ಮಂಗಳೂರಿನ ತುಳು ಭವನದಲ್ಲಿ ಕರ್ನಾಟಕದ ತುಳು ಸಾಹಿತ್ಯ ಅಕಾಡೆಮಿ ಶನಿವಾರ ‘ತುಳು ಭಾಷೆಗೆ ಕಿಟೆಲ್‌ ಅವರ ಕೊಡುಗೆ’ ಬಗ್ಗೆ ಕಾರ್ಯಕ್ರಮ ಏರ್ಪಡಿಸಿತ್ತು.

ಮಂಗಳೂರು: ಕನ್ನಡದ ಮೊಟ್ಟ ಮೊದಲ ಶಬ್ದಕೋಶವನ್ನು ತಯಾರಿಸಿದ ಫರ್ಡಿನೆಂಡ್ ಕಿಟೆಲ್ ಅವರು ತುಳು ಭಾಷೆಗೆ ಅನನ್ಯವಾದ ಕೊಡುಗೆ ನೀಡಿದವರು. ಕಿಟ್ಟೆಲ್ ಅವರು ಮಂಗಳೂರಿನಲ್ಲಿ ಕಳೆದ ದಿನಗಳು ಅವರ ಬದುಕಿನ ಮಹತ್ವದ ವಿದ್ವತ್ ಪೂರ್ಣ ದಿನಗಳಾಗಿದ್ದವು ಎಂದು ಸಂಶೋಧಕ, ಹಾಗೂ ಸಾಕ್ಷ್ಯ ಚಿತ್ರ ನಿರ್ಮಾಪಕ ಪ್ರಶಾಂತ್ ಪಂಡಿತ್ ಅಭಿಪ್ರಾಯಪಟ್ಟರು.

ಅವರು ಮಂಗಳೂರಿನ ತುಳು ಭವನದಲ್ಲಿ ಕರ್ನಾಟಕದ ತುಳು ಸಾಹಿತ್ಯ ಅಕಾಡೆಮಿ ಶನಿವಾರ ಆಯೋಜಿಸಿದ ‘ತುಳು ಭಾಷೆಗೆ ಕಿಟೆಲ್‌ ಅವರ ಕೊಡುಗೆ’ ಬಗ್ಗೆ ಮಾತನಾಡಿದರು.ಕಿಟ್ಟೆಲ್ ಅವರು ರಚಿಸಿದ ಕನ್ನಡ ಇಂಗ್ಲಿಷ್ ಶಬ್ದಕೋಶದಲ್ಲಿ ಸಾವಿರಾರು ತುಳು ಶಬ್ದಗಳನ್ನು ಉಲ್ಲೇಖ ಮಾಡುತ್ತಾರೆ. ಕನ್ನಡ ಶಬ್ದಗಳಿಗೆ ತುಳುವಿನಲ್ಲಿರುವ ಅರ್ಥವನ್ನು ನೀಡುತ್ತಾರೆ. ಆ ಮೂಲಕ ಕನ್ನಡ ಶಬ್ದಕೋಶದ ಒಳಗಡೆ ತುಳುವಿನ ಅಸ್ಮಿತೆಯನ್ನು ತುಂಬುತ್ತಾರೆ ಎಂದು ಪ್ರಶಾಂತ್ ಪಂಡಿತ್ ಹೇಳಿದರು.ಜರ್ಮನಿಯ ಬಾಸೆಲ್‌ನಿಂದ ಧರ್ಮಪ್ರಚಾರಕ್ಕಾಗಿ ಬರುವ ಕಿಟೆಲ್ ಅವರು ಧರ್ಮ ಪ್ರಚಾರದ ಬಗ್ಗೆ ಆಸಕ್ತಿ ತೋರಿಸದೆ ತುಳು ಕನ್ನಡ ಭಾಷೆಯ ಅಧ್ಯಯನ ಮತ್ತು ಸಂಶೋಧನೆಯಲ್ಲಿ ಆಸಕ್ತಿ ತೋರಿಸುತ್ತಾರೆ. ಅ ಮೂಲಕ ತನ್ನ ಮಾತೃ ಸಂಸ್ಥೆಯವರ ವಿರೋಧವನ್ನು ಕೂಡ ಎದುರು ಹಾಕಿಕೊಳ್ಳುತ್ತಾರೆ. ತುಳುನಾಡಿನಲ್ಲಿ ನೆಲೆಸಿದ ಸಂದರ್ಭದಲ್ಲಿ ತನ್ನ ಪತ್ನಿ ಪೌಲಿನ್ ಅವರಿಗೆ ತುಳು ಭಾಷೆ ಕಲಿಸಿರುತ್ತಾರೆ. ಬಳಿಕ ತನ್ನ ಇಬ್ಬರು ಮಕ್ಕಳಿಗೂ ತುಳು ಭಾಷೆಯನ್ನು ಕಲಿಸಿರುತ್ತಾರೆ ಎಂಬ ಅಂಶವನ್ನು ಪ್ರಶಾಂತ್ ಪಂಡಿತ್ ಉಲ್ಲೇಖಿಸಿದರು.

ತುಳುನಾಡಿನಿಂದ ಕೊಡಗು ಪ್ರದೇಶಕ್ಕೆ ಭೂತಾರಾಧನೆ ಪ್ರಸರಣವಾಗಿರುವ ಬಗ್ಗೆ ಕಿಟೆಲ್ ಅವರು ವಿಶೇಷವಾಗಿ ಅಧ್ಯಯನ ನಡೆಸಿದ್ದರು ಎಂದು ಪ್ರಶಾಂತ್ ಪಂಡಿತ್ ಉಲ್ಲೇಖಿಸಿದರು.

ಉಪನ್ಯಾಸದ ಬಳಿಕ ಕಿಟೆಲ್ ಅವರ ಬದುಕಿನ ಕುರಿತ ಪ್ರಶಾಂತ್ ಪಂಡಿತ್ ಅವರು ನಿರ್ಮಿಸಿರುವ ‘ಅರಿವು ಮತ್ತು ಗುರುವು’ ಸಾಕ್ಷ್ಯ ಚಿತ್ರ ಪ್ರದರ್ಶನಗೊಂಡಿತು. ತುಳು ಸಂಶೋಧಕ ಬೆನೆಟ್ ಆಮ್ಮಣ್ಣ ಅವರು ಉಪನ್ಯಾಸದ ಬಗ್ಗೆ ಪ್ರತಿಕ್ರಿಯೆ ನೀಡಿದರು.ಈ ಸಂದರ್ಭ ಪ್ರಶಾಂತ್ ಪಂಡಿತ್ ಅವರನ್ನು ಗೌರವಿಸಲಾಯಿತು. ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಬಿ.ಶಿವರಾಮ ಶೆಟ್ಟಿ, ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಮಾನವಿಕ ವಿಭಾಗದ ಡೀನ್ ಡಾ.ಮಹಾಲಿಂಗ ಭಟ್ ಇದ್ದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ಸದಸ್ಯ ಬಾಬು ಕೊರಗ ಪಾಂಗಾಳ ನಿರೂಪಿಸಿ, ವಂದಿಸಿದರು.