ಸಾರಾಂಶ
ಭಟ್ಕಳ: ಶ್ರೀಕ್ಷೇತ್ರ ದೇವಿಮನೆ ದುರ್ಗಾಪರಮೇಶ್ವರಿ ದೇವಸ್ಥಾನ ಬೇರೆ ದೇವಸ್ಥಾನದಂತೆ ಪ್ರತಿಷ್ಠಾಪನೆಯ ಕ್ಷೇತ್ರವಲ್ಲ. ಇದು ದೇವಿ ಸಹಜವಾಗಿ ಉದ್ಭವಿಸಿದ ಕ್ಷೇತ್ರವಾಗಿದೆ. ಹೀಗಾಗಿ ಈ ಕ್ಷೇತ್ರ ತುಂಬಾ ಶಕ್ತಿ ಕ್ಷೇತ್ರವಾಗಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದರು,
ಬುಧವಾರ ಮಧ್ಯಾಹ್ನ ಶ್ರೀಕ್ಷೇತ್ರ ದೇವಿಮನೆಯಲ್ಲಿ ಶ್ರೀರಾಮ ಪೂಜೆ, ದೇವಿಯ ದರ್ಶನದ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಕಿತ್ರೆ ದೇವಿಮನೆ ದೇವಸ್ಥಾನ ತನ್ನದೇ ಆದ ವಿಶೇಷತೆ ಹೊಂದಿರುವ ದೇವಸ್ಥಾನವಾಗಿದೆ. ಇದೊಂದು ಉದ್ಭವ ಕ್ಷೇತ್ರವಾದ್ದರಿಂದ ಇಲ್ಲಿನ ಪ್ರಭಾವ ಹೆಚ್ಚು ಎಂದರು.ವರ್ಷದಿಂದ ವರ್ಷಕ್ಕೆ ದೇವಸ್ಥಾನ ಅಭಿವೃದ್ಧಿ ಹೊಂದುತ್ತಿದ್ದು, ಇದರ ಕೀರ್ತಿಯೂ ಹೆಚ್ಚುತ್ತಿದೆ. ಕಿತ್ರೆ ದೇವಿಮನೆಯಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ದೇವಿ, ಗುರು, ಶಿಷ್ಯರು ಹೀಗೆ ತ್ರಿವೇಣಿ ಸಂಗಮವಾಗಿದೆ. ವರ್ಷಂಪ್ರತಿ ನಡೆಯುವ ವಾರ್ಷಿಕೋತ್ಸವದಿಂದ ಗುರು- ಶಿಷ್ಯರ ಸಂಬಂಧ ಬಹಳಷ್ಟು ಗಟ್ಟಿಯಾಗಿದೆ. ವಾರ್ಷಿಕೋತ್ಸವದ ಸಂದರ್ಭದಲ್ಲಿ ಎಲ್ಲಿದ್ದರೂ ಕಿತ್ರೆ ದೇವಿಮನೆಗೆ ಆಗಮಿಸಬೇಕೆಂಬ ಇಚ್ಛೆ ಉಂಟಾಗುತ್ತಿದೆ.
