ಮಕ್ಕಳಿಗೆ ಗಣಿತ ಮತ್ತು ವಿಜ್ಞಾನವನ್ನು ಈ ಗಾಳಿಪಟ ಮಾಡಿ ಹಾರಿಸುವ ಮೂಲಕ ಕಲಿಸಬಹುದಾಗಿದೆ ಎಂದು ಬಿಎಸ್‌ಎನ್‌ಎಲ್ ನಿವೃತ್ತ ಅಧಿಕಾರಿ ಯಲ್ಲಪ್ಪ ಬೆಂಡಿಗೇರಿ ನುಡಿದರು.

ಧಾರವಾಡ: ಗಾಳಿ ಪಟ ಹಾರಿಸುವುದರಿಂದ ಮಕ್ಕಳಿಗೆ ಮನೋರಂಜನೆ ಜೊತೆಗೆ ಕಲಿಕೆಯೂ ಆಗುತ್ತದೆ. ಮಕ್ಕಳಿಗೆ ಗಣಿತ ಮತ್ತು ವಿಜ್ಞಾನವನ್ನು ಈ ಗಾಳಿಪಟ ಮಾಡಿ ಹಾರಿಸುವ ಮೂಲಕ ಕಲಿಸಬಹುದಾಗಿದೆ ಎಂದು ಬಿಎಸ್‌ಎನ್‌ಎಲ್ ನಿವೃತ್ತ ಅಧಿಕಾರಿ ಯಲ್ಲಪ್ಪ ಬೆಂಡಿಗೇರಿ ನುಡಿದರು.

ಚಿಲಿಪಿಲಿ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ `ಚಿಲಿಪಿಲಿ ಮಕ್ಕಳ ಗಾಳಿಪಟ ಉತ್ಸವ’ಕ್ಕೆ ಚಾಲನೆ ನೀಡಿ ಮಾತನಾಡಿದರು.ಮಕ್ಕಳು ಆಡುತ್ತ ಸಂತೋಷದಿಂದ ಕಲಿಯಬೇಕು. ಅಂದಾಗ ಯಾವುದೇ ವಿಷಯದ ಕಲಿಕೆ ಕಠಿಣವಾಗದೇ ಸರಾಗವಾಗಿ ಅರ್ಥಪೂರ್ಣ ಎನಿಸಿಕೊಳ್ಳುವುದು ಎಂದರು.

ಶಿಕ್ಷಣ ಚಿಂತಕ ಎಂ.ಎಂ. ಚಿಕ್ಕಮಠ ಮಾತನಾಡಿ, ಗಾಳಿಪಟ ಹಾರಿಸುವಿಕೆಯು ಕಳೆದ ಒಂಬತ್ತು ಹತ್ತನೇ ಶತಮಾನದಲ್ಲಿಯೇ ಇಂಡಿಯೋನೇಷಿಯಾದಿಂದ ಪ್ರಾರಂಭವಾಗಿದ್ದು ಎಂದು ಇತಿಹಾಸದಲ್ಲಿ ಹೇಳಲಾಗುತ್ತಿದೆ. ನಂತರ ಚೀನಾ, ಭಾರತದೊಳಗೆ ಗಾಳಿಪಟವನ್ನು ಹಾರಿಸುವುದು ಪ್ರಾರಂಭವಾಯಿತು. ಇಂದು ಮಕರಸಂಕ್ರಾಂತಿಯ ಸಂಕೇತವಾಗಿ ಗಾಳಿಪಟವನ್ನು ಹಾರಿಸಲಾಗುತ್ತಿದೆ. ಅಂದು ಗಾಳಿಪಟವನ್ನು ಯುದ್ಧಕಾಲದಲ್ಲಿ ಸುದ್ದಿವಾಹಿನಿಯಾಗಿ ಬಳಸಿಕೊಳ್ಳಲಾಗುತ್ತಿತ್ತು. ತಂತ್ರಜ್ಞಾನ ಬೆಳೆದಂತೆ ಇಂದು ಗಾಳಿಪಟವನ್ನು ಮನರಂಜನೆಗೆ ಬಳಸಿಕೊಳ್ಳುತ್ತಿದ್ದೇವೆ. ಇಂದು ಮಕ್ಕಳಿಗೆ ಗಾಳಿ ಪಟಕ್ಕೆ ಬಳಸುವ ಕಾಗದದ ಬಗ್ಗೆ, ಅದನ್ನು ಹಾರಿಸಲು ಬಳಸುವ ದಾರದ ಬಗ್ಗೆ ತಿಳುವಳಿಕೆ ನೀಡಬೇಕಾಗಿದೆ. ಅಪಾಯಕಾರಕ ನಿಷೇಧಿಸಿರುವ ದಾರವನ್ನು ಮಕ್ಕಳಿಗೆ ಪಟಹಾರಿಸುವುದಕ್ಕೆ ಬಳಸದಿರಲು ಹೇಳಬೇಕಾಗಿದೆ ಎಂದರು.

ನಿವೃತ್ತ ಶಿಕ್ಷಕ ಕೆ.ಎಚ್. ನಾಯಕ, ಗಾಳಿಪಟ ಉತ್ಸವ ಉಳಿದ ಶಾಲೆಗಳಿಗೆ ಮಾದರಿಯಾಗುವಂತೆ ಗುಬ್ಬಚ್ಚಿ ಗೂಡು ಮಕ್ಕಳು ಈ ಉತ್ಸವದಲ್ಲಿ ಭಾಗವಹಿಸಿದ್ದಲ್ಲದೇ ಉಳಿದ ಸರ್ಕಾರಿ ಶಾಲೆಯ ಮಕ್ಕಳೂ ಭಾಗವಹಿಸಿದ್ದು ಖುಷಿ ತಂದಿದೆ. ಮಕ್ಕಳು ಗಾಳಿಪಟ ಮಾಡುವಾಗ ಹಲವಾರು ಅನುಭವವನ್ನು ಪಡೆಯುವರು ಎಂದರು.

ನಿವೃತ್ತ ಶಿಕ್ಷಕ ಬಾಬಾಜಾನ ಮುಲ್ಲಾ ಮಾತನಾಡಿದರು. ಚಿಲಿಪಿಲಿ ಸಂಸ್ಥೆಯ ಅಧ್ಯಕ್ಷ ಶಂಕರ ಹಲಗತ್ತಿ ಅಧ್ಯಕ್ಷತೆ ವಹಿಸಿದ್ದರು. ಮೌಣೇಶ ಕಮ್ಮಾರ, ಸಂತೋಷ ಕರಿಮಕ್ಕಣ್ಣವರ, ನಂದಪ್ಪಗೌಡ ದ್ಯಾಪುರ ಉತ್ಸವದಲ್ಲಿದ್ದರು. ಸಿಕಂದರ ದಂಡೀನ ಸಂಯೋಜನೆ ಮಾಡಿದರು. ಲಕ್ಷ್ಮೀ ಜಾಧವ, ವಿಜಯಲಕ್ಷ್ಮೀ ಸುಭಾಂಜಿ ಗಾಳಿಪಟ ಉತ್ಸವದ ವ್ಯವಸ್ಥೆ ಮಾಡಿದರು. ಹೆಬ್ಬಳ್ಳಿ, ನವಲೂರ, ಕಮಲಾಪೂರ ಸರ್ಕಾರಿ ಶಾಲೆಯ ಮಕ್ಕಳು ಸೇರಿ ನೂರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.