ಸಾರಾಂಶ
ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ, ಅವರ ಕೆಚ್ಚೆದೆಯ ಧೈರ್ಯ ಮಹಿಳೆಯರಿಗೆ ಸ್ಫೂರ್ತಿಯಾಗಿದೆ ಎಂದು ತಹಸೀಲ್ದಾರ್ ಎಂ ಮಮತಾ ಹೇಳಿದರು. ದೇಶದಲ್ಲಿ ಪ್ರಸಕ್ತ ಸನ್ನಿವೇಶದಲ್ಲಿ ಮಹಿಳೆಯರು ತಾವು ಕಾರ್ಯನಿರ್ವಹಿಸುವ ಸ್ಥಳಗಳಲ್ಲಿ ದಬ್ಬಾಳಿಕೆ ಮತ್ತು ದೌರ್ಜನ್ಯಗಳು ನಡೆಯುತ್ತಿದ್ದರೂ ಎಲ್ಲವನ್ನು ಮೆಟ್ಟಿ ನಿಂತು ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಸಾಧನೆ ತೋರುತ್ತಿರುವುದು ಹೆಮ್ಮೆಯ ವಿಷಯ. ಸರ್ಕಾರಗಳು ಸ್ತ್ರೀ-ಪುರುಷರು ಸಮಾನರು ಎಂಬ ಕಾನೂನುಗಳನ್ನು ಜಾರಿಗೆ ತಂದು ವಿವಿಧ ಯೋಜನೆಗಳ ಮೂಲಕ ಮಹಿಳೆಯರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಜೀವನ ನಡೆಸಲು ಮುಂದಾಗಬೇಕು ಎಂದರು.
ಕನ್ನಡಪ್ರಭ ವಾರ್ತೆ ಬೇಲೂರು
ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ, ಅವರ ಕೆಚ್ಚೆದೆಯ ಧೈರ್ಯ ಮಹಿಳೆಯರಿಗೆ ಸ್ಫೂರ್ತಿಯಾಗಿದೆ ಎಂದು ತಹಸೀಲ್ದಾರ್ ಎಂ ಮಮತಾ ಹೇಳಿದರು.ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟನೆ ನಡೆಸಿ ಮಾತನಾಡಿದ ಅವರು, ವೀರತನ, ಧೈರ್ಯ, ಶೌರ್ಯ ಹಾಗೂ ಹೋರಾಟವನ್ನು ಮೈಗೂಡಿಸಿಕೊಂಡು ಪುರುಷ ಪ್ರಧಾನ ಸಮಾಜದಲ್ಲಿ ರಾಜ್ಯಭಾರ ಮಾಡಿದಂತಹ ಕೆಚ್ಚೆದೆಯ ಮಹಿಳೆ ಕಿತ್ತೂರು ಚೆನ್ನಮ್ಮ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಮಾ.ನಾ.ಮಂಜೇಗೌಡ ಮಾತನಾಡಿ,ದೇಶದಲ್ಲಿ ಪ್ರಸಕ್ತ ಸನ್ನಿವೇಶದಲ್ಲಿ ಮಹಿಳೆಯರು ತಾವು ಕಾರ್ಯನಿರ್ವಹಿಸುವ ಸ್ಥಳಗಳಲ್ಲಿ ದಬ್ಬಾಳಿಕೆ ಮತ್ತು ದೌರ್ಜನ್ಯಗಳು ನಡೆಯುತ್ತಿದ್ದರೂ ಎಲ್ಲವನ್ನು ಮೆಟ್ಟಿ ನಿಂತು ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಸಾಧನೆ ತೋರುತ್ತಿರುವುದು ಹೆಮ್ಮೆಯ ವಿಷಯ. ಸರ್ಕಾರಗಳು ಸ್ತ್ರೀ-ಪುರುಷರು ಸಮಾನರು ಎಂಬ ಕಾನೂನುಗಳನ್ನು ಜಾರಿಗೆ ತಂದು ವಿವಿಧ ಯೋಜನೆಗಳ ಮೂಲಕ ಮಹಿಳೆಯರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಜೀವನ ನಡೆಸಲು ಮುಂದಾಗಬೇಕು. ಇಂತಹ ಸಾಧನೆಗೆ ಕಿತ್ತೂರು ರಾಣಿ ಚೆನ್ನಮ್ಮ ಸಾಕ್ಷಿಯಾಗುತ್ತಾರೆ ಎಂದ ಅವರು, ಬ್ರಿಟೀಷರ ಸೈನ್ಯದ ವಿರುದ್ಧ ಪ್ರಥಮವಾಗಿ ಹೋರಾಟ ಮಾಡಿ ಜಯಗಳಿಸಿದ ಚೆನ್ನಮ್ಮಳ ವಿಜಯೋತ್ಸವವನ್ನೇ ಸರ್ಕಾರ ಜಯಂತಿಯಾಗಿ ಆಚರಿಸುತ್ತಿದೆ. ದಿಟ್ಟ ಹೋರಾಟಗಾರ್ತಿಯಾದ ಕಿತ್ತೂರು ರಾಣಿ ರಾಜ್ಯದ ಉಳಿಗಾಗಿ ವ್ಯವಸ್ಥಿತ ಸುಸಜ್ಜಿತ ಕೋಟೆಯನ್ನು ಹೊಂದಿ ಪತಿಯನ್ನು ಕಳೆದುಕೊಂಡರೂ ಎದೆಗುಂದದೆ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಹೋರಾಟ ಮಾಡಿದ ವೀರ ಮಹಿಳೆ ಎಂದು ತಿಳಿಸಿದರು.ಚೆನ್ನಮ್ಮಳಂತಹ ವೀರ ಮಹಿಳೆಯರಿಂದ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನಮಾನ ಮತ್ತು ಗೌರವ ದೊರಕಲು ಸಾಧ್ಯವಾಯಿತು. ಇಂತಹ ಗಣ್ಯ ಮಹನೀಯರ ಜಯಂತಿಗಳ ಆಚರಣೆಯಿಂದ ಅವರ ಇತಿಹಾಸ, ಮಹತ್ವಗಳನ್ನು ತಿಳಿಸಿದರೆ ಜನ ಸಾಮಾನ್ಯರ ಮನಸ್ಸಿನ ಮೇಲೆ ಪ್ರಭಾವ ಬೀರಿ ಉತ್ತಮ ಸಮಾಜ ನಿರ್ಮಾಣವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಹರೀಶ್, ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಬೇಲೂರು ತಾಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಹುಲ್ಲೇನಹಳ್ಳಿ ಬಸವರಾಜು, ಸೇರಿದಂತೆ ತಾಲೂಕು ಇಲಾಖೆವಾರು ಅಧಿಕಾರಿಗಳು ಹಾಜರಿದ್ದರು.