ಕಿತ್ತೂರು ಇತಿಹಾಸ ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಬೇಕು

| Published : Oct 24 2024, 12:53 AM IST

ಕಿತ್ತೂರು ಇತಿಹಾಸ ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಕಿತ್ತೂರಿನ ಇತಿಹಾಸವನ್ನು ರಾಜ್ಯಕ್ಕೆ ಸೀಮಿತಗೊಳಿಸದೇ ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಬೇಕಿದೆ ಎಂದು ಲೋಕೋಪಯೋಗಿ ಸಚಿವ, ಜಿಲ್ಲಾ ಉಸ್ತುವಾರಿ ಸತೀಶ ಜಾರಕಿಹೊಳಿ ಹೇಳಿದರು.

ಸೋಮಶೇಖರ ಕುಪ್ಪಸಗೌಡ್ರ

ಕನ್ನಡಪ್ರಭ ವಾರ್ತೆ ಚ.ಕಿತ್ತೂರು

ಕಿತ್ತೂರಿನ ಇತಿಹಾಸವನ್ನು ರಾಜ್ಯಕ್ಕೆ ಸೀಮಿತಗೊಳಿಸದೇ ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಬೇಕಿದೆ ಎಂದು ಲೋಕೋಪಯೋಗಿ ಸಚಿವ, ಜಿಲ್ಲಾ ಉಸ್ತುವಾರಿ ಸತೀಶ ಜಾರಕಿಹೊಳಿ ಹೇಳಿದರು.

