ಪುರುಷರಲ್ಲಿ ಹೆಚ್ಚುತ್ತಿರುವ ಮೂತ್ರಪಿಂಡ ಸಂಬಂಧಿಸಿದ ಕಾಯಿಲೆ, ಜಾಗೃತಿ ಅಗತ್ಯ: ಡಾ.ಟಿ.ಪಿ.ದಿನೇಶ್‌ಕುಮಾರ್

| Published : Nov 23 2025, 02:15 AM IST

ಪುರುಷರಲ್ಲಿ ಹೆಚ್ಚುತ್ತಿರುವ ಮೂತ್ರಪಿಂಡ ಸಂಬಂಧಿಸಿದ ಕಾಯಿಲೆ, ಜಾಗೃತಿ ಅಗತ್ಯ: ಡಾ.ಟಿ.ಪಿ.ದಿನೇಶ್‌ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ವಯಸ್ಸಾದಂತೆ ಪ್ರಾಸ್ಟೇಟ್ ಗ್ರಂಥಿ ಹಿಗ್ಗುವಿಕೆ ಸಾಮಾನ್ಯವಾಗಿದೆ. ಇದರಿಂದ ಪದೇ ಪದೇ ಮೂತ್ರ ವಿಸರ್ಜನೆ, ನಿಧಾನ ಮೂತ್ರ ಮತ್ತು ನಿದ್ರಾಭಂಗದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಿರ್ಲಕ್ಷಿಸಿದರೆ ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಒಳಗಾಗುವ ಸಾಧ್ಯತೆಗಳಿವೆ. ಇದಕ್ಕೆ ವಯಸ್ಸು, ಅನುವಂಶೀಯತೆ, ಜೀವನಶೈಲಿ ಮತ್ತು ಆಹಾರ ಪದ್ದತಿಯಲ್ಲಿನ ಬದಲಾವಣೆ ಪ್ರಮುಖ ಕಾರಣಗಳಾಗಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪುರುಷರಲ್ಲಿ ಪ್ರಾಸ್ಟೇಟ್ (ವೃಷಣಗಳು) ಹಾಗೂ ಮೂತ್ರಪಿಂಡ ಸಂಬಂಧಿತ ಕಾಯಿಲೆಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಿರಬೇಕು ಎಂದು ಮಣಿಪಾಲ್ ಆಸ್ಪತ್ರೆ ಹಿರಿಯ ವೈದ್ಯ ಡಾ.ಟಿ.ಪಿ.ದಿನೇಶ್‌ಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬದಲಾದ ಜೀವನಶೈಲಿ, ಹೆಚ್ಚಿನ ಒತ್ತಡ ಹಾಗೂ ಆರೋಗ್ಯದ ಮೇಲೆ ನಿರಾಸಕ್ತಿಯಿಂದ 45ರಿಂದ 50ವರ್ಷ ಮೇಲ್ಪಟ್ಟ ಪುರುಷರಲ್ಲಿ ಪ್ರಾಸ್ಟೇಟ್ (ವೃಷಣಗಳು) ಹಾಗೂ ಮೂತ್ರಪಿಂಡ ಸಂಬಂಧಿತ ಕಾಯಿಲೆಗಳು ಹೆಚ್ಚುತ್ತಿವೆ ಎಂದರು.

ಪ್ರಾಸ್ಟೇಟ್ ಗ್ರಂಥಿ ಹಿಗ್ಗುವಿಕೆ(ಬಿಪಿಎಚ್), ಪ್ರಾಸ್ಟೇಟ್ ಕ್ಯಾನ್ಸರ್, ಅಧಿಕ ರಕ್ತದೊತ್ತಡದಿಂದಾಗುವ ಮೂತ್ರಪಿಂಡ ಹಾನಿ ಮತ್ತು ದೀರ್ಘ ಕಾಲದ ಮೂತ್ರಪಿಂಡ ಕಾಯಿಲೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ ಸಕಾಲಕ್ಕೆ ತಪಾಸಣೆಗೆ ಒಳಗಾಗಲು ಪುರುಷರು ಮುಂದಾಗಬೇಕು ಎಂದು ಸಲಹೆ ನೀಡಿದರು.