ದೇವಿಮನೆಯ ಭಕ್ತರಲ್ಲೂ ಸಮರ್ಪಣೆಯ ಭಾವನೆ ಹೆಚ್ಚಾಗಬೇಕು. ಹೊಸ ಕಮಿಟಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಇವರಿಗೆ ಎಲ್ಲರೂ ಸಹಕಾರ ಮಾಡಬೇಕು. ದೇವಸ್ಥಾನದ ಮತ್ತಷ್ಟು ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಿ ತಮ್ಮಿಂದಾದ ಕೈಂಕರ್ಯ ಮಾಡುವಂತಾಗಬೇಕು. ದೇವಸ್ಥಾನದ ಪ್ರತಿನಿಧಿಗಳು ಭಕ್ತರ ಮನೆಗೆ ಬರುವುದಕ್ಕಿಂತ ಭಕ್ತರೇ ದೇವಸ್ಥಾನಕ್ಕೆ ಆಗಮಿಸಿ ಹೆಚ್ಚಿನ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದ ಅವರು ಸಮಾಜದಲ್ಲಿ ಸಂಘಟನೆ, ಒಗ್ಗಟ್ಟು ಮುಖ್ಯ. ದೇವಸ್ಥಾನದ ಅಭಿವೃದ್ಧಿಯೊಂದಿಗೆ ಸಮಾಜವೂ ಬೆಳೆಯಬೇಕು ಎಂದರು.ಶ್ರೀಗಳು ಭಕ್ತರಿಗೆ ಮಂತ್ರಾಕ್ಷತೆ ನೀಡಿ ಹರಸಿದರು. ಈ ಸಂದರ್ಭದಲ್ಲಿ ದೇವಿಮನೆ ಆಡಳಿತ ಸಮಿತಿಯ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರು, ಉಪಾಧ್ಯಕ್ಷ ಪರಮೇಶ್ವರ ಭಟ್ಟ, ಕಾರ್ಯದರ್ಶಿ ರಾಜೇಂದ್ರ ಹೆಬ್ಬಾರ, ದೇವಸ್ಥಾನದ ಮೊಕ್ತೇಸರ ಉಮೇಶ ಹೆಗಡೆ, ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ಶಿವಾನಂದ ಹೆಬ್ಬಾರ, ಪ್ರಮುಖರಾದ ಎಂ.ಎಂ. ಹೆಬ್ಬಾರ, ಗಣೇಶ ಹೆಬ್ಬಾರ, ರಾಜಶೇಖರ ಹೆಬ್ಬಾರ, ನಾರಾಯಣ ಹೆಬ್ಬಾರ ಬೆಣಂದೂರು, ಶಿವಾನಂದ ಹೆಬ್ಬಾರ, ಎಂ.ವಿ. ಭಟ್ಟ, ನಾರಾಯಣ ಹೆಬ್ಬಾರ, ಅನಂತ ಹೆಬ್ಬಾರ ಮುಂತಾದವರಿದ್ದರು. ಗೋಕರ್ಣದಲ್ಲಿ ಸಂಭ್ರಮದ ಸಣ್ಣ ರಥೋತ್ಸವ
ಗೋಕರ್ಣ: ರಥಸಪ್ತಮಿ ದಿನವಾದ ಮಂಗಳವಾರ ಸಂಜೆ ಇಲ್ಲಿನ ಮಹಾಬಲೇಶ್ವರ ಮಂದಿರದ ಸಣ್ಣ ರಥೋತ್ಸವ ಅದ್ಧೂರಿಯಾಗಿ ನಡೆಯಿತು.ಸಂಜೆ ದೇವರ ಉತ್ಸವ ರಥಬೀದಿಗೆ ಆಗಮಿಸಿತು. ದೇವರು ರಥವೇರಿದ ಬಳಿಕ ರಥ ಕಾಣಿಕೆ ಮತ್ತಿತರ ಕಾರ್ಯ ನೆರವೇರಿಸಿ ವೆಂಕಟ್ರಮಣ ದೇವಾಲಯದವರೆಗೆ ರಥ ಸಾಗಿ ಪುನಃ ಮರಳಿತು.ನೆರೆದ ಭಕ್ತರು ಹರ ಹರ ಮಹಾದೇವ ಜಯಘೋಷದೊಂದಿಗೆ ರಥವನ್ನು ಎಳೆದು ಸಂಭ್ರಮಿಸಿದರು. ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯರು, ವ್ಯವಸ್ಥಾಪಕರು, ಸಿಬ್ಬಂದಿ ಪಾಲ್ಗೊಂಡಿದ್ದರು.ಪ್ರತಿ ಅಮಾವಾಸ್ಯೆ ಹಾಗೂ ಹರಕೆ ವಿಶೇಷ ದಿನಗಳಲ್ಲಿ ನಡೆಯುವ ಈ ರಥೋತ್ಸವ, ರಥಸಪ್ತಮಿಯಂದು ರಾಜಮಾತೆ ಅಹಲ್ಯಾಬಾಯಿ ಹೊಳ್ಕರ ಹೆಸರಿನಲ್ಲಿ ರಥಬೀದಿಯಲ್ಲಿರುವ ಅಹಲ್ಯಾಬಾಯಿ ಹೊಳ್ಕರ ಛತ್ರದ ವತಿಯಿಂದ ಪ್ರತಿ ವರ್ಷ ನಡೆಯುವುದು ವಿಶೇಷ. ಅದರಂತೆ ಈ ವರ್ಷವೂ ನಡೆಯಿತು.