ನಿರ್ವಹಣೆ ಇಲ್ಲದೆ ಬೇಸಿಗೆ ಮುನ್ನವೇ ಬರಿದಾದ ಕಿಂಡಿ ಆಣೆಕಟ್ಟು, ಬಾಂದಾರ

| Published : Feb 10 2024, 01:48 AM IST

ನಿರ್ವಹಣೆ ಇಲ್ಲದೆ ಬೇಸಿಗೆ ಮುನ್ನವೇ ಬರಿದಾದ ಕಿಂಡಿ ಆಣೆಕಟ್ಟು, ಬಾಂದಾರ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಚಟುವಟಿಕೆ ಹಾಗೂ ಅಂತರ್ಜಲ ವೃದ್ಧಿಯ ಮೂಲ ಉದ್ದೇಶದಿಂದ ತಾಲೂಕಿನ ವಿವಿಧೆಡೆ ನಿರ್ಮಿಸಿರುವ ಬಾಂದಾರ, ಕಿಂಡಿ ಅಣೆಕಟ್ಟುಗಳಲ್ಲಿ ಹಲಗೆ ಜೋಡಿಸದ ಕಾರಣಕ್ಕೆ ಬೇಸಿಗೆ ಆರಂಭಕ್ಕೂ ಮುನ್ನ ನೀರಿಲ್ಲದೆ ಬರಡಾಗಿ ನಿಂತಿವೆ.

ಶಿರಸಿ:

