ಅನ್ನಭಾಗ್ಯದಿಂದ ರಾಜ್ಯ ಹಸಿವು ಮುಕ್ತ, ತಗ್ಗಿದ ಭಿಕ್ಷಾಟನೆ: ರಾಯರಡ್ಡಿ

| Published : Apr 24 2024, 02:16 AM IST

ಅನ್ನಭಾಗ್ಯದಿಂದ ರಾಜ್ಯ ಹಸಿವು ಮುಕ್ತ, ತಗ್ಗಿದ ಭಿಕ್ಷಾಟನೆ: ರಾಯರಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಸಿಎಂ ಸಿದ್ದರಾಮಯ್ಯನವರು ನೀಡಿರುವ ಅನ್ನಭಾಗ್ಯದಿಂದ ರಾಜ್ಯ ಹಸಿವು ಮುಕ್ತವಾಗಿದೆ.

ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿಕೆ । ಅರಕೇರಿಯಲ್ಲಿ ಕಾಂಗ್ರೆಸ್ ಪ್ರಚಾರಕನ್ನಡಪ್ರಭ ವಾರ್ತೆ ಕುಕನೂರು

ಸಿಎಂ ಸಿದ್ದರಾಮಯ್ಯನವರು ನೀಡಿರುವ ಅನ್ನಭಾಗ್ಯದಿಂದ ರಾಜ್ಯ ಹಸಿವು ಮುಕ್ತವಾಗಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ಅರಕೇರಿ ಗ್ರಾಮದಲ್ಲಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಬಡತನದಿಂದ ಬೆಳೆದವರು. ಹಸಿವಿನ ಅರಿವು ಅವರಿಗಿದೆ. ಆ ನಿಟ್ಟಿನಲ್ಲಿ ಅವರು ರಾಜ್ಯದ ಜನತೆ ಯಾರೂ ಸಹ ಹಸಿವಿನಿಂದ ಮಲಗಬಾರದು, ಮರುಗಬಾರದು ಎಂದು ಅನ್ನಭಾಗ್ಯವನ್ನು ಜಾರಿಗೆ ತಂದರು. ಉಚಿತವಾಗಿ ಐದು ಕೆಜಿ ಅಕ್ಕಿ ನೀಡಿದರು. ಸದ್ಯ 10 ಕೆಜಿ ಅಕ್ಕಿ ನೀಡುತ್ತಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿ ಐದು ಕೆಜಿ ಅಕ್ಕಿಯನ್ನು ರಾಜ್ಯಕ್ಕೆ ನೀಡಲಿಲ್ಲ. ಅದರ ಬದಲಿಗೆ ಐದು ಕೆಜಿಯ ಹಣವನ್ನು ಜನರ ಖಾತೆಗೆ ಹಾಕುತ್ತಿದ್ದೇವೆ. ಇದರಿಂದ ರಾಜ್ಯ ಹಸಿವು ಮುಕ್ತವಾಗಿದೆ ಎಂದರು.

ಈ ಹಿಂದೆ ರಾಜ್ಯದಲ್ಲಿ ಅಲ್ಲದೆ ರಾಷ್ಟ್ರದಲ್ಲಿ ಸಹ ಹಸಿವಿನಿಂದ ಭಿಕ್ಷಾಟನೆ ಕಂಡು ಬರುತ್ತಿತ್ತು. ಆದರೆ ಉಚಿತ ಆಹಾರ ಧಾನ್ಯ ವಿತರಣೆಯಿಂದ ರಾಜ್ಯದಲ್ಲಿ ಭಿಕ್ಷಾಟನೆ ತಗ್ಗಿದೆ. ಸಿಎಂ ಸಿದ್ದರಾಮಯ್ಯನವರು 2013, ಮೇ 13ರಂದು ಅನ್ನಭಾಗ್ಯ ಯೋಜನೆ ಜಾರಿಗೆ ತಂದರು. ಇದನ್ನು ನೋಡಿ ಆಗಿನ ಕಾಂಗ್ರೆಸ್ ಪ್ರಧಾನಿ ಮನಮೋಹನ್ ಸಿಂಗ್ 2013ರ ಜೂನ್‌ನಲ್ಲಿ ಆಹಾರ ಭದ್ರತಾ ಕಾಯ್ದೆಯನ್ನು ಇಡೀ ರಾಷ್ಟ್ರಕ್ಕೆ ಜಾರಿಗೆ ತಂದರು. ಆಹಾರ ಧಾನ್ಯಗಳನ್ನು ಸಂಗ್ರಹಿಸಿ ರಾಜ್ಯಗಳಿಗೆ ಕೊರತೆ ಆಗದಂತೆ ವಿತರಿಸುವ ಯೋಜನೆ ಈ ಕಾಯ್ದೆಯದ್ದಾಗಿದೆ. ಸಿಎಂ ಸಿದ್ದರಾಮಯ್ಯನವರು ಅಕ್ಕಿ ಉಚಿತ ನೀಡುತ್ತಿರುವುದರಿಂದ ಈಗ ಆಹಾರದ ಕೊರತೆ ಯಾರಿಗೂ ಇಲ್ಲ. ಹಸಿವಿನಿಂದ ಯಾರೂ ಬಳಲುತ್ತಿಲ್ಲ. ರಾಜ್ಯದಲ್ಲಿ 4 ಕೋಟಿ 37 ಲಕ್ಷ ಜನರಿಗೆ ಕಾಂಗ್ರೆಸ್ ಸರ್ಕಾರ ಆಹಾರ ಧಾನ್ಯ ನೀಡುತ್ತಿದೆ ಎಂದರು.

ಮುಖಂಡ ದೇವಪ್ಪ ಅರಕೇರಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅನೇಕ ಅಭಿವೃದ್ಧಿ ಕಾರ್ಯ ಆಗಿವೆ. ಯಲಬುರ್ಗಾ ಕ್ಷೇತ್ರದಲ್ಲಿ ಹತ್ತು ಪ್ರೌಢಶಾಲೆ, ಎರಡು ಮೊರಾರ್ಜಿ ದೇಸಾಯಿ ವಸತಿ ಶಾಲೆ, ನಾಲ್ಕು ಪಿಯುಸಿ ಕಾಲೇಜ್ ಮಂಜೂರು ಆಗಿವೆ ಎಂದರು.

ಕುಕನೂರು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಗೌಡ ಚಂಡೂರು, ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಯಂಕಣ್ಣ ಯರಾಶಿ, ಮುಖಂಡ ಕೆರಿಬಸಪ್ಪ ನಿಡಗುಂದಿ ಹಾಗೂ ಇತರರಿದ್ದರು.