ಕಿಮ್ಸ್‌: ಚಾವಣಿಗೆ ಅಳವಡಿಸಿದ್ದ ಪಿಒಪಿ ಕುಸಿತ

| Published : Jun 29 2024, 12:32 AM IST

ಸಾರಾಂಶ

ಆಸ್ಪತ್ರೆಯ ಒಳಗಡೆ ಅಳವಡಿಸಿದ್ದ ಪಿಒಪಿ ಶುಕ್ರವಾರ ಬೆಳಗ್ಗೆ ಸಂಪೂರ್ಣವಾಗಿ ಕಳಚಿ ಕೆಳಗೆ ಬಿದ್ದಿದೆ. ಇದರ ಪಕ್ಕದಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದ ಹಲವು ಸಿಬ್ಬಂದಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.

ಹುಬ್ಬಳ್ಳಿ:

ಕಳೆದ 5 ವರ್ಷಗಳ ಹಿಂದೆ ಇಲ್ಲಿನ ಕಿಮ್ಸ್‌ನ ಆವರಣದಲ್ಲಿ ನಿರ್ಮಿಸಲಾದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಒಳಗೆ ಅಳವಡಿಸಲಾಗಿದ್ದ ಪಿಒಪಿ ಚಾವಣಿ ಕುಸಿದು ಬಿದ್ದ ಘಟನೆ ಶುಕ್ರವಾರ ನಡೆದಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿಯಾಗಿಲ್ಲ.

ಆಸ್ಪತ್ರೆಯ ಒಳಗಡೆ ಅಳವಡಿಸಿದ್ದ ಪಿಒಪಿ ಶುಕ್ರವಾರ ಬೆಳಗ್ಗೆ ಸಂಪೂರ್ಣವಾಗಿ ಕಳಚಿ ಕೆಳಗೆ ಬಿದ್ದಿದೆ. ಇದರ ಪಕ್ಕದಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದ ಹಲವು ಸಿಬ್ಬಂದಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ವಿದ್ಯಾನಗರ ಪೊಲೀಸ್‌ ಠಾಣೆಯ ಸಿಬ್ಬಂದಿ, ಕಿಮ್ಸ್‌ ನಿರ್ದೇಶಕ ಡಾ. ಎಸ್‌.ಎಫ್‌. ಕಮ್ಮಾರ, ಆಡಳಿತ ಮಂಡಳಿಯ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು.

ಕಳೆದ 2019ರಲ್ಲಿ ಕಿಮ್ಸ್‌ ಆವರಣದಲ್ಲಿ ಸುಮಾರು ₹150 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ಮೂಲಕ ಲೋಕಾರ್ಪಣೆಗೊಳಿಸಿದ್ದರು. ಕೇವಲ 5 ವರ್ಷಗಳಲ್ಲಿಯೇ ಕಟ್ಟಡದ ಹಲವು ಕಡೆಗಳಲ್ಲಿ ಮಳೆನೀರು ಸೋರಿಕೆಯಾಗುತ್ತಿದೆ. ಅಲ್ಲದೇ ಚಾವಣಿಗೆ ಅಳವಡಿಸಿರುವ ಭಾಗಶಃ ಪಿಒಪಿ ಬೀಳುವ ಹಂತದಲ್ಲಿವೆ. ಒಟ್ಟಾರೆ ಕಾಮಗಾರಿ ಸ್ಥಿತಿ ನೋಡಿದರೆ ಸಂಪೂರ್ಣವಾಗಿ ಕಳಪೆಯಿಂದ ಕೂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಸಿಬ್ಬಂದಿಗಳನ್ನು ಮಾತನಾಡಿಸಿದಾಗ ಆಸ್ಪತ್ರೆ ಒಳಗೆ ಅಳವಡಿಸಿರುವ ಪಿಒಪಿ ಸಂಪೂರ್ಣ ಹಾಳಾಗಿದೆ. ಎಲ್ಲೆಂದರಲ್ಲಿ ಕಿತ್ತುಹೋಗಿದ್ದು ಬೀಳುವ ಹಂತದಲ್ಲಿವೆ. ಹಲವೆಡೆ ಪಿಒಪಿ ಕಿತ್ತುಹೋಗಿದ್ದು, ಯಾವಾಗ ಬೀಳುತ್ತದೆಯೋ ಎಂಬ ಭಯದಲ್ಲಿಯೇ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ ಎಂದು ಕನ್ನಡಪ್ರಭದ ಎದುರು ಅಳವು ತೋಡಿಕೊಂಡರು.