ಮೂರು ದಿನಗಳ ಕಾಲ ಬೆಳಗಾವಿ ಜಿಲ್ಲೆಯ ಚ.ಕಿತ್ತೂರಿನ ಕೋಟೆ ಆವರಣದಲ್ಲಿ ನಡೆಯುತ್ತಿರುವ ಕಿತ್ತೂರು ಉತ್ಸವ ಮತ್ತು ಚನ್ನಮ್ಮನ 200ನೇ ವರ್ಷದ ವಿಜಯೋತ್ಸವದ ಸಂಭ್ರಮಕ್ಕೆ ಅವರು ಬುಧವಾರ ಚಾಲನೆ ನೀಡಿ ಮಾತನಾಡಿದರು. ಕಿತ್ತೂರು ಉತ್ಸವದಲ್ಲಿ ಅನೇಕ‌ ಸಾಹಿತಿಗಳು, ಬುದ್ಧಿ ಜೀವಿಗಳು,‌ ಕಲಾವಿದರು ತಮ್ಮ ಪರಿಚಯವನ್ನು ನಾಡಿಗೆ ಮಾಡಿಕೊಳ್ಳುತ್ತಿದ್ದಾರೆ. ಕಿತ್ತೂರು ಇತಿಹಾಸಕ್ಕೆ ಸಂಬಂಧಪಟ್ಟಂತೆ ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪ‌ ಸೇರಿದಂತೆ‌ ಇನ್ನೂ ಅನೇಕ ಹೋರಾಟಗಾರರ ಇತಿಹಾಸವನ್ನು ಮರುಸೃಷ್ಟಿ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.ರಾಣಿ ಚನ್ನಮ್ಮನ ಆದರ್ಶಗಳನ್ನು ನಾವೆಲ್ಲ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಳೆದ ಸಾಲಿನಿಂದ ಲೋಕೋಪಯೋಗಿ ಇಲಾಖೆ ವತಿಯಿಂದ ಕಿತ್ತೂರು‌ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಲಾಗುತ್ತಿದೆ.‌‌ ಮುಂದೆಯೂ ಕಿತ್ತೂರು ಅಭಿವೃದ್ಧಿಗೆ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಹೆಣ್ಣುಮಕ್ಕಳು ಮನೆಯಿಂದ ಹೊರ ಬಾರದಂತಹ ಪರಿಸ್ಥಿತಿಯಲ್ಲಿ ಕೆಚ್ಛೆದೆಯಿಂದ ಹೋರಾಡಿದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಭಾರತೀಯ ಮಹಿಳೆಯರ ಪಾಲಿಗೆ ಇಂದಿಗೂ ಸ್ಫೂರ್ತಿಯಾಗಿದ್ದಾರೆ ಎಂದು ತಿಳಿಸಿದರು.ಸಂಸದ ವಿಶ್ವೇಶ್ವರ ಹೆಗಡೆಯವರ ಪ್ರಯತ್ನದಿಂದ ರಾಣಿ ಚನ್ನಮ್ಮನವರ ಅಂಚೆ ಚೀಟಿ ಬಿಡುಗಡೆ ಮಾಡಿದ್ದಕ್ಕೆ ರಾಜ್ಯ ಸರ್ಕಾರದ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸುತ್ತಿದ್ದು, ಪಂಚಮಸಾಲಿ ಮಠದ ಬಸವ ಜಯಮೃತ್ಯುಂಜಯ ಸ್ವಾಮಿಗಳು ದೆಹಲಿಯಲ್ಲಿ ಚನ್ನಮ್ಮನ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಅವರು ಕೂಡ ಅಂದು ಹಾಜರಿರುವರು ಎಂದರು.ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ವಿಜಯೋತ್ಸವದ ಉತ್ಸಾಹ ಕೇವಲ ಕಿತ್ತೂರಿಗೆ ಸೀಮಿತವಾಗದೆ, ಇಡೀ ವಿಶ್ವಕ್ಕೆ ಪ್ರೇರಣೆಯಾಗಿದೆ. ಕಿತ್ತೂರು ಉತ್ಸವ ಜನರ ಉತ್ಸವವಾಗಿದೆ. ಇದು ಪ್ರೇರಣಾ ಉತ್ಸವವಾಗಲಿ. ಬ್ರಿಟಿಷ್‌ ಅಧಿಕಾರಿ ಥ್ಯಾಕರೆಯನ್ನು ಬಲಿ ಪಡೆದು ವಿಜಯ ಪತಾಕೆ ಸಾರಿದ ವಿಜಯೋತ್ಸವದ 200ನೇ ವರ್ಷಾಚರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಬ್ರಿಟೀಷರ ವಿರುದ್ಧ ಕೆಚ್ಚೆದೆಯಿಂದ ಹೊರಾಡುವುದರ ಮೂಲಕ ಇಡೀ ದೇಶಕ್ಕೆ ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಇಟ್ಟ ಐತಿಹಾಸಿಕ ಸನ್ನಿವೇಶವಾಗಿದೆ. ಕಿತ್ತೂರು ಸ್ವಾಭಿಮಾನದ ‌ನಾಡಾಗಿದೆ. ಸ್ವತಂತ್ರ್ಯಗೊಂಡು 75 ವರ್ಷಗಳು ಕಳೆದಿವೆ. ಆದರೆ ದೇಶಕ್ಕೆ ಅಂಟಿರುವ ಗುಲಾಮಿತನದಿಂದ ಹೊರ ಬರಬೇಕಾಗಿದೆ ಎಂದು ಆಶಿಸಿದರು.