ಭತ್ತದ ಸಾಗುವಳಿ ಮತ್ತು ಉತ್ಪಾದನೆ ಭಾರತದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡಿದೆ.

ಕನ್ನಡಪ್ರಭ ವಾರ್ತೆ ಸಾಲಿಗ್ರಾಮಪಟ್ಟಣದಲ್ಲಿ ರೈತರಿಗೆ ಒಣ ನೇರ ಬಿತ್ತನೆಯ ಭತ್ತದ ಪ್ರಾತ್ಯಕ್ಷಿಕೆ ಕುರಿತು ಆಯೋಜಿಸಿದ್ದ ಕಿಸಾನ್ ಕ್ರಾಫ್ಟ್‌ ಕಂಪೆನಿಯು ಒಣ ನೇರ ಬಿತ್ತನೆಯ ಭತ್ತ ಬೆಳೆಯುವುದರ ಉಪಯೋಗಗಳ ಬಗ್ಗೆ ಮಾಹಿತಿ ನೀಡುವ ಸಂಬಂಧ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು.ಕೃಷಿ ಯಂತ್ರಗಳ ಅಧಿಕೃತ ಉತ್ಪಾದಕರು, ಸಗಟು ಆಮದುದಾರರು ಹಾಗೂ ವಿತರಕರಾದ ಕಿಸಾನ್ ಕ್ರಾಫ್ಟ್ ವತಿಯಿಂದ ಪಟ್ಟಣದ ಕೃಷ್ಣೇಗೌಡರ ಜಮೀನಿನಲ್ಲಿ ರೈತರಿಗೆ ಒಣ ನೇರ ಬಿತ್ತನೆಯ ಭತ್ತದ ಬೆಳೆ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು.ಈ ವೇಳೆ ಮಾತನಾಡಿದ ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಚಂದ್ರೇಗೌಡ, ಭತ್ತದ ಸಾಗುವಳಿ ಮತ್ತು ಉತ್ಪಾದನೆ ಭಾರತದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡಿದೆ. ನೀರಿನ ಕೊರತೆ ಮತ್ತು ಜ್ಞಾನದ ಅಭಾವದಿಂದ ಹಲವು ಸಮಸ್ಯೆ, ಈ ಬೆಳೆ ಉತ್ಪಾದನೆಯ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತಿವೆ. ಭತ್ತ ಬೆಳೆಯುವ ಪದ್ಧತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಕಿಸಾನ್ ಕ್ರಾಫ್ಟ್ ಒಣ ನೇರ ಬಿತ್ತನೆಯ ಭತ್ತದ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಶೇ. 50ರಷ್ಟು ಕಡಿಮೆ ನೀರಿನಲ್ಲಿ ಸಾಂಪ್ರದಾಯಿಕ ಭತ್ತದಷ್ಟೇ ಇಳುವರಿಯನ್ನು ಕೊಡುತ್ತದೆ ಎಂದರು.ಈ ಭತ್ತವನ್ನು ಉತ್ತಮ ಗಾಳಿಯಾಡುವ ಭೂಮಿಯಲ್ಲಿ ನೇರ ಒಣ ಬಿತ್ತನೆ ಮಾಡಬಹುದು. ಕೆಸರು ಗದ್ದೆ ಮಾಡುವ ಅಗತ್ಯವಿಲ್ಲ. ಸರದಿ ಬೆಳೆಯಾಗಿ ಹಾಗು ದ್ವಿದಳ ಧಾನ್ಯ, ತರಕಾರಿ ಮತ್ತು ಎಣ್ಣೆಕಾಳು ಬೆಳೆಗಳ ಜೊತೆ ಮಿಶ್ರ ಬೆಳೆಯಾಗಿ ಬೆಳೆಯಬಹುದು. ದೀರ್ಘಾವಧಿಯಲ್ಲಿ ಇದು ಮಣ್ಣಿನ ಫಲವತ್ತತೆ ಉತ್ತಮಗೊಳಿಸುತ್ತದೆ ಎಂದರು.