗೆ ಕಿಡ್ನ್ಯಾಪ್‌ ಪ್ರಕರಣಭೇದಿಸಿದ ಗುಂಡ್ಲುಪೇಟೆ ಪೊಲೀಸರು

| Published : Mar 05 2025, 12:33 AM IST

20 ಗಂಟೆಯೊಳಗೆ ಕಿಡ್ನ್ಯಾಪ್‌ ಪ್ರಕರಣಭೇದಿಸಿದ ಗುಂಡ್ಲುಪೇಟೆ ಪೊಲೀಸರು
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತ ಮಾತನಾಡಿದರು. ಎಎಸ್ಪಿ ಶಶಿಧರ್‌, ಡಿವೈಎಸ್ಪಿ ಲಕ್ಷ್ಮಯ್ಯ ಇದ್ದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ/ಚಾಮರಾಜನಗರಬಂಡೀಪುರ ಬಳಿಯ ಕಂಟ್ರಿಕ್ಲಬ್‌ನಲ್ಲಿ ಅಪಹರಣ ಮಾಡಿದ್ದ ಪ್ರಕರಣವನ್ನು ಗುಂಡ್ಲುಪೇಟೆ ಪೊಲೀಸರು ಬೇಧಿಸಿದ್ದು, ಅಪಹರಣ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. ಪ್ರಮುಖ ಮೂರು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಬಂಡೀಪುರ ಬಳಿಯ ಕಂಟ್ರಿಕ್ಲಬ್‌ನ ಅನತಿ ದೂರದಲ್ಲಿ ಮಂಗಳವಾರ ಬೆಳಗ್ಗೆ ಸಿ.ಜೆ.ನಿಶಾಂತ್‌, ನಿಶಾಂತ್‌ ಪತ್ನಿ ಚಂದನ ಪಿ.ವಿ, 7ವರ್ಷದ ನಿಹಾಂತ್‌ ಸೇರಿ ಮೂರು ಮಂದಿ ಅಪಹರಿಸಿ, ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಹೊನ್ನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಬಚ್ಚಿಟ್ಟಿದ್ದರು. ಗುಂಡ್ಲುಪೇಟೆ ಪೊಲೀಸರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗಿಳಿದು ಅಪಹರಣಕ್ಕೊಳಗಾದ ಸಿ.ಜಿ.ನಿಶಾಂತ್‌, ಚಂದನ, ಮಗು ನಿಹಾಂತ್‌ ಪತ್ತೆ ಹಚ್ಚಿದ್ದಾರೆ. ಅಪಹರಣದ ರೂವಾರಿ ಪುನೀತ್‌ ದಮ್ಮಳ್‌ ಹಾಗೂ ಸಹೋದರ ಸ್ನೇಹಿತ್‌ ಈರಪ್ಪ ಹಾಗೂ ಭೀಮನಗೌಡ ಪೊಲೀಸರ ಆಗಮನದ ಬಳಿಕ ಪರಾರಿಯಾಗಿದ್ದಾರೆ. ಮೂವರು ಮಂದಿ ಬಚ್ಚಿಟ್ಟಿದ ತೋಟದ ಮನೆಯಲ್ಲಿದ್ದ ಮಲ್ಲಿಕಾರ್ಜುನ, ಈರಣ್ಣ, ಸಿದ್ದರಾಮಯ್ಯ,ವಿಶ್ವನಾಥರ ವಶಕ್ಕೆ ಪಡೆದು ಪೊಲೀಸರು ಅಪರಹಣಕ್ಕೊಳಗಾದ ಸಿ.ಜೆ.ನಿಶಾಂತ್‌, ಪತ್ನಿ ಚಂದನ ಪಿ.ವಿ.ಪುತ್ರ ನಿಹಾಂತ್‌ ರನ್ನು ಗುಂಡ್ಲುಪೇಟೆ ಠಾಣೆಗೆ ಕರೆದು ಬರುತ್ತಿದ್ದಾರೆ. ಕಂಟ್ರಿ ಕ್ಲಬ್‌ ಮ್ಯಾನೆಜರ್‌ ಗುರುರಾಜ ಆಚಾರ್ಯ ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಬಳಿಕ ಕಾರ್ಯಾಚರಣೆಗೆ ತೆರಳಿ, ಗುಂಡ್ಲುಪೇಟೆ ಪೊಲೀಸರು ಯಶ ಕಂಡಿದ್ದಾರೆ.ಹಣಕಾಸು ವಿಚಾರ?:ಪೊಲೀಸರ ವಿಚಾರಣೆ ಬಳಿಕ ಅಪಹರಣಕ್ಕೆ ಕಾರಣ ತಿಳಿದು ಬಂದಿದ್ದು, ಅಪಹರಣಕ್ಕೊಳಗಾದ ಸಿ.ಜೆ.ನಿಶಾಂತ್‌ ಅಪಹರಣದ ರೂವಾರಿ ಪುನೀತ್‌ ಈರಪ್ಪ ದಮ್ಮಳ್‌ ಹಾಗೂ ಸಹೋದರ ಸ್ನೇಹಿತ್‌ ಈರಪ್ಪ ದಮ್ಮಳ್‌ ನಿಂದ ಹಣ ಪಡೆದುಕೊಂಡಿದ್ದರು. ನಿಶಾಂತ್‌ ಸಿ.ಜೆ ಜೊತೆ ಪುನೀತ್‌ ಹಾಗೂ ಸ್ನೇಹಿತ್‌ ಈರಪ್ಪ ದಮ್ಮಳ್‌ ಹಣ ನೀಡುವಂತೆ ಒತ್ತಾಯಿಸಿದ್ದರು. ಹಣ ಕೊಟ್ಟಿರದ ಕಾರಣ ಮಾ.3 ರಂದು ಕಂಟ್ರಿ ಕ್ಲಬ್‌ ಬಳಿ ನಿಶಾಂತ್‌ ಸಿ.ಜೆ ಕಾರು ಅಡ್ಡಗಟ್ಟಿ ನಿಶಾಂತ್‌ ಕುಟುಂಬ ಅಪಹರಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಿಶಾಂತ್ ಬಳಿ ನಕಲಿ ಬಿಬಿಎಂಪಿ ಐಡಿ ಪತ್ತೆ

