ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ಕಾಲ ಮಿತಿಯೊಳಗೆ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಮುಗಿಸಿ ವಾಣಿ ವಿಲಾಸ ಜಲಾಶಯಕ್ಕೆ ನೀರು ಹರಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್ ಸರ್ಕಾರವನ್ನು ಒತ್ತಾಯಿಸಿದರು.ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ಭಾರತೀಯ ಕಿಸಾನ್ ಸಂಘದಿಂದ ಆಯೋಜಿಸಿದ್ದ ಭದ್ರಾ ನೀರಿಗಾಗಿ ಒಂದು ದಿನದ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದರು.
ಭದ್ರಾ ಕಾಮಗಾರಿ ಆರಂಭವಾಗಿ 15 ವರ್ಷ ಕಳೆದರೂ ಯೋಜನೆ ಮಾತ್ರ ಪೂರ್ಣಗೊಂಡಿಲ್ಲ. ಆದರೆ ಕಾಮಗಾರಿಯ ಮೊತ್ತ ಮಾತ್ರ ಏರಿಕೆಯಾಗುತ್ತಿದೆ. ಹಣ ಹೆಚ್ಚಿದಂತೆ ಕಾಮಗಾರಿಯ ವೇಗವನ್ನು ಹೆಚ್ಚಿಸಬೇಕಾಗಿತ್ತು ಎಂದರು.ರಾಜ್ಯ ಸರ್ಕಾರವೇ ಯೋಜನೆಯ ಹೊಣೆ ಹೊತ್ತು ಕಾಮಗಾರಿ ಮುಗಿಸಬೇಕು. ವಿವಿ ಸಾಗರಕ್ಕೆ ಕನಿಷ್ಟ 10 ಟಿಎಂಸಿ ನೀರು ಮೀಸಲಿಡಬೇಕು. ಭೂ ಸ್ವಾಧೀನ ಮಾಡದ ಕಂದಾಯ ಅಧಿಕಾರಿಗಳು ಹಾಗೂ ಎಂಜಿನಿಯರ್ ಗಳನ್ನ ವರ್ಗಾಯಿಸಬೇಕು. ಬದ್ಧತೆಯಿರುವ ಖಡಕ್ ಅಧಿಕಾರಿಯನ್ನು ನೇಮಿಸಬೇಕು. ಕಾಮಗಾರಿ ಪೂರೈಸದೇ ಅರೆಬರೆ ಕೆಲಸ ಮಾಡಿರುವ ಗುತ್ತಿಗೆದಾರರನ್ನು ಬದಲಾಯಿಸಿ ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.
ಕಳೆದ ಕೇಂದ್ರ ಬಜೆಟ್ ಅಧಿವೇಶನದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಪಟ್ಟಂತೆ ವಿತ್ತ ಸಚಿವರಿಂದ ಘೋಷಣೆಯಾದ ₹5300 ಕೋಟಿ ಹಣವನ್ನು ಶೀಘ್ರವೇ ಬಿಡುಗಡೆ ಮಾಡಬೇಕು. ಭದ್ರಾ ಮೇಲ್ದಂಡೆ ಯೋಜನೆಯನ್ನು ಶೀಘ್ರವೇ ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡಬೇಕು. ತುಂಗಾದಿಂದ ಭದ್ರಾಕ್ಕಿರುವ 12 ಕಿಲೋ ಮೀಟರ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ನಾರಾಯಣ ಸ್ವಾಮೀಜಿ, ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಾತ್ರಿಕೇನಹಳ್ಳಿ, ಗಡಾರಿ ಕೃಷ್ಣಪ್ಪ, ದಿಂಡಾವರ ಚಂದ್ರಗಿರಿ, ಮೆಟಿಕುರ್ಕೆ ಜಯಣ್ಣ, ಪಿ.ಎಚ್. ರಂಗನಾಥ್ ಗೌಡ, ಕಾಳಿದಾಸ್, ಕುಬೇರಪ್ಪ, ಎಸ್ ವಿ. ರಂಗನಾಥ್, ಮೈಸೂರು ಶಿವಣ್ಣ, ಆರ್ ಕೆ. ಗೌಡ, ಎಂಆರ್. ರುದ್ರಯ್ಯ, ಜಯಪ್ರಕಾಶ್, ರೈತ ಸಂಘದ ಅಧ್ಯಕ್ಷ ಬ್ಯಾಡರಹಳ್ಳಿ ಶಿವಕುಮಾರ್, ಚೇತನ್, ಕೆಟಿ. ತಿಪ್ಪೇಸ್ವಾಮಿ, ದೇವರಾಜ್ ಮೇಷ್ಟ್ರು, ವಿನೋದಮ್ಮ, ಲೋಕಮ್ಮ, ಕರಿಯಮ್ಮ, ಮೆಟಿಕುರ್ಕೆ ಟಿಪ್ಪುಸಾಬ್ ಮುಂತಾದವರು ಉಪಸ್ಥಿತರಿದ್ದರು.