ಸಾರಾಂಶ
ಗದಗ: ಕಿತ್ತೂರು ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಕರಡು ಪ್ರತಿ ಸಿದ್ಧಪಡಿಸಿ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು. ಅವರು ಮುಂದಿನ ಸಾಲಿನ ಬಜೆಟ್‌ನಲ್ಲಿ ಕರಡು ಪ್ರತಿಯಲ್ಲಿನ ಯೋಜನೆಗಳಿಗೆ ಆದ್ಯತೆ ನೀಡಲಿದ್ದಾರೆ ಎಂದು ರಾಜ್ಯ ನೀತಿ ಮತ್ತು ಯೋಜನೆ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ತಿಳಿಸಿದರು.
ಬುಧವಾರ ಗ್ರಾಮೀಣಾಭಿವೃದ್ಧಿ ವಿವಿ ಸಭಾಂಗಣದಲ್ಲಿ ಸರ್ಕಾರದ ಮಹತ್ವದ ವಿಕೇಂದ್ರೀಕರಣ ಯೋಜನೆ ಅನುಷ್ಠಾನ ಭಾಗವಾಗಿ ಕಿತ್ತೂರು ಕರ್ನಾಟಕದ ಎಲ್ಲ ಜಿಲ್ಲೆಗಳ 2026- 27ನೇ ಸಾಲಿನ ಅಭಿವೃದ್ಧಿ ಯೋಜನೆಗಳ ಕರಡುಪ್ರತಿ ತಯಾರಿಕೆ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆ ಉದ್ಘಾಟಿಸಿ ಮಾತನಾಡಿದರು.ಮಾರ್ಚ್ ತಿಂಗಳಲ್ಲಿ ರಾಜ್ಯ ಬಜೆಟ್ ಮಂಡನೆಯಾಗುತ್ತದೆ. ಅದಕ್ಕೆ ಪೂರ್ವದಲ್ಲಿ ಡಿಸೆಂಬರ್ ಒಳಗಾಗಿ ಗ್ರಾಪಂ, ವಾರ್ಡ್ ಯೋಜನೆಗಳ ಕರಡುಪ್ರತಿಗಳಿಗೆ ಅನುಮೋದನೆ ಪಡೆಯಬೇಕು ಎಂದು ಸಿಎಂ ನಿರ್ದೇಶನ ನೀಡಿದ್ದಾರೆ. ಆದರೆ, ಇನ್ನೂವರೆಗೂ ಆದೇಶ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಹಿಂದೆ ಜಿಲ್ಲಾ ಯೋಜನಾ ಸಮಿತಿಯು ಅ. 10ರ ಒಳಗಾಗಿ ವಾರ್ಡ್‌ವಾರು, ತಾಪಂ, ಜಿಪಂನಲ್ಲಿ ಸಭೆ ನಡೆಸಿ ಯೋಜನೆಗಳ ಕರಡುಪ್ರತಿಗಳನ್ನು ವಿಕೇಂದ್ರೀಕರಣ ಸಮಿತಿಗೆ ಸಲ್ಲಿಕೆ ಮಾಡಬೇಕು ಎಂದು ಸಿಎಂ ನಿರ್ದೇಶನ ನೀಡಿದ್ದರು. ಕೇವಲ ಇನ್ನು ಎರಡು ದಿನ ಬಾಕಿ ಇರುವುದರಿಂದ ಚಮತ್ಕಾರ ಮಾಡಲು ಸಾಧ್ಯವಿಲ್ಲ. 15 ದಿನಗಳ ಒಳಗಾಗಿ ವಾರ್ಡ್‌ವಾರು, ತಾಪಂ, ಜಿಪಂಗಳಿಂದ ಅಭಿವೃದ್ಧಿ ಯೋಜನೆಗಳ ಕುರಿತು ಕರಡು ಪ್ರತಿ ಪಡೆದು ಸಭೆ ನಡೆಸಿ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಸಲ್ಲಿಸಬೇಕು ಎಂದರು.ಪ್ರದೇಶವಾರು ಗ್ರಾಮೀಣ ಭಾಗದ ಸಮಸ್ಯೆಗಳು ಬೇರೆ ಬೇರೆ ಆಗಿರುತ್ತವೆ. ಜಿಪಂ ಸಿಇಒಗಳು ಗ್ರಾಮೀಣ ಭಾಗದ ಅಭಿವೃದ್ಧಿ, ನೀರು ಸಂರಕ್ಷಣೆ, ಸಮುದಾಯದ ಅಭಿವೃದ್ಧಿಗೆ ಕನ್ನಡಿ ಆಗಿರುತ್ತಾರೆ. ಹಾಗಾಗಿ ಮುಂಬರುವ 15 ದಿನಗಳ ಒಳಗಾಗಿ ತಮ್ಮ ವ್ಯಾಪ್ತಿಯ ಶಾಸಕರು, ಸಚಿವರನ್ನು ಸಂಪರ್ಕಿಸಿ ಯೋಜನೆ ಕರಡುಪ್ರತಿಗಳನ್ನು ಸಿದ್ಧಪಡಿಸಬೇಕು.