ಮೊದಲಿನಿಂದಲೂ ಸೀಲಿಂಗ್‌ ಸೋರಿಕೆ

ಕಟ್ಟಡ ಆರಂಭಿಸಿದಾಗಿನಿಂದಲೂ ಸೀಲಿಂಗ್‌ನಲ್ಲಿ ಸೋರಿಕೆಯಾಗುತ್ತಿತ್ತು. ದುರಸ್ತಿ ಮಾಡುತ್ತಲೇ ಇತ್ತು. ಶುಕ್ರವಾರ ಅಚಾನಕ್ಕಾಗಿ ಕುಸಿತ ಕಂಡಿದೆ. ತಕ್ಷಣ ಭೇಟಿ ನೀಡಿ ಅಗತ್ಯ ಮುನ್ನೆಚ್ಚರಿಕಾ ಕ್ರಮಕೈಗೊಳ್ಳಲಾಗಿದೆ. ಪಿಎಂಎಸ್‌ಎಸ್‌ಒ ಅಡಿ ಗ್ಲೋಬಲ್ ಹೈಟ್ಸ್ ಕಂಪನಿ ಈ ಆಸ್ಪತ್ರೆ ನಿರ್ಮಿಸಿದೆ. ಸೀಲಿಂಗ್ ನಲ್ಲಿ ಸೋರಿಕೆ ಕುರಿತು ಈಗಾಗಲೇ ಮಾಹಿತಿ ನೀಡಿದ್ದೆವು. ನಾಲ್ಕು ಬಾರಿ ನೋಟಿಸ್‌ ಸಹ ನೀಡಲಾಗಿದೆ. ತಾಂತ್ರಿಕ ತಂಡ ಕೊಡುವ ವರದಿ ಆಧರಿಸಿ ನಾವೇ ದುರಸ್ತಿ ಕಾರ್ಯ ಮಾಡುತ್ತೇವೆ. ಇಲ್ಲಿನ ನ್ಯೂನತೆಗಳ ಬಗ್ಗೆ ಪತ್ರ ಬರೆದರೂ ಈ ವರೆಗೂ ಗುತ್ತಿಗೆದಾರರಿಂದ ಉತ್ತರ ಬಂದಿಲ್ಲ ಎಂದು ಕಿಮ್ಸ್‌ ನಿರ್ದೇಶಕ ಡಾ. ಎಸ್‌.ಎಫ್. ಕಮ್ಮಾರ ತಿಳಿಸಿದರು.

ಪತ್ರಕರ್ತರ ಪ್ರವೇಶಕ್ಕೆ ಅಡ್ಡಿ

ಘಟನೆಯ ಕುರಿತು ವರದಿ ಮಾಡಲು ತೆರಳಿದ್ದ ಪತ್ರಕರ್ತರಿಗೆ ಆಸ್ಪತ್ರೆಯ ಒಳಗಡೆ ತೆರಳಲು ಕಿಮ್ಸ್‌ನ ಭದ್ರತಾ ಸಿಬ್ಬಂದಿ ಅವಕಾಶ ಕಲ್ಪಿಸಿಕೊಡಲಿಲ್ಲ. ಯಾವುದೇ ಕಾರಣಕ್ಕೂ ವರದಿಗಾರರನ್ನು ಒಳಗೆ ಬಿಡಬೇಡಿ ಎಂದು ಕಿಮ್ಸ್‌ ನಿರ್ದೇಶಕರೇ ನಮಗೆ ಹೇಳಿದ್ದಾರೆ ಎಂದು ಸಿಬ್ಬಂದಿಗಳು ವರದಿಗೆ ತೆರಳಿದ್ದ ಪತ್ರಕರ್ತರೊಂದಿಗೆ ವಾಗ್ವಾದ ನಡೆಸಿದರು. ಕೊನೆಗೆ ನಿರ್ದೇಶಕರಿಗೆ ವರದಿಗಾರರೇ ಕರೆ ಮಾಡಿ ಅಲ್ಲಿನ ಭದ್ರತಾ ಸಿಬ್ಬಂದಿಗೆ ಕೊಟ್ಟ ಬಳಿಕ ಆಸ್ಪತ್ರೆಯ ಒಳಗಡೆ ಬಿಟ್ಟರು.