ಮನೆ ಕೆಲಸಕ್ಕೆ ಬರುತ್ತಿದ್ದ ಮಹಿಳೆಯೊಂದಿಗೆ ಅನೈತಿಕ ಸಂಬಂಧದ ವಿಚಾರದಲ್ಲಿ ಉಂಟಾದ ವೈಷಮ್ಯಕ್ಕೆ ಅಡುಗೆ ಕಂಟ್ರ್ಯಾಕ್ಟರ್ ಒಬ್ಬರನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಹಾಸನ ನಗರದಲ್ಲಿ ಗುರುವಾರ ಮುಂಜಾನೆ ನಡೆದಿದೆ. ಸುಮಾ ಮತ್ತು ಆನಂದ್ ನಡುವಿನ ಅನೈತಿಕ ಸಂಬಂಧದ ವಿಚಾರದಿಂದಲೇ ಧರ್ಮೇಂದ್ರ ವೈಮನಸ್ಸು ಹೊಂದಿ, ಆನಂದನನ್ನು ಕರೆಸಿ ಗಲಾಟೆ ನಡೆಸಿ ಚಾಕುವಿನಿಂದ ಇರಿದು ಹತ್ಯೆ ಮಾಡಿರುವುದಾಗಿ ಆನಂದ್ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ನೀಡಿದ ದೂರನ್ನು ದಾಖಲಿಸಿ ಮುಂದಿನ ತನಿಖೆ ಚುರುಕುಗೊಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹಾಸನ
ಮನೆ ಕೆಲಸಕ್ಕೆ ಬರುತ್ತಿದ್ದ ಮಹಿಳೆಯೊಂದಿಗೆ ಅನೈತಿಕ ಸಂಬಂಧದ ವಿಚಾರದಲ್ಲಿ ಉಂಟಾದ ವೈಷಮ್ಯಕ್ಕೆ ಅಡುಗೆ ಕಂಟ್ರ್ಯಾಕ್ಟರ್ ಒಬ್ಬರನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಹಾಸನ ನಗರದಲ್ಲಿ ಗುರುವಾರ ಮುಂಜಾನೆ ನಡೆದಿದೆ.ಹತ್ಯೆಗೀಡಾದ ವ್ಯಕ್ತಿಯನ್ನು ಆನಂದ್ (48) ಎಂದು ಗುರುತಿಸಲಾಗಿದೆ. ಆನಂದ್ ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಬಂಗಾರಿಪೇಟೆಯಲ್ಲಿ ವಾಸವಾಗಿದ್ದರೂ, ನಾಲ್ಕು ವರ್ಷಗಳ ಹಿಂದೆ ಪತ್ನಿಯೊಂದಿಗೆ ಉಂಟಾದ ಗಲಾಟೆ ಹಿನ್ನೆಲೆಯಲ್ಲಿ ಹಾಸನಕ್ಕೆ ಬಂದು ತಂದೆಯ ಮನೆಯಲ್ಲಿ ನೆಲೆಸಿದ್ದರು. ಅವರು ಹಾಸನದ ಪವನಪುತ್ರ ಕಲ್ಯಾಣ ಮಂಟಪದಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಒಂದೂವರೆ ವರ್ಷಗಳಿಂದ ಸುಮಾ ಎಂಬ ಮಹಿಳೆ ಆನಂದ್ ಮನೆಗೆ ಕೆಲಸಕ್ಕೆ ಬರುತ್ತಿದ್ದು, ಈ ನಡುವೆ ಆನಂದ್ ಹಾಗೂ ಸುಮಾ ಪರಸ್ಪರ ಸಲುಗೆಯಿಂದ ಇದ್ದರು ಎನ್ನಲಾಗಿದೆ. ಈ ವಿಚಾರವನ್ನು ಗಮನಿಸಿದ ಸುಮಾಳ ಪರಿಚಯಸ್ಥ ಧರ್ಮೇಂದ್ರ ಅಸಮಾಧಾನಗೊಂಡು, ಆನಂದನೊಂದಿಗೆ ಗಲಾಟೆ ನಡೆಸಿದ್ದನು. ಬಳಿಕ ಆನಂದ್ ಕುಟುಂಬಸ್ಥರು ಮಧ್ಯಸ್ಥಿಕೆ ವಹಿಸಿ ಗಲಾಟೆಯನ್ನು ನಿಲ್ಲಿಸಿದ್ದರು. ಜನವರಿ 29ರ ಗುರುವಾರ ಸುಮಾರು 1.40ರ ವೇಳೆಗೆ ಆನಂದ್ ಮೊಬೈಲ್‌ಗೆ ಕರೆ ಬಂದಿದ್ದು, ನಂತರ ಅವರು ಮನೆ ಹೊರಗೆ ತೆರಳಿದ್ದು, ಬೆಳಗಿನ ಜಾವ ಸುಮಾರು 2.46 ರ ವೇಳೆಗೆ ಸುಮಾ ತನ್ನ ಮೊಬೈಲ್‌ನಿಂದ ಆನಂದ್ ತಾಯಿಗೆ ಕರೆ ಮಾಡಿ, ಹಾಸನ ನಗರದ ಕೆ.ಆರ್.ಪುರಂ ೭ನೇ ಕ್ರಾಸ್‌ನ ಮಟನ್ ಅಂಗಡಿಯ ಎದುರು ಧರ್ಮೇಂದ್ರ ಎಂಬಾತ ಆನಂದನಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವುದಾಗಿ ಮಾಹಿತಿ ನೀಡಿದ್ದಾಳೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರು ಆನಂದ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೂ, ಆಗಲೇ ಅವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಸುಮಾ ಮತ್ತು ಆನಂದ್ ನಡುವಿನ ಅನೈತಿಕ ಸಂಬಂಧದ ವಿಚಾರದಿಂದಲೇ ಧರ್ಮೇಂದ್ರ ವೈಮನಸ್ಸು ಹೊಂದಿ, ಆನಂದನನ್ನು ಕರೆಸಿ ಗಲಾಟೆ ನಡೆಸಿ ಚಾಕುವಿನಿಂದ ಇರಿದು ಹತ್ಯೆ ಮಾಡಿರುವುದಾಗಿ ಆನಂದ್ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ನೀಡಿದ ದೂರನ್ನು ದಾಖಲಿಸಿ ಮುಂದಿನ ತನಿಖೆ ಚುರುಕುಗೊಳಿಸಿದ್ದಾರೆ.