ಶಾಸಕ ಬಾಬಾಸಾಹೇಬ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಿತ್ತೂರು ಗಂಡು ಮೆಟ್ಟಿನ ನಾಡು. ನಮ್ಮ‌ಲ್ಲಿ ಸ್ವಾಭಿಮಾನದ ರಕ್ತ ಹರಿಯುತ್ತದೆ. ಕಿತ್ತೂರು‌‌ ಕೋಟೆಯ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಈ‌ ಕಾರ್ಯವನ್ನು ಕೆಲವೇ ದಿನಗಳಲ್ಲಿ ಕೃತಿ ಮೂಲಕ‌ ಮಾಡಿ‌ ತೋರಿಸಲಾಗುವುದು ಎಂದು ಹೇಳಿದರು. ಕಿತ್ತೂರು ಚನ್ನಮ್ಮನ ಸಂಶೋಧನೆ‌ ಕೇಂದ್ರವನ್ನು‌ ಕಿತ್ತೂರಿಗೆ ಒದಗಿಸಲು ಕೋರಿಕೆ ಇಟ್ಟ ಅವರು, ವಿಜಯೋತ್ಸವದ 200ನೇ ವರ್ಷದ ಕಾರ್ಯಕ್ರಮದ‌ಲ್ಲಿ ಭಾಗವಹಿಸಿರುವುದು ನಮ್ಮೆಲ್ಲರ‌ ಭಾಗ್ಯವಾಗಿದೆ ಎಂದರು.ಚನ್ನಮ್ಮನ‌ ಕಿತ್ತೂರಿನ‌ ರಾಜಗುರು ಸಂಸ್ಥಾನ‌ ಮಠದ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ನಿಚ್ಚಣಕಿಯ ಶ್ರೀ ಗುರು‌ ಮಡಿವಾಳೇಶ್ವರ ಮಠದ ಪಂಚಾಕ್ಷರಿ‌ ಮಹಾಸ್ವಾಮಿಗಳು, ಬೈಲೂರು‌ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿಗಳು ಆಶೀರ್ವಚನ ನೀಡಿದರು.ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌‌ ಪ್ರಾಸ್ತಾವಿಕವಾಗಿ ಮಾತನಾಡಿ, ಬ್ರಿಟೀಷರ ವಿರುದ್ಧ ಹೋರಾಡಿ ರಾಣಿ‌ ಚನ್ನಮ್ಮನ ಸಾಹಸವನ್ನು ಸ್ಮರಿಸುವುದು ನಮ್ಮೆಲ್ಲರ‌ ಜವಾಬ್ದಾರಿಯಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ರಾಣಿ ಚನ್ನಮ್ಮ ಮುಂಚೂಣಿಯಲ್ಲಿದ್ದರು. ಕಿತ್ತೂರಿನ ಕೋಟೆಯಲ್ಲಿ ಸ್ವಾತಂತ್ರ್ಯ ಹೋರಾಟದ‌ ಕುರುಹುಗಳನ್ನು ನಾವು ಕಾಣಬಹುದಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಶಾಸಕ ರಾಜು(ಆಸೀಫ್) ಸೇಠ, ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಪಂ ಸಿಇಒ ರಾಹುಲ್ ಶಿಂಧೆ , ಚೀಫ್‌ ಪೋಸ್ಟ್ ಮಾಸ್ಟರ್ ಜನರಲ್ ಎಸ್.‌ರಾಜೇಂದ್ರ ಕುಮಾರ, ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆ ಜಂಟಿ ನಿರ್ದೆಶಕ ಕೆ.ಎಚ್.‌ಚನ್ನೂರ, ಉಪನಿರ್ದೆಶಕಿ ವಿದ್ಯಾವತಿ ಭಜಂತ್ರಿ, ಪ್ರವಾಸೋದ್ಯಮ‌ ಇಲಾಖೆ‌ ಉಪನಿರ್ದೇಶಕಿ ಸೌಮ್ಯ ಗುಳೇದ ಸೇರಿದಂತೆ ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು. ಬೈಲಹೊಂಗಲ್ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ ಸ್ವಾಗತಿಸಿದರು.ಸ್ಮರಣ ಸಂಚಿಕೆ ಬಿಡುಗಡೆ:

ಇದೇ ಸಂದರ್ಭದಲ್ಲಿ ಸಂತೋಷ ಹಾನಗಲ್ ಸಂಪಾದಕತ್ವದಲ್ಲಿ ರಚಿತ ದಿ ಪೋರ್ಟೆಸ್ ಆಫ್ ಪಿಯರಲೆಸ್ಸ್ ಡ್ರೀಮ್ಸ್‌ ಸ್ಮರಣ ಸಂಚಿಕೆಯನ್ನು ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷ ಮಹಾಂತೇಶ ಕೌಜಲಗಿ ಅವರು ಬಿಡುಗಡೆ ಮಾಡಿದರು.ವಿಜಯೋತ್ಸವದಲ್ಲಿ ಅಂಚೆಚೀಟಿ ಬಿಡುಗಡೆ

ಕಿತ್ತೂರು ‌ವಿಜಯೋತ್ಸವದ 200ನೇ ವರ್ಷಾಚರಣೆ ಅಂಗವಾಗಿ ಕೇಂದ್ರ ಸರ್ಕಾರವು ಸಿದ್ಧಗೊಳಿಸಿರುವ 200ನೇ ವರ್ಷದ ವಿಶೇಷ ಅಂಚೆಚೀಟಿಯನ್ನು ಇದೆ ವೇಳೆ ಲೋಕಾರ್ಪಣೆ ಮಾಡಲಾಯಿತು. ಕೇಂದ್ರ ಸರ್ಕಾರದ ಪರವಾಗಿ ಕೆನರಾ ಕ್ಷೇತ್ರದ ಸಂಸದ‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಾಶ್ವತ ಅಂಚೆ ಕಾರ್ಡ್ ಲೋಕಾರ್ಪಣೆಗೊಳಿಸಿದರು.ಕಿತ್ತೂರು ಇತಿಹಾಸ ಅಧ್ಯಯನ ಕೇಂದ್ರವನ್ನು ವಿಜಯಪುರದಿಂದ ಬೆಳಗಾವಿಗೆ ಸ್ಥಳಾಂತರಿಸಲಾಗುವುದು. ರಾಣಿ ಚನ್ನಮ್ಮ‌ ವಿವಿಯನ್ನು ಕಿತ್ತೂರು ರಾಣಿ ಚನ್ನಮ್ಮ ವಿವಿ ಎಂದು ನಾಮಕರಣ ಮಾಡಲು‌ ಕ್ರಮ‌ ಕೈಗೊಳ್ಳಲಾಗುತ್ತಿದೆ.

- ಸತೀಶ ಜಾರಕಿಹೊಳಿ,

ಲೋಕೋಪಯೋಗಿ ಸಚಿವ.ಸ್ವಾಭಿಮಾನಕ್ಕೆ ಇನ್ನೊಂದು ಹೆಸರೇ ಚನ್ನಮ್ಮ. ಇಂದಿನ ಪೀಳಿಗೆ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಮರೆಯುತ್ತಿದೆ. ಆದರೆ, ಅದಾಗಬಾರದು. ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ, ಮೊದಲಾದವರು ನಮಗೆ ಆದರ್ಶರಾಗಬೇಕು.

- ಲಕ್ಷ್ಮಿ ಹೆಬ್ಬಾಳಕರ್‌,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ.

ಗುಲಾಮಗಿರಿಗೆ ಬಗ್ಗಿ ನಡೆಯುವ ಮಣ್ಣು ಕಿತ್ತೂರಿನದ್ದಲ್ಲ. ಚನ್ನಮ್ಮಾಜಿಯ ಇತಿಹಾಸ ಸಂಶೋಧನೆಗೆ ಒಳಪಡಬೇಕಿದೆ. ಪ್ರವಾಸಿಗರನ್ನು ಸೆಳೆಯಲು ಕಿತ್ತೂರು ಮೊದಲು ಅಭಿವೃದ್ಧಿ ಹೊಂದಬೇಕಿದೆ. ಅಭಿವೃದ್ಧಿಗೆ ರಾಜ್ಯ ಸರ್ಕಾರ ಅನುದಾನ ನೀಡುತ್ತಿದೆ. ಇದಕ್ಕೆ ಕೇಂದ್ರವೂ ಕೈಜೋಡಿಸಿದಲ್ಲಿ ಕಿತ್ತೂರನ್ನು ಪ್ರವಾಸಿ ತಾಣವನ್ನಾಗಿಸುವ ಕನಸು ನನಸಾಗುತ್ತದೆ.

- ಬಾಬಾಸಾಹೇಬ ಪಾಟೀಲ, ಶಾಸಕರು.