ಹಿರಿಯ ವಿಜ್ಞಾನಿ ನಿಶಾಂತ್ ಮಾತನಾಡಿ, ನೇರ ಬತ್ತ ಬಿತ್ತನೆಯಿಂದ ಸಾಂಪ್ರಾದಾಯಿಕ ನೀರಾವರಿ ಭತ್ತದ ಪದ್ಧತಿಗೆ ಹೋಲಿಸಿದರೆ ಶೇ. 50ಕ್ಕಿಂತ ಹೆಚ್ಚು ನೀರು ಉಳಿತಾಯವಾಗುತ್ತದೆ. ಕೀಟನಾಶಕ ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆ, ಹಸಿರು ಮನೆ, ಅನಿಲ ಹೊರಸೂಸುವಿಕೆ ಮತ್ತು ಕೂಲಿ ಕಾರ್ಮಿಕರ ವೆಚ್ಚ ಗಣನೀಯವಾಗಿ ಕಡಿಮೆಯಾಗಲಿದೆ. ಮಣ್ಣಿನ ಫಲವತ್ತತೆಯ ಅನುಗುಣವಾಗಿ ಪ್ರತಿ ಹೆಕ್ಟರ್ ಗೆ 55 ಕ್ವಿಂಟಾಲ್ ಅಥವಾ ಅದಕ್ಕಿಂತ ಹೆಚ್ಚಿನ ಇಳುವರಿ ಒಣ ನೇರ ಬಿತ್ತನೆಯ ಭತ್ತ ಬೆಳೆಯುವುದರಿಂದ ಪಡೆಯಬಹುದು. ನೇರ ಬಿತ್ತನೆ ಮಾಡುವುದರಿಂದ ಭತ್ತದ ಲಾಭದ ಹೆಚ್ಚಳವಾಗಲಿದೆ ಎಂದರು.ಸಾಂಪ್ರದಾಯಿಕ ನೀರಾವರಿ ಭತ್ತದ ಪದ್ಧತಿಗೆ ಹೋಲಿಸಿದರೆ, ಅಕ್ಕಿಯ ರುಚಿಯಲ್ಲಿ ಮತ್ತು ಗುಣಮಟ್ಟದಲ್ಲಿ ಯಾವುದೇ ಬದಲಾವಣೆ ಇರುವದಿಲ್ಲ ಎಂದರು.ಒಣ ನೇರ ಬಿತ್ತನೆಯ ಭತ್ತ ಬೆಳೆದ ಪ್ರಗತಿಪರ ರೈತ ಕೃಷ್ಣೇಗೌಡ ಮಾತನಾಡಿ, ನಾನು ಕಿಸಾನ್ ಕ್ರಾಫ್ಟ್ ನ ಡಿಡಿಎಸ್ಆರ್ ಪದ್ದತಿಯಲ್ಲಿ ಎರಡನೇ ಬಾರಿ ಭತ್ತವನ್ನು ಬೆಳೆದಿದ್ದೇನೆ. ಈ ಹಿಂದೆ ನಾನು ಸೋನಾಮಸೂರಿಯಂತಹ ತಳಿ ಬೆಳೆದಿದ್ದೆ. ಇದರಲ್ಲಿ ನೀರಾವರಿ ತಳಿಯಷ್ಟೇ ಇಳುವರಿ ಬಂದಿತ್ತು. ಈಗ ದಪ್ಪ ಭತ್ತದ ತಳಿ ಬೆಳೆದಿದ್ದೇನೆ. ನನ್ನ ಖರ್ಚು ನೀರಾವರಿ ಭತ್ತಕ್ಕಿಂತ ಶೇ. 50ಕ್ಕಿಂತ ಕಡಿಮೆಯಾಗಿದೆ. ತೆನೆಗಳು ಹಾಗು ತೊಂಡೆಗಳು ಚೆನ್ನಾಗಿ ಬಂದಿವೆ. ಇದರಲ್ಲಿ ಅತ್ಯುತ್ತಮ ಇಳುವರಿ ಬರಲಿದೆ ಎಂಬ ವಿಶ್ವಾಸವಿದೆ. ಈ ಪದ್ಧತಿ ಅಳವಡಿಸಿಕೊಳ್ಳಲು ಉತ್ತೇಜಿಸಿದ, ಮಾರ್ಗದರ್ಶನ ನೀಡಿದ ಕಿಸಾನ್ ಕ್ರಾಫ್ಟ್ ಗೆ ಧನ್ಯವಾದ ಎಂದರು.ಕಾರ್ಯಕ್ರಮದಲ್ಲಿ ಕಿಸಾನ್ ಕ್ರಾಫ್ಟ್ ನ ವ್ಯವಸ್ಥಾಪಕ ಸೌರಭ ಪಾಟೀಲ್, ಸಿಬ್ಬಂದಿ ಶ್ರೀನಾಥ್, ವಸೀಮ್, ಸೂರ್ಯ,ರೈತ ಮುಖಂಡರು, ಗ್ರಾಪಂ ಸದಸ್ಯರು, ಬೀಜ ಹಾಗು ಯಂತ್ರೋಪಕರಣಗಳ ವಿತರಕರು ಇದ್ದರು.