ವಯಸ್ಸಾದಂತೆ ಪ್ರಾಸ್ಟೇಟ್ ಗ್ರಂಥಿ ಹಿಗ್ಗುವಿಕೆ ಸಾಮಾನ್ಯವಾಗಿದೆ. ಇದರಿಂದ ಪದೇ ಪದೇ ಮೂತ್ರ ವಿಸರ್ಜನೆ, ನಿಧಾನ ಮೂತ್ರ ಮತ್ತು ನಿದ್ರಾಭಂಗದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಿರ್ಲಕ್ಷಿಸಿದರೆ ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಒಳಗಾಗುವ ಸಾಧ್ಯತೆಗಳಿವೆ. ಇದಕ್ಕೆ ವಯಸ್ಸು, ಅನುವಂಶೀಯತೆ, ಜೀವನಶೈಲಿ ಮತ್ತು ಆಹಾರ ಪದ್ದತಿಯಲ್ಲಿನ ಬದಲಾವಣೆ ಪ್ರಮುಖ ಕಾರಣಗಳಾಗಿವೆ ಎಂದು ಎಚ್ಚರಿಸಿದರು.

45 ವರ್ಷ ದಾಟಿದ ಎಲ್ಲಾ ಪುರುಷರು ಕಾಲಕಾಲಕ್ಕೆ ಪಿಎಸ್‌ಎ ರಕ್ತ ಪರೀಕ್ಷೆ ಮಾಡಿಕೊಳ್ಳುವ ಮೂಲಕ ಆರಂಭಿಕ ಹಂತದಲ್ಲಿಯೇ ಪ್ರಾಸ್ಟೇಟ್ ಕ್ಯಾನ್ಸರ್ ಪತ್ತೆ ಹಚ್ಚಬಹುದು. ಕ್ಯಾನ್ಸರ್‌ನ ಹಂತದ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುವುದು. ಶಸ್ತ್ರ ಚಿಕಿತ್ಸೆ ಹಂತಕ್ಕೆ ತಲುಪಿದರೆ 75 ಸಾವಿರದಿಂದ 1.50 ಲಕ್ಷ ರು. ವೆಚ್ಚ ತಗಲುತ್ತದೆ. ಈ ಚಿಕಿತ್ಸೆಯು ಆಯುಷ್ಮಾನ್ ಭಾರತ್ ಅಥವಾ ಯಾವುದೇ ಆರೋಗ್ಯ ವಿಮೆಗೂ ಒಳಪಟ್ಟಿರುತ್ತದೆ ಎಂದು ಮಾಹಿತಿ ಹಂಚಿಕೊಂಡರು.

ಡಾ.ವಿಪಿನ್ ಕಾವೇರಪ್ಪ ಮಾತನಾಡಿ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹವೇ ಪುರುಷರಲ್ಲಿ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೆ ಪ್ರಮುಖ ಕಾರಣ. ಉಪ್ಪಿನಾಂಶ ಕಡಿಮೆ ಮಾಡುವುದು, ಸಮತೋಲಿತ ಆಹಾರ ಸೇವಿಸುವುದು, ಸ್ವಯಂ- ವೈದ್ಯ ಮತ್ತು ನೋವು ನಿವಾರಕಗಳ ಅನಗತ್ಯ ಸೇವನೆಯನ್ನು ತಪ್ಪಿಸುವ ಮೂಲಕ ಮೂತ್ರಪಿಂಡ ವೈಫಲ್ಯದ ಅಪಾಯವನ್ನು ಗಣನೀಯವಾಗಿ ತಗ್ಗಿಸಬಹುದು ಎಂದು ಅರಿವು ಮೂಡಿಸಿದರು.

ಡಾ. ತಿಮ್ಮಯ್ಯ ಮಾತನಾಡಿ, ಇತ್ತೀಚೆಗೆ ಯುವ ಮತ್ತು ಮಧ್ಯ ವಯಸ್ಸಿನ ಪುರುಷರಲ್ಲಿಯೂ ಅನಿಯಂತ್ರಿತ ಜೀವನ ಶೈಲಿಯಿಂದಾಗಿ ಮೂತ್ರಪಿಂಡ ವೈಫಲ್ಯ ಹೆಚ್ಚುತ್ತಿದೆ. ದೀರ್ಘಕಾಲದ ಡಯಾಲಿಸಿಸ್‌ಗೆ ಹೋಲಿಸಿದರೆ, ಮೂತ್ರಪಿಂಡ ಕಸಿ ಉತ್ತಮ ಗುಣಮಟ್ಟದ ಜೀವನ ಮತ್ತು ದೀರ್ಘಾಯುಷ್ಯವನ್ನು ನೀಡುವ ಅತ್ಯುತ್ತಮ ಚಿಕಿತ್ಸೆಯಾಗಿದೆ. ಆಧುನಿಕ ಶಸ್ತ್ರಚಿಕಿತ್ಸಾ ಪರಿಣಿತಿ ಮತ್ತು ಸುಧಾರಿತ ಔಷಧಿಗಳಿಂದಾಗಿ ಇಂದು ಮೂತ್ರಪಿಂಡ ಕಸಿ ಅತ್ಯಂತ ಸುರಕ್ಷಿತವಾಗಿದೆ ಎಂದು ನುಡಿದರು.