ಕಿಶೋರ್‌ ಕುಮಾರ್‌, ರಾಜು ಪೂಜಾರಿ ನಾಮಪತ್ರ ಸಲ್ಲಿಕೆ

| Published : Oct 04 2024, 01:01 AM IST

ಕಿಶೋರ್‌ ಕುಮಾರ್‌, ರಾಜು ಪೂಜಾರಿ ನಾಮಪತ್ರ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆ ಪಕ್ಷೇತರ ಅಭ್ಯರ್ಥಿಯಾಗಿ ದಿನಕರ ಉಳ್ಳಾಲ ಉಮೇದುವಾರಿಕೆ ಸಲ್ಲಿಸಿದ್ದರು. ಇದರೊಂದಿಗೆ ಈವರೆಗೆ ಒಟ್ಟು ಐದು ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದಂತಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ನ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಯ ಕೊನೆ ದಿನವಾದ ಗುರುವಾರ ಬಿಜೆಪಿ ಅಭ್ಯರ್ಥಿಯಾಗಿ ಕಿಶೋರ್‌ ಕುಮಾರ್‌ ಪುತ್ತೂರು, ಕಾಂಗ್ರೆಸ್‌ ಅಭ್ಯರ್ಥಿ ರಾಜು ಪೂಜಾರಿ, ಎಸ್‌ಡಿಪಿಐ ಅಭ್ಯರ್ಥಿಯಾಗಿ ಅನ್ವರ್‌ ಸಾದತ್‌, ಎಸ್‌ಡಿಪಿಐನಿಂದ ಪಕ್ಷೇತರ ಅಭ್ಯರ್ಥಿಯಾಗಿ ಮೊಹಮ್ಮದ್‌ ರಿಯಾಝ್‌ ಅವರು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ಅವರಿಗೆ ನಾಮಪತ್ರ ಸಲ್ಲಿಸಿದರು.

ಈ ಹಿಂದೆ ಪಕ್ಷೇತರ ಅಭ್ಯರ್ಥಿಯಾಗಿ ದಿನಕರ ಉಳ್ಳಾಲ ಉಮೇದುವಾರಿಕೆ ಸಲ್ಲಿಸಿದ್ದರು. ಇದರೊಂದಿಗೆ ಈವರೆಗೆ ಒಟ್ಟು ಐದು ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದಂತಾಗಿದೆ.

ಬಿಜೆಪಿಯ ಕಿಶೋರ್‌ ಕುಮಾರ್‌ ಪುತ್ತೂರು 2 ನಾಮಪತ್ರ ಹಾಗೂ ರಾಜು ಪುಜಾರಿ 3 ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕಿಶೋರ್‌ ಕುಮಾರ್‌ ನಾಮಪತ್ರ ಸಲ್ಲಿಕೆ ವೇಳೆ ಸಂಸದ ಕ್ಯಾ. ಬ್ರಿಜೇಶ್‌ ಚೌಟ, ಶಾಸಕರಾದ ಭಾಗೀರಥಿ ಮುರುಳ್ಯ, ಪ್ರತಾಪ್‌ಸಿಂಹ ನಾಯಕ್‌, ಯಶಪಾಲ್‌ ಸುವರ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಕಿಶೋರ್‌ ಕುಂದಾಪುರ, ಪ್ರಮೋದ್‌ ಮಧ್ವರಾಜ್‌ ಇದ್ದರು. ಟಿಕೆಟ್‌ ಆಕಾಂಕ್ಷಿಯಾಗಿದ್ದ ಉಡುಪಿಯ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಸ್ವತಃ ಆಗಮಿಸಿದ್ದು ವಿಶೇಷವಾಗಿತ್ತು.

ಕಾಂಗ್ರೆಸ್‌ನ ರಾಜುಪೂಜಾರಿ ನಾಮಪತ್ರ ಸಲ್ಲಿಕೆ ವೇಳೆ ರಮಾನಾಥ ರೈ, ಜಯಪ್ರಕಾಶ್‌ ಹೆಗ್ಡೆ, ಮಂಜುನಾಥ ಭಂಡಾರಿ, ಐವನ್‌ ಡಿಸೋಜ ಹಾಗೂ ಉಡುಪಿಯ ಕಾಂಗ್ರೆಸ್‌ ನಾಯಕರು ಇದ್ದರು.

ಹಣ-ಜಾತಿ ಬಲವಿಲ್ಲದ ಕಾರ್ಯಕರ್ತನಿಗೆ ಟಿಕೆಟ್‌: ಕಿಶೋರ್‌ ಕುಮಾರ್‌

ಬಡ ಕೃಷಿಕ ಕುಟುಂಬದಲ್ಲಿ ಹುಟ್ಟಿದ ಸಾಮಾನ್ಯ ಕಾರ್ಯಕರ್ತನಾದ ನನಗೆ ಪಕ್ಷ ದೊಡ್ಡ ಜವಾಬ್ದಾರಿ ನೀಡಿದೆ. ಹಣ- ಜಾತಿ ಬಲ ಇಲ್ಲದ ವ್ಯಕ್ತಿಗೆ ಟಿಕೆಟ್‌ ನೀಡಲು ಸಾಧ್ಯವಾಗುವುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದು ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್‌ ಹೇಳಿದರು.

ನಾಮಪತ್ರ ಸಲ್ಲಿಕೆಗೆ ಮೊದಲು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ರೀತಿ ಪಕ್ಷಕ್ಕೆ ಕಪ್ಪುಚುಕ್ಕೆ ಬಾರದಂತೆ ಕಾರ್ಯ ನಿರ್ವಹಣೆ ಮಾಡುತ್ತೇನೆ. ಎಲ್ಲ ನಾಯಕರ ಅನುಭವಗಳನ್ನು ಪಡೆದುಕೊಂಡು ಕೆಲಸ ನಿರ್ವಹಿಸುವುದಾಗಿ ಭರವಸೆ ನೀಡಿದರು.

ಸಂಸದ ಕ್ಯಾ.ಬ್ರಿಜೇಶ್‌ ಚೌಟ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಪಕ್ಷ ಎಂಬುದಕ್ಕೆ ಸಾಕ್ಷಿಯಾಗಿ ಸಾಮಾನ್ಯ ಕಾರ್ಯಕರ್ತನಿಗೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ನೀಡಲಾಗಿದೆ. ಪಕ್ಷ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದು, ಕಿಶೋರ್‌ ಕುಮಾರ್‌ ಅವರ ಗೆಲುವಿಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿ ದೊಡ್ಡ ಅಂತರದಿಂದ ಗೆಲ್ಲಿಸಲಿದ್ದೇವೆ ಎಂದು ಹೇಳಿದರು.

ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಈ ಕ್ಷೇತ್ರದಿಂದ ಗೆದ್ದು ಮೇಲ್ಮನೆಗೆ ಹೋದ ಕೋಟ ಶ್ರೀನಿವಾಸ ಪೂಜಾರಿ ಅವರು ಜನಪ್ರತಿನಿಧಿಯಾಗಿ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳಿಗೆ ವಿಶೇಷ ಕೊಡುಗೆ ನೀಡುವುದರೊಂದಿಗೆ ಪಂಚಾಯತ್‌ ರಾಜ್‌ ವ್ಯವಸ್ಥೆ ಹಾಗೂ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡವರು. ಅವರ ಸ್ಥಾನಕ್ಕೆ ಕಿಶೋರ್ ಕುಮಾರ್‌ ಸಮರ್ಥ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ ಎಂದರು.

ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್‌ ಕುಮಾರ್‌ ಮಾತನಾಡಿ, ಅಭ್ಯರ್ಥಿ ಕಿಶೋರ್‌ ಕುಮಾರ್‌ ಅವರ ಗೆಲುವಿಗಾಗಿ ಪ್ರತಿ ಮಂಡಲದ ಪ್ರತಿ ಮಹಾಶಕ್ತಿ ಕೇಂದ್ರಗಳಲ್ಲಿ ಮತದಾರರನ್ನು ಭೇಟಿಯಾಗಲಿದ್ದೇವೆ. ಪಕ್ಷದ ನಿಗದಿತ ಓಟುಗಳನ್ನು ಮೀರಿ ಜಾಸ್ತಿ ಮತ ಬರುವಂತೆ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು.

ಶಾಸಕರಾದ ವೇದವ್ಯಾಸ ಕಾಮತ್‌, ಭರತ್‌ ಶೆಟ್ಟಿ, ಉಮಾನಾಥ ಕೋಟ್ಯಾನ್‌, ಭಾಗೀರಥಿ ಮುರುಳ್ಯ, ರಾಜೇಶ್‌ ನಾಯ್ಕ್‌, ಯಶಪಾಲ್‌ ಸುವರ್ಣ, ಪ್ರತಾಪ್‌ಸಿಂಹ ನಾಯಕ್‌, ಯುವ ಜೆಡಿಎಸ್‌ ಜಿಲ್ಲಾಧ್ಯಕ್ಷ ಅಕ್ಷಿತ್‌ ಸುವರ್ಣ, ನಂದನ್‌ ಮಲ್ಯ ಇದ್ದರು.

