ಸಾರಾಂಶ
ಸಹಕಾರದೊಂದಿಗೆ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ 7 ದಿನಗಳ ಕಾಲ 24 ನೇ ವರ್ಷ ಸಂಭ್ರಮ ಯಕ್ಷಗಾನ ತಾಳಮದ್ದಳೆ ಸಪ್ತಾಹ ‘ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ’ ಕಾರ್ಯಕ್ರಮದ ಸಮಾರೋಪ ನಡೆಯಿತು.
ಕನ್ನಡಪ್ರಭವಾರ್ತೆ ಮೂಲ್ಕಿ
ಯಕ್ಷಗಾನ ಹಾಗೂ ತಾಳಮದ್ದಳೆಗಳ ಮೂಲಕ ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುವ ಸೇವಾ ಸಂಸ್ಥೆಗಳ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇ. ಮೂ.ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.ಕಿನ್ನಿಗೋಳಿಯ ಯಕ್ಷಲಹರಿ ಮತ್ತು ಯುಗಪುರುಷದ ಸಂಯುಕ್ತ ಆಶ್ರಯದಲ್ಲಿ ಕರ್ಣಾಟಕ ಬ್ಯಾಂಕ್ ಹಾಗೂ ನಮ್ಮ ಕುಡ್ಲದ ಸಹಕಾರದೊಂದಿಗೆ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ 7 ದಿನಗಳ ಕಾಲ ನಡೆದ 24 ನೇ ವರ್ಷ ಸಂಭ್ರಮ ಯಕ್ಷಗಾನ ತಾಳಮದ್ದಳೆ ಸಪ್ತಾಹ ‘ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಗರಿ ಸಮೂಹ ಸಂಸ್ಥೆಗಳ ಮಾಲೀಕ ರಾಘವೇಂದ್ರ ರಾವ್ ಅವರು ವಿದ್ಯಾರ್ಥಿ ವೇತನ ಪ್ರಧಾನ ಮಾಡಿದರು. ಕಲಾವಿದರ ನೆಲೆಯಲ್ಲಿ ರವಿ ಅಲೆವೂರಾಯ ವರ್ಕಾಡಿ ಹಾಗೂ ಬಾಲಕೃಷ್ಣ ದೇವಾಡಿಗ ಪಂಜ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ ನಿಡ್ಡೋಡಿ ಜೋಕಿಮ್ ಕೊರೆಯ ಅವರಿಗೆ ಕಲಾಪೋಷಕ ಸಂಮಾನ ನೀಡಿ ಗೌರವಿಸಲಾಯಿತು.ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿ, ಕ ಸಾ ಪ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ನಮ್ಮ ಕುಡ್ಲ ವಾಹಿನಿಯ ಆಡಳಿತ ನಿರ್ದೇಶಕ ಲೀಲಾಕ್ಷ ಕರ್ಕೇರಾ, ಶುಂಠಿಲಪದವು ಗ್ರಾ.ಪಂ. ನ ಪಿಡಿಓ ಉಗ್ಗಪ್ಪ ಮೂಲ್ಯ, ಧರ್ಮದರ್ಶಿ ಮೋಹನದಾಸ ಸುರತ್ಕಲ್, ಯುಗಪುರುಷ ಸಂಸ್ಥೆಯ ಭುವನಾಭಿರಾಮ ಉಡುಪ, ಯಕ್ಷ ಲಹರಿಯ ಅಧ್ಯಕ್ಷ ರಘುನಾಥ ಕಾಮತ್ ಕೆಂಚನಕೆರೆ, ಕಿನ್ನಿಗೋಳಿ ಇನ್ನರ್ ಕ್ಲಬ್ ಅಧ್ಯಕ್ಷೆ ಸವಿತಾ ಸಂತೋಷ್, ನಿವೃತ್ತ ಶಿಕ್ಷಕ ಸಾಯಿನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ರಾಮಾವತಾರ ಹಾಗೂ ಕೃಷ್ಣಾವತಾರ ತಾಳಮದ್ದಳೆ ಜರುಗಿತು. ರಘುನಾಥ ಕಾಮತ್ ಕೆಂಚನಕೆರೆ ಸ್ವಾಗತಿಸಿದರು. ವಸಂತ ದೇವಾಡಿಗ ಹಾಗೂ ಶ್ರೀವತ್ಸ ನಿರೂಪಿಸಿದರು.