ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರುಖಾಸಗಿ ಕಂಪನಿಯ ನಾಲ್ವರು ನೌಕರರನ್ನು ಅಪಹರಣ ಮಾಡಿದ್ದ ಪ್ರಕರಣ ಸಂಬಂಧ ಕೋರಮಂಗಲ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಹೆಡ್ ಕಾನ್ಸ್ಟೇಬಲ್ ಸೇರಿ ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತನಿಖಾಧಿಕಾರಿಯ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಚಲಪತಿ ಸೇರಿ ಎಂಟು ಮಂದಿಯನ್ನು ಬಂಧಿಸಲಾಗಿದೆ.ಬಂಧಿತರಿಂದ ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದೆ. ತನಿಖೆ ವೇಳೆ ಆರೋಪಿಗಳಿಂದ ಅಪಹರಣಕ್ಕೊಳಗಾಗಿದ್ದ ನೌಕರನ ಖಾತೆಯಿಂದ 18.90 ಲಕ್ಷ ರು. ಹಣವನ್ನು ತಮ್ಮ ಸಂಬಂಧಿಕರೊಬ್ಬರ ಖಾತೆಗೆ ವರ್ಗಾವಣೆ ಮಾಡಿಕೊಂಡಿರುವುದು ಕಂಡು ಬಂದಿದ್ದು, ಆ ಹಣವನ್ನು ಫ್ರೀಜ್ ಮಾಡಲಾಗಿದೆ. ಈ ಸಂಬಂಧ ಖಾಸಗಿ ಕಂಪನಿಯ ನೌಕರ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ವಿವರ: ಕೋರಮಂಗಲದಲ್ಲಿರುವ ಕಾಲ್ ಸೆಂಟರ್‌ನಲ್ಲಿ ನಾಲ್ವರು ನೌಕರರು ಕೆಲಸ ಮಾಡುತ್ತಿದ್ದು, ಅವರ ಖಾತೆಯಲ್ಲಿ ಲಕ್ಷಾಂತರ ರು. ಹಣವಿರುವ ಮಾಹಿತಿ ಹೊಂದಿದ್ದ ಆರೋಪಿಗಳು, ನಾಲ್ವರು ನೌಕರರನ್ನು ಕಾಲ್ ಸೆಂಟರ್ ಬಳಿಯೇ ಶುಕ್ರವಾರ ಮಧ್ಯರಾತ್ರಿ ಅಪಹರಣ ಮಾಡಿ ಮಾಲೂರಿನ ಖಾಸಗಿ ಕಾಲೇಜಿನಲ್ಲಿ ಕೂಡಿ ಹಾಕಿ ಬಳಿಕ ಬೆದರಿಸಿ ಅವರ ಖಾತೆಯಲ್ಲಿದ್ದ 18.90 ಲಕ್ಷ ರು. ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು.ಈ ಸಂಬಂಧ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬರು ಕೋರಮಂಗಲ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಕೂಡಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಎಂಟು ಮಂದಿಯನ್ನು ಬಂಧಿಸಿ, 18.90 ಲಕ್ಷ ಹಣವನ್ನು ಫ್ರೀಜ್ ಮಾಡಿದ್ದು, ಇನ್ನೋವಾ ಮತ್ತು ವ್ಯಾಗನರ್ ಎರಡು ಕಾರುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪೊಲೀಸರ ಸೋಗಿನಲ್ಲಿ ಕಿಡ್ನಾಪ್
ಆರೋಪಿಗಳ ತಂಡ ಶುಕ್ರವಾರ ಮಧ್ಯ ರಾತ್ರಿ ಎರಡು ಕಾರುಗಳಲ್ಲಿ ಬಂದು ತಾವು ಪೊಲೀಸರೆಂದು ಹೇಳಿಕೊಂಡು, ನಿಮ್ಮ ಕಾಲ್ ಸೆಂಟರ್ ಮೂಲಕ ಜನರನ್ನು ಡಿಜಿಟಲ್ ಅರೆಸ್ಟ್ ಮಾಡಿ ಅವರಿಂದ ಹಣ ಸುಲಿಗೆ ಮಾಡುತ್ತಿರುವ ಸಂಬಂಧ ಬಂಧಿಸುವುದಾಗಿ ಹೇಳಿ ನಾಲ್ವರು ನೌಕರರನ್ನು ಕಿಡ್ನಾಪ್ ಮಾಡಿದ್ದಾರೆ. ಬಳಿಕ ನಾಲ್ವರನ್ನು ಮಾಲೂರಿನ ಖಾಸಗಿ ಕಾಲೇಜಿನಲ್ಲಿ ಅಕ್ರಮ ಬಂಧನದಲ್ಲಿರಿಸಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))