ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಜಾನಪದ ಸೊಗಡಿನ ಇತಿಹಾಸ ಪ್ರಸಿದ್ಧ ಕಿಕ್ಕೇರಮ್ಮ(ಮಹಾಲಕ್ಷ್ಮೀ)ನವರ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರು ಸಂಪನ್ನವಾಗುವ ಮೂಲಕ ವಿಜೃಂಭಣೆಯಿಂದ ನೆರವೇರಿತು.ಬುಧವಾರ ಮುಸ್ಸಂಜೆಯ ಭಾಸ್ಕರನ ಹೊಂಗಿರಣದಲ್ಲಿ ಹೊನ್ನಿನತೇರಿನಂತೆ ರಥೋತ್ಸವ ಕಂಗೊಳಿಸಿತು. ಮಹಾದೇವಿ ಪುತ್ಥಳಿ ಮೇಲೆ ಸೂರ್ಯರಶ್ಮಿ ಪ್ರಜ್ವಲಿಸುವುದನ್ನು ಭಕ್ತರು ಕಣ್ತುಂಬಿಕೊಂಡರು. ಸಂಜೆ 5ಕ್ಕೆ ದೇವಿ ಮಹಾರಥೋತ್ಸವ ಜರುಗಿ ಸುಮಾರು 2 ಕಿ.ಮೀ.ದೂರದ ದೇವಿಯ ಮೂಲ ಗುಡಿಯವರೆಗೆ ಭಕ್ತರು ಜಯಘೋಷದೊಂದಿಗೆ ರಥವನ್ನು ಎಳೆದುಕೊಂಡು ಸಾಗಿದರು.
ರಥೋತ್ಸವಕ್ಕೂ ಮುನ್ನ ಮೂಲದೇವಿ ಹಾಗೂ ಉತ್ಸವಮೂರ್ತಿ ಚಿಕ್ಕಮ್ಮ ದೇವರಿಗೆ ವಿವಿಧ ಆಭರಣ, ವಸ್ತ್ರ, ಪುಷ್ಪಗಳಿಂದ ಶೃಂಗರಿಸಿ ಅಗ್ರಪೂಜೆ ಸಲ್ಲಿಸಿ ದೇಗುಲ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ದೇವಿಗೆ ಏಕಾರತಿ, ದಟ್ಟಾರತಿ, ನಿತ್ಯಕೈಂಕರ್ಯ ಪೂಜೆ, ಅಷ್ಟಾವಧನ ಸೇವೆ, ವಿಶೇಷ ಪೂಜೆ, ಮಹಾಪೂಜೆ, ಪಂಚಾಮೃತ ಅಭಿಷೇಕ ಜರುಗಿತು.ನಂತರ ದೇವಿಯನ್ನು ಹೊಸಬೀದಿ, ರಥಬೀದಿ, ಕೆ.ಎಸ್.ನರಸಿಂಹಸ್ವಾಮಿ ಬೀದಿ, ಬ್ರಹ್ಮೇಶ್ವರ ದೇಗುಲ ಬೀದಿ ಸುತ್ತ ಮೆರವಣಿಗೆ ಮಾಡಲಾಯಿತು.ಪ್ರ ತಿ ಮನೆ ಮುಂದೆ ರಂಗೋಲಿ ಬಿಡಿಸಿ, ತಳಿರು ತೋರಣಕಟ್ಟಿ ದೇವಿಯನ್ನು ಬರಮಾಡಿಕೊಂಡು ಹಣ್ಣು, ಕಾಯಿ, ನೈವೇದ್ಯ ಅರ್ಪಿಸಿ, ಇಡುಗಾಯಿ ಹಾಕಿ ಧೂಪ, ದೀಪಧಾರತಿ ಬೆಳಗಿದರು.
ಕಳಸ ಪೂಜೆ, ಧ್ವಜಪಟ ಪೂಜೆ, ರಥ ಪೂಜೆ, ಬಲಿಯನ್ನಅರ್ಪಣಾ ಪೂಜೆ, ಮಹಾಮಂಗಳಾರತಿ ನಡೆದು ದೇವಿಯ ಆಶೀರ್ವಾದ ಸ್ವೀಕರಿಸಿ ಅಮ್ಮನವರನ್ನು ಮಹಾರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ದೇವಿ ಹಾಗೂ ರಥದ ಗಾಲಿಗಳಿಗೆ ನಿರ್ವಿಘ್ನವಾಗಿ ರಥೋತ್ಸವ ಸಾಗಲು ಪೂಜಿಸಿ, ಪ್ರಾರ್ಥಿಸಿದರು. ಮಂಗಳವಾದ್ಯ, ನಾದಸ್ವರದೊಂದಿಗೆ ಭಕ್ತರುಕಿಕ್ಕೇರಮ್ಮ ಉಘೇ, ಮಹಾಲಕ್ಷ್ಮೀ ಉಘೇ, ಲಕ್ಕಮ್ಮ ಉಘೆ ಎಂದು ಉದ್ಘೋಷಕೂಗುತ್ತ ಹಣ್ಣುಧವನ ರಥಕ್ಕೆ ಎಸೆದರು.
ಜಿಲ್ಲೆ, ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದ ಭಕ್ತರು, ನವಜೋಡಿಗಳು ದಂಡಿಯಾಗಿ ಆಗಮಿಸಿದ್ದರು. ದಾರಿಯುದ್ದಕ್ಕೂ ದಾನಿಗಳು ರಸಾಯನ, ಪಾನಕ, ಕೋಸಂಬರಿ, ಚಿತ್ರನ್ನ, ಪುಳಿಯೋಗರೆ, ಮೊಸರನ್ನ, ನೀರು ಮಜ್ಜಿಗೆ, ಪಾನಕ ಸೇವೆ ಹಮ್ಮಿಕೊಂಡು ಭಕ್ತರದಾಹ ತಣಿಸಿದರು.
ಕಿಕ್ಕೇರಿ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಪಟಕುಣಿತ, ನಾಸಿಕ್ ಮೇಳ ಕಲಾತಂಡ ಆಕರ್ಷಿಸಿತು. ಗ್ರಾಮದ ದೇವಿ ಒಕ್ಕಲಿನ ಕೆಂಚಮ್ಮ, ದೊಡ್ಡಹಟ್ಟಿ, ಬೂನಾಸಿ, ಮಾರಮ್ಮ ವಠಾರದ ಮುಖಂಡರು, ಸುತ್ತಮುತ್ತಲಿನ ಗ್ರಾಮಸ್ಥರು, ಹೊರ ಜಿಲ್ಲೆಯ ಅಪಾರ ಭಕ್ತರು ಇದ್ದರು.