ಕಿಡ್ನಾಪ್ ಆದ ನಿಶಾಂತ್ ಬಳಿ ನಕಲಿ ಬಿಬಿಎಂಪಿ ಐಡಿ ಪತ್ತೆಯಾಗಿದ್ದು ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ನಿಶಾಂತ್ ವಿರುದ್ಧವು ಕೇಸ್ ದಾಖಲು ಮಾಡಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತ ತಿಳಿಸಿದ್ದಾರೆ. ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ಪುನೀತ್ ಹಾಗೂ ನಿಶಾಂತ್ ನಡುವೆ ಹಣಕಾಸಿನ ವಿಚಾರಕ್ಕೆ ಈ ಕಿಡ್ನಾಪ್ ಆಗಿದ್ದು ಮೇಲ್ನೋಟಕ್ಕೆ ದೃಢವಾಗಿದೆ‌. ಒಟ್ಟಿನಲ್ಲಿ ನಕಲಿ ಬಿಬಿಎಂಪಿ ಐಡಿ ಕಾರ್ಡ್ ಇಟ್ಟುಕೊಂಡಿದ್ದ ನಿಶಾಂತ್ ವಿರುದ್ಧವೂ ಹಲವು ಅನುಮಾನ ಮೂಡಿದೆ. 24 ತಾಸಲ್ಲೇ ಪ್ರಕರಣ ಸುಖಾಂತ್ಯ ಮಾಡಿರುವ ಚಾಮರಾಜನಗರ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಶಶಿಧರ್‌, ಡಿವೈಎಸ್ಪಿ ಲಕ್ಷ್ಮಯ್ಯ ಇದ್ದರು.