ಮಳೆ ದೇವರಿಗೆ ವಿಶೇಷ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು.

ಕನ್ನಡಪ್ರಭ ವಾರ್ತೆ ಶೃಂಗೇರಿ

ಪಶ್ಟಿಮ ಘಟ್ಟಗಳ ತಪ್ಪಲು,ಸಹ್ಯಾದ್ರಿ ಪರ್ವತ ಶ್ರೇಣಿಗಳ ಅಂಚಿನ ನಂದಿನಿ ನಳಿನಿ ನದಿಗಳ ತಟದ ಮಲೆನಾಡಿನ ಪ್ರಸಿದ್ಧ ಮಳೆ ದೇವರು ಖ್ಯಾತಿಯ ತಾಲೂಕಿನ ಮರ್ಕಲ್ ಪಂಚಾಯಿತಿ ಕಿಗ್ಗಾದ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ಮಹಾರಥೋತ್ಸವ ಗುರುವಾರ ವೈಭವಯುತವಾಗಿ ಜರುಗಿತು.

ರಥೋತ್ಸವ ಅಂಗವಾಗಿ ಸ್ವಾಮಿ ಸನ್ನಿದಿಯಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿತು. ಸ್ವಾಮಿಯನ್ನು ವಿವಿಧ ಫಲಪುಷ್ಪಗಳಿಂದ ಅಲಂಕರಿಸಲಾಗಿತ್ತು. ಬೆಳಿಗ್ಗೆ ರುದ್ರಾಭಿಷೇಕ ಸಮೇತ ವಿಶೇಷ ಪೂಜೆ ,ಧಾರ್ಮಿಕ ಕ್ರಿಯಾ ವಿಧಿವಿಧಾನ ನಡೆದವು. ಮಲ್ಲಿಕಾರ್ಜುನ ಸ್ವಾಮಿ, ಮಹಾಲಿಂಗೇಶ್ವರ, ಸುತ್ತಿನ ದೇವರು, ಧ್ವಿಭುಜ ಗಣಪತಿ, ದುರ್ಗಾಂಬಾ, ನಂದಿಮಂಟಪ ದೇವರಿಗೆ ವಿಶೇಷ ಪೂಜೆ ನೆರವೇರಿತು.

ಬೆಳಿಗ್ಗೆ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿಯ ರಥಕ್ಕೆ ವಿಶೇಷ ಪೂಜೆ ನಂತರ ಮಹಾರಥೋತ್ಸವ ಜರುಗಿತು. ಛತ್ರಿ ಚಾಮರ, ವಾದ್ಯ ಮೇಳ, ಡೋಲು, ನೂರಾರು ವಿಪ್ರೋತ್ತಮರ ವೇದಘೋಷಗಳು, ಭಕ್ತರ ಧಾರ್ಮಿಕ ಜೈಕಾರಗಳು ರಥೋತ್ಸವಕ್ಕೆ ವಿಶೇಷ ಮೆರಗು ನೀಡಿತು. ರಸ್ತೆಯ ಇಕ್ಕೆಲಗಳಲ್ಲಿ ಜನರು ಸಾಲುಗಟ್ಟಿ ನಿಂತು ಮಳೆ ದೇವರ ದರ್ಶನ ಪಡೆದು ಭಕ್ತಿ ಭಾವದಿಂದ ನಮಿಸಿದರು.


ಶೃಂಗೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಕಳೆದೆರೆಡು ದಿನಗಳಿಂದ ಭಾರೀ ಮಳೆ ಅಬ್ಬರಿಸಿದ್ದು, ಗುರುವಾರ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದರೂ ರಥೋತ್ಸವ, ಧಾರ್ಮಿಕ ಕಾರ್ಯಗಳಿಗೆ ಯಾವುದೇ ಅಡ್ಡಿಯಾಗಲಿಲ್ಲ. ರಥ ಸಾಗುವ ದಾರಿಯುದ್ದಕ್ಕೂ ರಸ್ತೆ ಶುಭ್ರಗೊಳಿಸಿ ರಂಗೋಲಿ ಚಿತ್ತಾರಗಳಿಂದ ಸಿಂಗರಿಸಲಾಗಿತ್ತು.

ರಥೋತ್ಸವದ ನಂತರ ವಿಶೇಷ ಪೂಜೆ ನಡೆಯಿತು. ಭಕ್ತರ ನೂಕು ನುಗ್ಗಲು ಕಂಡುಬಂದಿತು. ಹಣ್ಣು ಕಾಯಿ,ಹರಕೆ ಸಮರ್ಪಿಸಿದರು. ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು.ರಸ್ತೆ ಇಕ್ಕೆಲಗಳಲ್ಲಿ ಜಾತ್ರೆ ಅಂಗಡಿಗಳ ಸಾಲು ಸಾಲು ಜಾತ್ರಾ ಮಹೋತ್ಸವಕ್ಕೆ ಇನ್ನಷ್ಟು ಮೆರಗು ನೀಡಿತ್ತು.

26 ಶ್ರೀ ಚಿತ್ರ 1-

ಶೃಂಗೇರಿ ಕಿಗ್ಗಾ ಮಳೆ ದೇವರು ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ಮಹಾರಥೋತ್ಸವ ವೈಭವಯುತವಾಗಿ ನಡೆಯಿತು.