ಸಾರಾಂಶ
ಕೊಪ್ಪಳ: ದೇಶದ ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರನ್ನೇ ನಡುಗಿಸಿದ್ದರು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಗುರುವಾರ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಹಾಗೆ ನೋಡಿದರೆ ಕಿತ್ತೂರ ರಾಣಿ ಚೆನ್ನಮ್ಮ ಬ್ರಿಟಿಷರನ್ನು ಹಿಮ್ಮೆಟ್ಟಿಸಿದ್ದರು. ಆದರೆ, ಮೋಸದ ಆಟದಲ್ಲಿ ಅವರು ಸೋಲುಣ್ಣಬೇಕಾಯಿತು. ಇಂಥ ಅನೇಕ ಹೋರಾಟಗಾರರನ್ನು ನಾವು ಕಾಣಬಹುದಾಗಿದೆ. ಒನಕೆ ಓಬವ್ವ, ಬೆಳವಡಿ ಮಲ್ಲಮ್ಮ, ರಾಣಿ ಅಬ್ಬಕ್ಕ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರಂತಹ ವೀರನಾರಿಯರು ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿದರು. ಜತೆಗೆ ಅಕ್ಕಮಹಾದೇವಿ, ಜಿ.ಎಸ್. ಶಿವರುದ್ರಪ್ಪ, ಚೆನ್ನವೀರ ಕಣವಿ ಸೇರಿದಂತೆ ಅನೇಕ ಮಹನೀಯರು ನಮಗೆ ಮಾದರಿ ಹಾಗೂ ಅವರ ತತ್ವ ಸಿದ್ಧಾಂತಗಳಡಿ ನಾವು ಬದುಕೋಣ ಎಂದರು.
ಜಗತ್ತಿಗೆ ಅನ್ನ ನೀಡುವ ಕಾರ್ಯದಲ್ಲಿ ಪಂಚಮಸಾಲಿ ಸಮಾಜದ ಸಿಂಹಪಾಲು ಇದೆ. ಆದರೆ ಇನ್ನು ಸಮಾಜಕ್ಕೆ ಸೂಕ್ತ ಮನ್ನಣೆ ಸಿಗುತ್ತಿಲ್ಲ. 2ಎ ಮೀಸಲಾತಿಗಾಗಿ ಇಬ್ಬರು ಜಗದ್ಗುರುಗಳ ಸಾನ್ನಿಧ್ಯದಲ್ಲಿ ಸಮಾಜವು ಅನೇಕ ಹೋರಾಟ ಮಾಡುತ್ತಾ ಬಂದಿದೆ. ಕಳೆದ ಬಾರಿಯ ಬಸವರಾಜ ಬೊಮ್ಮಾಯಿ ಸರ್ಕಾರ ಮೀಸಲಾತಿ ನೀಡಲು ತೀರ್ಮಾನಿಸಿತ್ತು. ಆದರೆ ಅದು ವಿಳಂಬವಾಯಿತು. ಈಗ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು, ಆದಷ್ಟು ಬೇಗನೆ ಕೊಡುವಂತಾಗಬೇಕು ಎಂದರು.ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಮಾತನಾಡಿದರು. ಗವಿಸಿದ್ದೇಶ್ವರ ಕಾಲೇಜಿನ ಉಪನ್ಯಾಸಕ ಶರಣಬಸಪ್ಪ ಬಿಳಿಯೆಲೆ ಉಪನ್ಯಾಸ ನೀಡಿ, ಬ್ರಿಟಿಷರಿಗೆ ಸೋಲಿನ ರುಚಿ ತೋರಿಸಿದ ಧೀಮಂತ ಮಹಿಳೆ ವೀರರಾಣಿ ಕಿತ್ತೂರು ಚೆನ್ನಮ್ಮ ಎನ್ನುವುದು ಈ ಸಮಾಜದ ಹೆಮ್ಮೆಯಾಗಿದೆ. ಧೈರ್ಯಶಾಲಿಯಾಗಿದ್ದ ಚೆನ್ನಮ್ಮ ಉತ್ತಮ ಆಡಳಿತ ನೀಡುತ್ತಲೇ ವೈರಿಗಳ ಗುಂಡಿಗೆ ನಡುಗಿಸಿದ್ದರು. ಬ್ರಿಟಿಷರು ಆಕೆಯ ಹೋರಾಟ ಮತ್ತು ಎದೆಗಾರಿಕೆಯಿಂದ ಅಂಜಿ ಮೋಸದ ಆಟ ಆಡಿದರು ಎಂದು ಸ್ಮರಿಸಿದರು.
ವಿಪ ಸದಸ್ಯೆ ಹೇಮಲತಾ ನಾಯಕ್, ಮುಖಂಡ ವೀರಣ್ಣ ಹುಬ್ಬಳ್ಳಿ ಮಾತನಾಡಿದರು. ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.ಕಾರ್ಯಕ್ರಮಕ್ಕೂ ಮುನ್ನ ಕೊಪ್ಪಳ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ನಾನಾ ವಾದ್ಯ, ವೃಂದಗಳು ಸೇರಿದಂತೆ ಭವ್ಯ ಮೆರವಣಿಗೆ, ಕುಂಭ ಹೊತ್ತ ಮಹಿಳೆಯರ ಮೆರವಣಿಗೆ ಮಾಡಲಾಯಿತು.
ಸಮಾರಂಭದಲ್ಲಿ ಗ್ರೇಡ್-2 ತಹಸೀಲ್ದಾರ ಗವಿಸಿದ್ದಪ್ಪ, ಸಮುದಾಯದ ಜಿಲ್ಲಾಧ್ಯಕ್ಷ ಬಸವನಗೌಡ ತೊಂಡಿಹಾಳ, ಮಹಿಳಾ ಜಿಲ್ಲಾಧ್ಯಕ್ಷೆ ಸುಮಂಗಲಾ ಹಂಚಿನಾಳ, ತಾಲೂಕು ಅಧ್ಯಕ್ಷ ಕರಿಯಪ್ಪ ಮೇಟಿ, ತಾಲೂಕು ಮಹಿಳಾಧ್ಯಕ್ಷೆ ಸುಜಾತ, ಕಳಕನಗೌಡ, ಗವಿಸಿದ್ದಪ್ಪ ಚಿನ್ನೂರು, ನಿಂಗಮ್ಮ ಸಂಗಣ್ಣ ಕರಡಿ, ಲತಾ ಗವಿಸಿದ್ದಪ್ಪ ಚಿನ್ನೂರು ಸೇರಿದಂತೆ ಸಮುದಾಯದ ಹಿರಿಯರು, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.