ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ಸುಮಾರು ೩೦ ವರ್ಷಗಳಿಂದ ಒತ್ತುವರಿ ಮಾಡಿಕೊಂಡಿದ್ದ ಜಮೀನಿನಲ್ಲಿ ಬೆಳೆದಿದ್ದ ತೆಂಗಿನ ಮರಗಳನ್ನು ಬೆಳೆಸಿದ್ದವರೇ ತುಂಡರಿಸಿದ ಘಟನೆ ಸಮೀಪದ ಅಪ್ಪಸಂದ್ರದಲ್ಲಿ ನಡೆದಿದೆ.ಅಪ್ಪಸಂದ್ರದ ಸಿದ್ದಗಂಗಮ್ಮ ಎಂಬುವರಿಗೆ ಸರ್ವೇ ನಂಬರ್ ೧೨೦ ರಲ್ಲಿ ೪.೦೧ ಗುಂಟೆ ಜಮೀನಿದೆ. ಇದು ಪಿತ್ರಾರ್ಜಿತ ಆಸ್ತಿಯಾಗಿತ್ತು. ಜಮೀನಿನ ಮಾಲೀಕತ್ವದ ಕುರಿತು ಗೊಂದಲ ಉಂಟಾಗಿತ್ತು. ಜಮೀನಿನ ಪಕ್ಕದ ಕಾಳೇಗೌಡರು ಆಕೆಯ ಜಮೀನನ್ನು ಅನುಭವಿಸುತ್ತಿದ್ದರು. ಇತ್ತೀಚೆಗೆ ಜಮೀನು ಅಳತೆ ಮಾಡುವ ವೇಳೆ ಕಾಳೆಗೌಡರು ಉಳುಮೆ ಮಾಡಿ ತೆಂಗಿನ ಮರಗಳನ್ನು ಬೆಳೆಸಿದ್ದ ಜಮೀನು ಸಿದ್ದಗಂಗಮ್ಮನದು ಎಂದು ತಿಳಿದುಬಂದಿತ್ತು. ಸಿದ್ದಗಂಗಮ್ಮನಿಗೆ ಸೇರಿದ್ದ ಜಮೀನಿನಲ್ಲಿ ಸುಮಾರು ೪೨ ತೆಂಗಿನಮರಗಳನ್ನು ಬೆಳೆಸಿದ್ದರು. ಅವುಗಳು ಫಲವನ್ನೂ ಸಹ ನೀಡುತ್ತಿದ್ದವು. ಅಳತೆಯಾದ ನಂತರ ಸಿದ್ದಗಂಗಮ್ಮ ತನಗೆ ಬರಬೇಕಾಗಿರುವ ಜಮೀನನ್ನು ಬಿಡು ಎಂದು ಕೇಳಿದ್ದಾರೆ. ಅದಕ್ಕೆ ಕಾಳೇಗೌಡ ಮತ್ತು ಮಕ್ಕಳು ಕಳೆದ ೩೦ ವರ್ಷಗಳಿಂದ ಗೊತ್ತೋ ಗೊತ್ತಿಲ್ಲದೆಯೋ ಜಮೀನನ್ನು ಅನುಭವಿಸಿದ್ದೇವೆ. ಮರಗಳನ್ನೂ ಸಹ ಬೆಳೆಸಿದ್ದೇವೆ. ಹಾಗಾಗಿ ಇದರಷ್ಠೇ ಜಮೀನನ್ನು ಬೇರೆಡೆ ಕೊಡುವ ಬಗ್ಗೆ ಸಿದ್ದಗಂಗಮ್ಮನ ಬಳಿ ಕೇಳಿದ್ದಾರೆ. ಆದರೆ ಸಿದ್ದಗಂಗಮ್ಮ ತನ್ನ ಜಮೀನನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಹಠ ಹಿಡಿದಿದ್ದಾರೆ.ಗ್ರಾಮಸ್ಥರು ನಡೆಸಿದ ರಾಜೀ ಸಂಧಾನದಲ್ಲಿ ಮರಗಳನ್ನು ಬೆಳೆಸಿದ್ದಕ್ಕಾಗಿ ಒಂದಿಷ್ಟು ಹಣದ ರೂಪದಲ್ಲಿ ಪರಿಹಾರ ಕೊಡಿಸಲು ಪ್ರಯತ್ನಿಸಿದ್ದಾರೆ. ಆದರೆ ಸಿದ್ದಗಂಗಮ್ಮ ೩೦ ವರ್ಷಗಳಿಂದ ನನ್ನ ಜಮೀನನ್ನು ಅನುಭವಿಸಿದ್ದಾರೆ. ಅದರ ಫಲವನ್ನೂ ಸಹ ಉಂಡಿದ್ದಾರೆ. ಅಲ್ಲದೇ ನನಗೆ ಜಮೀನಿನ ಹಕ್ಕು ಇದೆ. ಹಾಗಾಗಿ ಯಾವುದೇ ಕಾರಣಕ್ಕೂ ಜಮೀನಿನ ಹಕ್ಕನ್ನು ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದ ವೇಳೆ ನೀನು ನೆಟ್ಟಿರುವ ತೆಂಗಿನ ಮರಗಳನ್ನು ಕಡಿದು ಕೋ ನನಗೇನು ಎಂದು ಸಿದ್ದಗಂಗಮ್ಮ ಹೇಳಿದರು ಎಂದು ತಿಳಿದುಬಂದಿದೆ. ಇದರಿಂದ ಆಕ್ರೋಶಗೊಂಡ ಕಾಳೇಗೌಡರ ಮಕ್ಕಳಾದ ಉಮೇಶ ಮತ್ತು ರಾಜು ಒತ್ತುವರಿಯಾಗಿದ್ದ ಜಮೀನಿನಲ್ಲಿ ಬೆಳೆಸಿದ್ದ ಸುಮಾರು ೪೨ ತೆಂಗಿನ ಮರಗಳನ್ನು ತಾವೇ ಕಡಿದು ಹಾಕಿದರು ಎಂದು ತಿಳಿದುಬಂದಿದೆ. ದಾಖಲೆಗಳ ಪ್ರಕಾರ ತನ್ನದಾದ ಜಮೀನಿನಲ್ಲಿ ಕಡಿದ ತೆಂಗಿನ ಮರಗಳನ್ನು ತಬ್ಬಿಕೊಂಡು. ಕೈಯಲ್ಲಿ ಮುಟ್ಟಿ ಸಿದ್ದಗಂಗಮ್ಮ ಕಣ್ಣೀರಿಡುವ ದೃಶ್ಯ ವೈರಲ್ ಆಗಿದೆ. ಸಿದ್ದಗಂಗಮ್ಮ ಗೋಳಿಡುವ ದೃಶ್ಯ ಎಂತಹವರ ಎದೆಯನ್ನೂ ಕ್ಷಣಕಾಲ ಚಡಪಡಿಸುವಂತೆ ಮಾಡುತ್ತದೆ.
ದೂರು: ಅಧಿಕೃತವಾಗಿ ತಮ್ಮ ಹೆಸರಿನಲ್ಲಿರುವ ಜಮೀನಿನಲ್ಲಿ ಬೆಳೆಯಲಾಗಿದ್ದ ತೆಂಗಿನ ಮರಗಳನ್ನು ಕಾಳೇಗೌಡರ ಮಕ್ಕಳಾದ ಉಮೇಶ್ ಮತ್ತು ರಾಜು ಎಂಬುವವರು ಕಡಿದು ಹಾಕಿದ್ದಾರೆ. ಕೇಳಲು ಹೋಗಿದ್ದ ಸಂದರ್ಭದಲ್ಲಿ ನನ್ನ ಅಳಿಯ ಹೊನ್ನಪ್ಪ ಮತ್ತು ನನ್ನ ವಿರುದ್ದ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲು ಮುಂದಾದರು ಎಂದು ದಂಡಿನಶಿವರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಕ್ರಮಕ್ಕೆ ಆಗ್ರಹ : ದಂಡಿನಶಿವರ ಪೋಲಿಸರು ಮರಗಳನ್ನು ಕಡಿದಿರುವ ವ್ಯಕ್ತಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮ ಜಮೀನಿಗೆ ಅಕ್ರಮವಾಗಿ ಪ್ರವೇಶ ಮಾಡಿ ೪೨ ತೆಂಗಿನಮರಗಳನ್ನು ಕಡಿದಿರುವ ವ್ಯಕ್ತಿಗಳನ್ನು ಕೂಡಲೇ ಬಂಧಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿದ್ದಾರೆ. ಸೂಕ್ತ ಪರಿಹಾರವನ್ನೂ ಸಹ ನೀಡಬೇಕೆಂದು ಆಗ್ರಹಿಸಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))