ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಮಗಳ ಭವಿಷ್ಯ ಉಜ್ವಲಗೊಳಿಸುವುದೇ ತಂದೆ-ತಾಯಿಗಳ ಕನಸಾಗಿರುತ್ತದೆ. ಆದರೆ, ಇಲ್ಲೊಬ್ಬ ಕಿರಾತಕ ತಂದೆಯೊಬ್ಬ ಆಸ್ತಿಯ ದುರಾಸೆಗೆ ಮಗಳ ಭವಿಷ್ಯವನ್ನೇ ಹಾಳು ಮಾಡಲು ಮುಂದಾಗಿದ್ದು, ಇದನ್ನು ಪ್ರಶ್ನಿಸಿದ ಪತ್ನಿಯ ಕೈಕಾಲು ಮುರಿದುಹಾಕಿದ ಘಟನೆ ಮತಕ್ಷೇತ್ರದ ಹಾರೂಗೊಪ್ಪ ಗ್ರಾಮದಲ್ಲಿ ನಡೆದಿದೆ.ಹಾರೂಗೊಪ್ಪ ಗ್ರಾಮದ ಮಾಯವ್ವ ಕರೆನ್ನವರ ಹಲ್ಲೆಗೊಳಗಾದ ಮಹಿಳೆ. ಬೀರಪ್ಪ ಕರೆನ್ನವರ ಹಲ್ಲೆ ಮಾಡಿದ ಆರೋಪಿ. ನಡೆದಿದ್ದೇನು ?ಹಲ್ಲೆಗೊಳಗಾದ ಮಾಯವ್ವ ಮತ್ತು ಬೀರಪ್ಪ 15 ವರ್ಷಗಳ ಹಿಂದೆ ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಅದೇ ಗ್ರಾಮದ ಸುಮಾರು 40 ಎಕರೆ ಆಸ್ತಿ ಹೊಂದಿದ್ದ ಕುಟುಂಬವೊಂದರ ಮನೆಯ ಮಾನಸಿಕ ಅಸ್ವಸ್ಥ ಯುವಕನಿಗೆ 13 ವರ್ಷದ ಪುತ್ರಿಯನ್ನು ಕೊಟ್ಟು ವಿವಾಹ ಮಾಡಲು ನಿರ್ಧರಿಸಿದ್ದ. ಇದಕ್ಕೆ ಪತ್ನಿ ಮಾಯವ್ವ ವಿರೋಧ ವ್ಯಕ್ತಪಡಿಸಿದ್ದು ಮಗಳು ಇನ್ನು ಚಿಕ್ಕವಳಿದ್ದಾಳೆ. ಚೆನ್ನಾಗಿ ಶಾಲೆ ಕಲಿಸೋಣ ಈಗಲೇ ವಿವಾಹ ಬೇಡ ಎಂದು ವಿರೋಧಿಸಿದ್ದಾಳೆ.ಇದರಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡ ಬೀರಪ್ಪ ಕಟ್ಟಿಗೆಯಿಂದ ಮನಬಂದಂತೆ ಥಳಿಸಿ ಪತ್ನಿಯ ಕೈಕಾಲು ಮುರಿದು ಹಾಕಿದ್ದಲ್ಲದೆ, ತಲೆಗೆ ಹೊಡೆದು ಗಂಭೀರ ಗಾಯಗೊಳಿಸಿದ್ದಾನೆ. ಸದ್ಯ ಆಕೆಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆಗೆ ಪತಿ, ಪತಿಯ ಸಹೋದರ ಹಾಗೂ ಅತ್ತೆ, ಮಾವ ಕಾರಣ ಎಂದು ಮಾಯವ್ವ ಮುರಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.