ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಸಿಗ್ಮಾ ಆಸ್ಪತ್ರೆಯ ವತಿಯಿಂದ ವಿಶ್ವಕಿಡ್ನಿ ದಿನಾಚರಣೆ ಅಂಗವಾಗಿ ಏ. 6 ರಂದು ಉಚಿತ ಮೂತ್ರಪಿಂಡ ಆರೋಗ್ಯ ತಪಾಸಣಾ ಶಿಬಿರವನ್ನು ನಗರದ ಸರಸ್ವತಿಪುರಂನ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆ ನಿರ್ದೇಶಕ ಡಾ.ಕೆ.ಎಂ. ಮಾದಪ್ಪ ತಿಳಿಸಿದರು.ಅಂದು ಬೆಳಗ್ಗೆ 8 ಗಂಟೆಗೆ ಶಿಬಿರ ಆರಂಭಗೊಳ್ಳಲಿದ್ದು, ಬೆಳಗ್ಗೆ 10ಕ್ಕೆ ಕಿಡ್ನಿ ದಾಳಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಯಾಗಿ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಶಾಸಕ ಕೆ. ಹರೀಶ್ ಗೌಡ ಪಾಲ್ಗೊಳ್ಳುವರು. ಮಧ್ಯಾಹ್ನ 2 ಗಂಟೆವರೆಗೆ ಶಿಬಿರ ನೆಡೆಯಲಿದೆ ಎಂದು ಶುಕ್ರವಾರ ಅವರು ಮಾಹಿತಿ ನೀಡಿದರು.
ಶಿಬಿರದಲ್ಲಿ ತಜ್ಞ ವೈದ್ಯರಿಂದ ಸಮಾಲೋಚನೆ, ಮೂತ್ರ ಪರೀಕ್ಷೆ, ಬಿಪಿ, ಶುಗರ್ ಪರೀಕ್ಷೆ, ಅಗತ್ಯವಿದ್ದಲ್ಲಿ ಹಿಮೋಗ್ಲೋಬಿನ್, ಕಿಡ್ನಿ ಅಲ್ಟ್ರಾಸೌಂಡ್ ಸ್ಕ್ಯಾನ್ ಪರೀಕ್ಷೆ ನಡೆಸಲಾಗುತ್ತದೆ. ಹೊಟ್ಟೆ ನೋವು, ಸೊಂಟ ನೋವು, ಬೆನ್ನು ನೋವು, ಉರಿ ಮೂತ್ರ ಅಥವಾ ಮೂತ್ರದಲ್ಲಿ ರಕ್ತ, ಕಿಡ್ನಿಯಲ್ಲಿ ಕಲ್ಲು, ಪುರುಷ ಬಂಜೆತನ, ಮುಖ ಹಾಗೂ ಕಾಲು ಊತ, ಅಧಿಕ ರಕ್ತದೊತ್ತಡ, ಹಸಿವಾಗದಿರುವುದು, ಅತಿಯಾದ ಸುಸ್ತು ಇತ್ಯಾದಿ ಲಕ್ಷಣಗಳು ಇರುವವರು ಶಿಬಿರದ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರೆ ಈ ಶಿಬಿರದಲ್ಲಿ ತಮ್ಮ ಮೂತ್ರಪಿಂಡದ ಆರೈಕೆ ಬಗ್ಗೆ ಉಚಿತವಾಗಿ ಅಭಿಪ್ರಾಯ ಪಡೆಯಬಹುದು. ಮೂತ್ರಪಿಂಡ ನಿಷ್ಕ್ರೀಯವಾದಾಗ ಸಹಜ ಜೀವನ ನಡೆಸಲು ಡಯಾಲಿಸಿಸ್‌ಹಾಗೂ ಔಷಧೋಪಚಾರ ನೀಡಲಾಗುತ್ತದೆ. ಆದರೆ ಇದರಿಂದ ಗುಣಮುಖರಾಗುವುದು ಅಸಾಧ್ಯ. ಕೊನೆ ಹಂತದ ಮೂತ್ರಪಿಂಡ ನಿಷ್ಕ್ರೀಯತೆಯಿಂದ ಬಳಲುತ್ತಿರುವ ವ್ಯಕ್ತಿಗೆ ಜೀವಂತ ಅಥವಾ ಮೃತಪಟ್ಟ ದಾನಿಯ ಮೂತ್ರಪಿಂಡ ಜೋಡಿಸುವುದೇ ಮೂತ್ರಪಿಂಡ ಕಸಿ ಎಂದರು.
ತಮ್ಮೊಡನೆ ಡಾ.ಡಿ.ಎನ್. ಸೋಮಣ್ಣ, ಡಾ. ಅನಿಕೇತ್‌ಪ್ರಭಾಕರ್, ಡಾ.ಎಸ್. ಅವಿನಾಶ್‌ಚಂದ್ರ, ಡಾ. ರವಿರಾಜ್‌ಚೌಹಾನ್, ಡಾ. ಹನುಮಂತು ಮೊದಲಾದ ತಜ್ಞ ವೈದ್ಯರ ತಂಡವಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಿಗ್ಮಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ಜ್ಞಾನಶಂಕರ್, ನೆಪ್ರಾಲಜಿಸ್ಟ್ ಡಾ. ಅನಿಕೇತ್ ಪ್ರಭಾಕರ್, ಮಕ್ಕಳ ತಜ್ಞರಾದ ಡಾ.ರಾಜೇಶ್ವರಿ ಇದ್ದರು.