ಸ್ಥಳೀಯ ಸಂಸ್ಥೆ ಸಮಸ್ಯೆಗಳಿಗೆ ಪರಿಹಾರ: ರಾಜು ಪೂಜಾರಿ ಭರವಸೆ

ಕಳೆದ 20 ವರ್ಷಗಳಿಂದ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಗ್ರಾಪಂ, ತಾಲೂಕು ಪಂಚಾಯ್ತಿ ಸದಸ್ಯನಾಗಿ, ಜಿಲ್ಲಾ ಪಂಚಾಯ್ತಿಯಲ್ಲಿ 2 ಬಾರಿ ಸದಸ್ಯನಾಗಿ, ಜಿಪಂ ಅಧ್ಯಕ್ಷನಾಗಿ ಸ್ಥಳೀಯ ಸಂಸ್ಥೆಗಳ ಅರಿವು ಇರುವುದರಿಂದ ಇದೀಗ ವಿಧಾನ ಪರಿಷತ್‌ನಲ್ಲಿ ಈ ಬಗ್ಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಅವಕಾಶ ದೊರೆತಿದೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ರಾಜು ಪೂಜಾರಿ ಹೇಳಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಓಟು ಹಾಕುವವರು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು. ಯಾರು ಗೆದ್ದು ಬಂದರೆ ತಮಗೆ ನ್ಯಾಯ ಸಿಗಲಿದೆ ಎನ್ನುವ ಅರಿವು ಮತದಾರರಿಗೆ ಇದೆ. ಮತದಾರರ ಒಲವು ನನ್ನ ಪರವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ 30 ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದು ಕೆಲಸ ಮಾಡಿದ್ದೇನೆ. ಆ ನೆಲೆಯಲ್ಲಿ ಪಕ್ಷ ನನ್ನನ್ನು ಗುರುತಿಸಿ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದೆ ಎಂದರು.

ನಾನು ಜಿಪಂ ಅಧ್ಯಕ್ಷನಾಗಿದ್ದಾಗ ಸ್ವಂತ ಕಟ್ಟಡ ನಿರ್ಮಾಣ ಸಾಧ್ಯವಾಯಿತು. ನನ್ನ ಅವಧಿಯಲ್ಲಿ ಎಲ್ಲ ಗ್ರಾಪಂಗಳ ಕಂಪ್ಯೂಟರೀಕರಣ ಸಾಧ್ಯವಾಯಿತು. ಇನ್ನು ಮುಂದಕ್ಕೆ ಸ್ಥಳೀಯ ಸಂಸ್ಥೆಗಳಿಗೆ ಮೂಲ ಸೌಕರ್ಯ ಸೇರಿದಂತೆ ಎಲ್ಲ ಅಗತ್ಯತೆಗಳನ್ನು ಪೂರೈಸಲು ಬದ್ಧನಾಗಿದ್ದೇನೆ ಎಂದು ರಾಜುಪೂಜಾರಿ ಹೇಳಿದರು.

ಕಿಶೋರ್ ಕುಮಾರ್, ರಾಜು ಪೂಜಾರಿ ಇಬ್ಬರೂ ಕೋಟಿ ಒಡೆಯರು!

ಕನ್ನಡಪ್ರಭ ವಾರ್ತೆ ಮಂಗಳೂರುವಿಧಾನ ಪರಿಷತ್ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಕಿಶೋರ್‌ ಕುಮಾರ್ ಪುತ್ತೂರು ಹಾಗೂ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಇಬ್ಬರೂ (ಚರಾಸ್ತಿ, ಸ್ಥಿರಾಸ್ತಿ ಸೇರಿ) ಕೋಟಿ ಒಡೆಯರು!

ಇಬ್ಬರೂ ಅಭ್ಯರ್ಥಿಗಳು ತಮ್ಮ ನಾಮಪತ್ರದಲ್ಲಿ ಆಸ್ತಿ ವಿವರಗಳುಳ್ಳ ಅಫಿದವಿತ್ ಸಲ್ಲಿದ್ದಾರೆ.ಕಿಶೋರ್ ಕುಮಾರ್ ಅವರಿಗೆ ಒಟ್ಟು 33.61 ಲಕ್ಷ ರು. ಚರಾಸ್ತಿ ಹಾಗೂ ಅವರ ಪತ್ನಿ ಬಳಿ 46.85 ಲಕ್ಷ ರು. ಮೌಲ್ಯದ ಚರಾಸ್ತಿ ಇದೆ. ಕಿಶೋರ್‌ ಕುಮಾರ್ ಅವರಿಗೆ ಪುತ್ತೂರು ತಾಲೂಕಿನ ಸರ್ವೆಯಲ್ಲಿ ಸ್ವಂತ ಜಾಗ ಇದೆ. ಜತೆಗೆ ಮಂಗಳೂರು ಪಡುಪೆರಾರದಲ್ಲಿ ಕೃಷಿಯೇತರ ಜಮೀನು ಸೇರಿದಂತೆ 1.12 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದೆ. 17 ಲಕ್ಷ ರು.ಗೂ ಅಧಿಕ ಸಾಲವಿದೆ.

ಕಾಂಗ್ರೆಸ್‌ ಅಭ್ಯರ್ಥಿ ರಾಜು ಪೂಜಾರಿ ಅವರು ಠೇವಣಿ, ಶೇರು, ಎಲ್‌ಐಸಿ ಇತ್ಯಾದಿ ಸೇರಿ 40.32 ಲಕ್ಷ ರು. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅವರ ಪತ್ನಿ ಬಳಿ 17.40 ಲಕ್ಷ ರು. ಮೌಲ್ಯದ ಚರಾಸ್ತಿ ಇದೆ.ರಾಜು ಪೂಜಾರಿ ಬಳಿ 65.40 ಲಕ್ಷ ರು. ಮೌಲ್ಯದ ಕೃಷಿ ಭೂಮಿ, ವಸತಿ ಕಟ್ಟಡ ಸೇರಿ ಸ್ಥಿರಾಸ್ತಿ ಇದ್ದು, 24.04 ಲಕ್ಷ ರು. ಸಾಲಗಾರರು.