ಸಾರಾಂಶ
ಹುಬ್ಬಳ್ಳಿಯಲ್ಲಿ ನಡೆದಿರುವ ಯುವತಿ ಅಂಜಲಿ ಹತ್ಯೆ ಹಾಗೂ ನೇಹಾ ಹತ್ಯೆ ಪ್ರಕರಣಗಳು ರಾಜ್ಯ ಸರ್ಕಾರದ ಕಾನೂನು ಸುವ್ಯವಸ್ಥೆ ವೈಫಲ್ಯವೇ ಪ್ರಮುಖ ಕಾರಣವಾಗಿದ್ದು, ಈ ಸರ್ಕಾರದಿಂದ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾದಿಂದ ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ದೂರು ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಹುಬ್ಬಳ್ಳಿಯಲ್ಲಿ ನಡೆದಿರುವ ಯುವತಿ ಅಂಜಲಿ ಹತ್ಯೆ ಹಾಗೂ ನೇಹಾ ಹತ್ಯೆ ಪ್ರಕರಣಗಳು ರಾಜ್ಯ ಸರ್ಕಾರದ ಕಾನೂನು ಸುವ್ಯವಸ್ಥೆ ವೈಫಲ್ಯವೇ ಪ್ರಮುಖ ಕಾರಣವಾಗಿದ್ದು, ಈ ಸರ್ಕಾರದಿಂದ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾದಿಂದ ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ದೂರು ಸಲ್ಲಿಸಲಾಯಿತು.ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಗೆ ಮಹಿಳಾ ಮೋರ್ಚಾ ಅಧ್ಯಕ್ಷೆ ಮಲೆಯೂರು ಕಮಲಮ್ಮ ನೇತೃತ್ವದಲ್ಲಿ ಪದಾಧಿಕಾರಿಗಳು ಆಗಮಿಸಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷೆ ಮಲೆಯೂರು ಕಮಲಮ್ಮ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಮಹಿಳೆಯರಿಗೆ ಕಾಂಗ್ರೆಸ್ ಸರ್ಕಾರ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ. ಹುಬ್ಬಳ್ಳಿಯಲ್ಲಿ ನಡೆದಿರುವ ನೇಹಾ ಹಾಗೂ ಅಂಜಲಿ ಹತ್ಯೆಯಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಅಂಜಲಿ ಮನೆಯವರು ಆರೋಪಿಯ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಸಹ ಅಲ್ಲಿನ ಪೊಲೀಸರು ನಿರ್ಲಕ್ಷ್ಯ ವಹಿಸಿರುವುದು ಅಂಜಲಿ ಹತ್ಯೆಗೆ ಪ್ರಮುಖ ಕಾರಣವಾಗಿದೆ ಎಂದರು.
ಹುಬ್ಬಳ್ಳಿಯಲ್ಲಿ ಹತ್ಯೆಯಾದ ನೇಹಾ ಹಿರೇಮಠ ನೆನಪು ಮಾಸುವ ಮುನ್ನವೇ ಮತ್ತೊಬ್ಬ ಯುವತಿ ಅಂಜಲಿ ಕೊಲೆಯಾಗಿದೆ. ಆರೋಪಿಯನ್ನು ಬಂಧಿಸಿರುವುದು ಸರಿಯಲ್ಲ, ಆದರೆ ನೇಹಾ ಹಿರೇಮಠ್ ಕೊಲೆಯಾದ ನಂತರ ಪೋಲೀಸರು ಎಚ್ಚೆತ್ತುಕೊಳ್ಳಬೇಕಿತ್ತು. ಪೋಲೀಸರು ಮತ್ತು ರಾಜ್ಯ ಸರ್ಕಾರದ ನಡುವೆ ಸಮನ್ವಯತೆಯ ಕೊರತೆ ಇದೆ. ಪೋಲೀಸ್ ಇಲಾಖೆಯಲ್ಲಿನ ಲೋಪದೋಷದ ಕಾರಣದಿಂದ ಅಂಜಲಿ ಕೊಲೆಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅಧೋಗತಿಗೆ ತಲುಪಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಪರಮೇಶ್ವರ್ ಅವರು ನೇರ ಹೊಣೆಗಾರರಾಗಿದ್ದಾರೆ ಎಂದು ಆರೋಪಿಸಿದರು. ಅಂಜಲಿ ಕೊಲೆ ಅಮಾನುಷ್ಯವಾದ ಹಾಗೂ ಅತ್ಯಂತ ಧಾರುಣವಾದ ಹತ್ಯೆಯಾಗಿದ್ದು, ಆರೋಪಿಯು ಮನೆಗೆ ನುಗ್ಗಿ ಕೊಲೆ ಮಾಡಿರುತ್ತಾನೆ. ಈ ನೆಲದ ಕಾನೂನಿಗೆ ಬೆಲೆ ಇಲ್ಲದಂತಾಗಿದೆ. ಈ ನೆಲದ ಕಾನೂನಿನ ಮೇಲೆ ಗೌರವ ಬರಬೇಕಾದರೆ ರಾಜ್ಯ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು ರಾಜ್ಯದ ಜನರ ಸುರಕ್ಷತೆಗೆ ಕ್ರಮ ವಹಿಸಬೇಕು ಒಂದು ವಾರದ ಹಿಂದೆಯೇ ಆರೋಪಿ ಗಿರೀಶ್ ಅಂಜಲಿ ಕೊಲೆ ಬೆದರಿಕೆ ಹಾಕಿದ್ದ ಎಂದು ಕುಟುಂಬಸ್ಥರು ಠಾಣೆಗೆ ತಿಳಿಸಿದ್ದರು. ಆಗಲೇ ಕ್ರಮ ಕೈಗೊಂಡಿದ್ದರೆ ಈ ಹತ್ಯೆಯಾಗುತ್ತಿರಲಿಲ್ಲ. ಈಗ ನಡೆದಿರುವ ಹತ್ಯೆಗಳಿಗೆ ನ್ಯಾಯ ದೊರಕಿಸುವುದು ಹಾಗೂ ಮುಂದೆ ಇಂತಹ ಹೇಯ ಕೃತ್ಯಗಳು ನಡೆಯದಂತೆ ತಡೆಯುವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಈ ಪರಿಸ್ಥಿತಿ ಮುಂದುವರೆದರೆ ಬಿಜೆಪಿ ಮಹಿಳಾ ಮೋರ್ಚಾದಿಂದ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಕಮಲಮ್ಮ ಮನವಿ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೈಲಾ, ಉಪಾಧ್ಯಕ್ಷೆ ಮಮತಾ ಬಾಲಸುಬ್ರಮಣ್ಯ, ಜಯಶೀಲಾ ರಾಜಶೇಖರ್, ಕಾರ್ಯಕಾರಿಣಿ ಸದಸ್ಯೆ ದಾಕ್ಷಾಯಣಿ ಇತರರು ಇದ್ದರು.