ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲ
ಪ್ರಥಮ ಆಧುನಿಕ ಕನ್ನಡ ಶಬ್ದಕೋಶವನ್ನು ನಿರ್ಮಿಸಿದ ರೆ.ಫಾ. ಫರ್ಡಿನಾಂಡ್ ಕಿಟೆಲ್ ಅವರು ಜನಸಾಮಾನ್ಯರ ಸೇವೆಯನ್ನು ದೇವರ ಸೇವೆ ಎಂದು ಪರಿಗಣಿಸಿದ್ದರು ಎಂದು ಚಿತ್ರ ನಿರ್ದೇಶಕ ಪ್ರಶಾಂತ್ ಪಂಡಿತ್ ಹೇಳಿದರು.ಅವರು ಇಲ್ಲಿನ ಮಾಹೆಯ ಗಾಂಧೀಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್) ಆಶ್ರಯದಲ್ಲಿ ರೆವೆರೆಂಡ್ ಕಿಟೆಲ್ ಅವರ ಚಲನಚಿತ್ರವನ್ನು ಪ್ರದರ್ಶಿಸಿದ ನಂತರ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.ರೆವೆರೆಂಡ್ ಕಿಟಲ್ ಸಂಘಟನೆಯೊಳಗಿನ ವಿರೋಧವನ್ನು ಎದುರಿಸಿ ತಮ್ಮ ಕೆಲಸವನ್ನು ಮುಂದುವರಿಸಿದರು. ಅವರು ಧರ್ಮ, ಭಾಷೆ ಮತ್ತು ಭೌಗೋಳಿಕತೆಯ ಎಲ್ಲೆಗಳನ್ನು ಮೀರಿದ 40ಕ್ಕೂ ಹೆಚ್ಚು ವಿದ್ವತ್ಪೂರ್ಣ ಕೃತಿಗಳನ್ನು ನಿರ್ಮಿಸಿದರು ಎಮದರು.ತಮ್ಮ ಚಿತ್ರದಲ್ಲಿನ ಮೊದಲ ವ್ಯಕ್ತಿ ನಿರೂಪಣೆಯು ಜರ್ಮನಿಯಲ್ಲಿ ವಾಸಿಸುವ ತನ್ನ ಮಕ್ಕಳಿಗೆ ಕಿಟೆಲ್ ಬರೆದ ವೈಯಕ್ತಿಕ ಪತ್ರಗಳು ಮತ್ತು ವೃತ್ತಿಪರ ಪತ್ರಗಳು ಹಾಗೂ ಅವರ ಮೇಲಧಿಕಾರಿಗಳಿಗೆ ಬರೆದ ವರದಿಗಳನ್ನು ಬಳಸುತ್ತದೆ. ಅವರು ರಚಿಸಿದ ವಿದ್ವತ್ಪೂರ್ಣ ಕೃತಿಗಳು ಮತ್ತು ಅವರ ಬರಹಗಳಲ್ಲಿನ ದೇವತಾಶಾಸ್ತ್ರದ ಉಲ್ಲೇಖಗಳು ಪ್ರಜ್ಞೆಯ ನಿರೂಪಣೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಮತ್ತು ವೀಕ್ಷಕರಿಗೆ ಆ ಯುಗದ ನೋಟವನ್ನು ನೀಡುತ್ತದೆ ಎಂದವರು ಹೇಳಿದರು.ಪ್ರೊ.ಫಣಿರಾಜ್ ಮತ್ತು ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ಸಿನಿಮಾವನ್ನು ಸೂಕ್ಷ್ಮವಾಗಿ ಮತ್ತು ವಿದ್ವತ್ಪೂರ್ಣ ಸಿನಿಮಾ ಮಾಡುವ ಹಿಂದೆ ಹೆಚ್ಚಿನ ಸಂಶೋಧನೆ ನಡೆದಿದೆ ಎಂದರು.ಪ್ರೊ.ಮುರುಳೀಧರ ಉಪಾಧ್ಯ, ಡಾ. ಶ್ರೀಕುಮಾರ್, ಸಾಮಾಜಿಕ ಹೋರಾಟಗಾರರಾದ ಬಿ.ಸಿ.ಶೆಟ್ಟಿ, ಮಮತಾ ರೈ, ಚಿತ್ರ ನಿರ್ಮಾಪಕರಾದ ಸುಮಂತ್ ಭಟ್ ಮತ್ತು ಶಿಶಿರರಾಜ್ ಮೋಹನ್, ಪ್ರೊ.ಟಿ.ಕೆ.ಹಿರೇಗಂಗೆ, ಡಾ.ನಿರಂಜನ, ಜಾನಪದ ತಜ್ಞ ಕೃಷ್ಣಯ್ಯ, ಡಾ.ಭ್ರಮರಿ ಶಿವಪ್ರಕಾಶ್ ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡಿದ್ದರು.