ಕೃಷಿ ಚಟುವಟಿಕೆ ಹಾಗೂ ಅಂತರ್ಜಲ ವೃದ್ಧಿಯ ಮೂಲ ಉದ್ದೇಶದಿಂದ ತಾಲೂಕಿನ ವಿವಿಧೆಡೆ ನಿರ್ಮಿಸಿರುವ ಬಾಂದಾರ, ಕಿಂಡಿ ಅಣೆಕಟ್ಟುಗಳಲ್ಲಿ ಹಲಗೆ ಜೋಡಿಸದ ಕಾರಣಕ್ಕೆ ಬೇಸಿಗೆ ಆರಂಭಕ್ಕೂ ಮುನ್ನ ನೀರಿಲ್ಲದೆ ಬರಡಾಗಿ ನಿಂತಿವೆ.ಹರಿಯುವ ನೀರನ್ನು ನಿಲ್ಲಿಸಿ, ನಿಂತ ನೀರನ್ನು ಇಂಗಿಸಿ ಎಂಬ ಧ್ಯೇಯದೊಂದಿಗೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯಿತಿಗಳಿಂದ ಕೋಟಿ, ಲಕ್ಷದ ಲೆಕ್ಕದಲ್ಲಿ ಅನುದಾನ ನೀಡಿ ಕಿಂಡಿ ಅಣೆಕಟ್ಟುಗಳ ನಿರ್ಮಿಸಲಾಗಿದೆ. ತಾಲೂಕಿನ ಕಲಗಾರ, ದೇವರಹೊಳೆ, ಬನವಾಸಿ ಹೋಬಳಿಯ ತಿಗಣಿ, ಭಾಶಿ ಸೇರಿದಂತೆ ಹಲವೆಡೆ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಅಂದಾಜು 6ರಿಂದ 8 ಸಾವಿರ ಎಕರೆಗೆ ನೀರಾವರಿ ಹಾಗೂ ಸಾವಿರಾರು ಮಂದಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಇವುಗಳ ನಿರ್ಮಾಣವಾಗಿದೆ. ಆದರೆ ಕಾಲಕಾಲಕ್ಕೆ ಹಲಗೆ ಜೋಡಣೆ ಮಾಡದ ಕಾರಣಕ್ಕೆ ಕಿಂಡಿ ಅಣೆಕಟ್ಟುಗಳು ಸಂಪೂರ್ಣ ಬರಿದಾಗಿವೆ.ವಿವಿಧ ಇಲಾಖೆಗೆ ಒಳಪಟ್ಟ ಹಲವು ಕಿಂಡಿ ಅಣೆಕಟ್ಟುಗಳಿದ್ದು, ಆಯಾಯಾ ಇಲಾಖೆಗಳೇ ಅವುಗಳ ನಿರ್ವಹಣೆಗೆ ಗಮನ ಹರಿಸಬೇಕು. ಕೆಲವೆಡೆ ಗ್ರಾಮ ಪಂಚಾಯಿತಿ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದರೆ, ಇನ್ನೂ ಕೆಲವೆಡೆ ಸಣ್ಣ ನೀರಾವರಿ ಇಲಾಖೆ ಜವಾಬ್ದಾರಿ ನಿರ್ವಹಿಸುತ್ತದೆ. ಆದರೆ ಎಲ್ಲಿಯೂ ನಿಗದಿತ ಸಮಯದಲ್ಲಿ ಹಲಗೆ ಜೋಡಣೆ ಕಾರ್ಯ ನಡೆದಿಲ್ಲ. ಡಿಸೆಂಬರ್ ಆರಂಭದಲ್ಲಿ ಬೇಸಿಗೆ ವಾತಾವರಣವಿದ್ದರೂ, ಆಗಲೂ ನೀರು ನಿಲ್ಲಿಸುವ ಪ್ರಯತ್ನ ಮಾಡಿಲ್ಲ. ಅನುದಾನ ನೀಡುವ ಇಲಾಖೆಗಳಿಗೆ ಇದರ ನಿರ್ವಹಣೆಯ ಹೊಣೆ ಇಲ್ಲ. ಈ ಕಾರಣದಿಂದ ಇಲ್ಲಿ ನೀರು ನಿಲ್ಲುವುದೂ ಇಲ್ಲ, ಇಂಗುವುದೂ ಇಲ್ಲ. ಪ್ರಸ್ತುತ ಹೊಳೆಗಳಲ್ಲಿ ಹರಿವು ನಿಂತಿದೆ. ಈಗ ಗೇಟ್ ಹಾಕಿದರೆ ಪ್ರಯೋಜವಿಲ್ಲ ಎಂಬುದು ಹಲವು ಗ್ರಾಮಸ್ಥರ ಅಭಿಪ್ರಾಯ.ಹಲವೆಡೆ ಒಂದೆರಡು ವರ್ಷ ಕಿಂಡಿ ಅಣೆಕಟ್ಟು ನಿರ್ಮಾಣದ ಉದ್ದೇಶ ಈಡೇರಿದೆಯೇ ಹೊರತು ಆ ಮೇಲೆ ಅದು ಉಪಯೋಗ ಶೂನ್ಯವಾಗಿದೆ. ಇದಕ್ಕೆ ಮೂಲ ಕಾರಣ ನಿರ್ವಹಣೆ ಮಾಡದಿರುವುದಾಗಿದೆ. ವರ್ಷಂಪ್ರತಿ ಹೊಳೆಯಲ್ಲಿ ಸ್ವಲ್ಪ ಮಟ್ಟಿನ ನೀರಿನ ಹರಿವು ಇರುವ ನವೆಂಬರ್‌-ಡಿಸೆಂಬರ್‌ ತಿಂಗಳಲ್ಲಿ ಇದಕ್ಕೆ ಹಲಗೆ ಜೋಡಿಸಬೇಕು. ಹಲಗೆಗಳ ಮಧ್ಯೆ ಮಣ್ಣು ಹಾಕಬೇಕು. ಮಳೆಗಾಲ ಆರಂಭಕ್ಕೆ ಮುನ್ನ ಹಲಗೆಗಳನ್ನು ತೆಗೆಯಬೇಕು. ಆದರೆ ಇವುಗಳನ್ನು ಮಾಡದ ಕಾರಣ ಕಿಂಡಿ ಅಣೆಕಟ್ಟುಗಳು ಕಾಡಿನ ಮರ-ಮಟ್ಟುಗಳು, ತ್ಯಾಜ್ಯ, ಕಸ-ಕಡ್ಡಿಗಳು ಸಿಲುಕುವ ಕೇಂದ್ರವಾಗಿ ಮಾರ್ಪಡುತ್ತಿವೆ ಎಂಬುದು ಪರಿಸರ ತಜ್ಞ ಶಿವಾನಂದ ಕಳವೆ ಮಾತಾಗಿದೆ.

ಪ್ರಸಕ್ತ ವರ್ಷ ಬರಗಾಲದಂಥ ಸನ್ನಿವೇಶ ಇದ್ದರೂ ಯಾರೊಬ್ಬರೂ ಎಚ್ಚರವಹಿಸಿಲ್ಲ. ಹೀಗಾಗಿ ಇಂದು ಕೃಷಿಗೆ, ಕುಡಿಯಲು ನೀರು ಕೂಡ ಉಳಿದಿಲ್ಲ ಎಂದು ಬನವಾಸಿ ನಿವಾಸಿ ಗಣೇಶ ನಾಯ್ಕ ಹೇಳಿದರು.

ಶಿರಸಿ ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಬಾಂದಾರ್‌, ಕಿಂಡಿ ಅಣೆಕಟ್ಟುಗಳಿವೆ. ಅವುಗಳಲ್ಲಿ ಕೆಲವಷ್ಟಕ್ಕೆ ಹಲಗೆ ಜೋಡಿಸಲಾಗಿದೆ. ಇನ್ನುಳಿದವು ಇನ್ನಷ್ಟೇ ಹಾಕಬೇಕಿದೆ ಎಂದು ಸಣ್ಣ ನೀರಾವರಿ ಇಲಾಖೆ ಎಇಇ ಬಸವರಾಜ್ ಬಿ.ಎಚ್. ಹೇಳಿದರು.