ರಾಜ್ಯ ವಿಕೇಂದ್ರೀಕರಣ ಮತ್ತು ಯೋಜನೆ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಮಾತನಾಡಿ, ಮೊದಲು ಮಂತ್ರಿಗಳು ಹೇಳಿದಂತೆ ಸರ್ಕಾರ ನಡೆಯುತ್ತಿತ್ತು. ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಶಾಸಕರು ಹೇಳಿದಂತೆ ನಡೆಯುತ್ತಿತ್ತು. ಈಗ ಜನರಿಂದ ಸರ್ಕಾರ ನಡೆಯುವಂತೆ ಯೋಜನೆಗಳು ಸಿದ್ಧಗೊಳ್ಳಬೇಕು. ಜಿಪಂ ಸಿಇಒಗಳು ಬ್ರಿಟಿಷ್ ಅಧಿಕಾರಿಗಳಲ್ಲ. ಅಧಿಕಾರಿಗಳು ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಬೇಕು. ಕೇವಲ ಸರ್ಕ್ಯೂಲರ್ ಹೇಳಿದಂತೆ ಕೆಲಸ ಮಾಡುವುದಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಮಣದೀಪ ಚೌಧರಿ ಅವರು, ಪಂಚಾಯತ್ ರಾಜ್ ಇಲಾಖೆ ಕಾನೂನಿನ ಪ್ರಕಾರ ವಿಕೇಂದ್ರೀಕರಣದ ಪರಿಣಾಮಕಾರಿ ಅನುಷ್ಠಾನದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಡೆಸಿದ ಗ್ರಾಪಂ, ತಾಪಂ, ವಾರ್ಡ್ ಕುರಿತು ಸಭೆ ಕುರಿತು ಚರ್ಚಿಸಲಾಯಿತು. ವಿವಿ ಕುಲಪತಿ ಸುರೇಶ ನಾಡಗೌಡರ, ಬೆಳಗಾವಿ ಜಿಪಂ ಸಿಇಒ ರಾಹುಲ್ ಶಿಂದೆ, ಬಾಗಲಕೋಟೆ ಜಿಪಂ ಸಿಇಒ ಶಶಿಧರ ಕುರೇರ, ಹಾವೇರಿ ಜಿಪಂ ಸಿಇಒ ರುಚಿ ಬಿಂದಲ್, ಧಾರವಾಡ ಜಿಪಂ ಸಿಇಒ ಭುವನೇಶ ಪಾಟೀಲ, ವಿಜಯಪುರ ಜಿಪಂ ಸಿಇಒ ರಿಷಿ ಆನಂದ, ಉತ್ತರ ಕನ್ನಡ ಜಿಪಂ ಸಿಇಒ ದಿಲೀಪ್ ಶಶಿ, ಯೋಜನಾ ಇಲಾಖೆಯ ಜಂಟಿ ಕಾರ್ಯದರ್ಶಿ ಬಿ. ಜಾನಕಿರಾಂ, ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಇತರರು ಇದ್ದರು.