ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ: 108 ವರ್ಷಗಳ ಇತಿಹಾಸ ಹೊಂದಿರುವ ಕೆಎಲ್‍ಇ ಸಂಸ್ಥೆಯು ದಾನಿಗಳಿಂದ ಬೆಳೆದು ನಿಂತಿದೆ. ಕೆಎಲ್‍ಇ ಸಂಸ್ಥೆಯ ಯಾವುದೇ ಇತಿಹಾಸ ಅರಿಯದೇ ಬಾಲಿಶವಾದ ಹೇಳಿಕೆಗಳನ್ನು ಕೊಡುವುದು ಉಚಿತವಾದುದಲ್ಲ ಎಂದು ಕೆಎಲ್‍ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಕಾಂಗ್ರೆಸ್ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಮಾತಿಗೆ ಪ್ರತ್ಯುತ್ತರ ನೀಡಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
108 ವರ್ಷಗಳ ಇತಿಹಾಸ ಹೊಂದಿರುವ ಕೆಎಲ್‍ಇ ಸಂಸ್ಥೆಯು ದಾನಿಗಳಿಂದ ಬೆಳೆದು ನಿಂತಿದೆ. ಕೆಎಲ್‍ಇ ಸಂಸ್ಥೆಯ ಯಾವುದೇ ಇತಿಹಾಸ ಅರಿಯದೇ ಬಾಲಿಶವಾದ ಹೇಳಿಕೆಗಳನ್ನು ಕೊಡುವುದು ಉಚಿತವಾದುದಲ್ಲ ಎಂದು ಕೆಎಲ್‍ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಕಾಂಗ್ರೆಸ್ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಮಾತಿಗೆ ಪ್ರತ್ಯುತ್ತರ ನೀಡಿದರು.ಕೆಎಲ್‍ಇ ವಿಶ್ವವಿದ್ಯಾಲಯದಲ್ಲಿ ಗುರುವಾರ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ ಪರ ಪ್ರಚಾರ ಸಭೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ ಕಾಂಗ್ರೆಸ್ ಸರ್ಕಾರ ಕೇವಲ ಒಂದು ರುಪಾಯಿಗೆ ಜಮೀನು ನೀಡಿದ ಫಲವೇ ಕೆಎಲ್‍ಇ ಆಸ್ಪತ್ರೆ ಹಾಗೂ ವಿಶ್ವವಿದ್ಯಾಲಯ ಬೆಳೆದಿದೆ ಎಂದು ತಪ್ಪು ಮಾಹಿತಿ ನೀಡಿರುವುದನ್ನು ತೀವ್ರವಾಗಿ ಖಂಡಿಸಿದ ಅವರು, ದಾನಿಗಳಿಂದ, ಮಹಾದಾನಿಗಳಿಂದ, ಸಿರಸಂಗಿ ಲಿಂಗರಾಜರು, ರಾಜಾಲಖಮಗೌಡರು, ಭೂಮರಡ್ಡಿ ಬಸಪ್ಪನವರಂಥ ತ್ಯಾಗವೀರರಿಂದ ಕೆಎಲ್‍ಇ ವಿಸ್ತಾರದಿಂದ ವಿಸ್ತಾರಕ್ಕೆ ಬೆಳೆದು ನಿಂತಿದೆ. ಇಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಪ್ರಶ್ನೆ ಉದ್ಭವಿಸಬಾರದು. ಕೆಎಲ್‍ಇ ಸಂಸ್ಥೆ ಸ್ವಂತದ ಹಣದಲ್ಲಿ ಪ್ರಾರ್ಪಟಿ ಖರೀದಿಸಿದೆ. ಆಯಾ ಕಾಲಘಟ್ಟದಲ್ಲಿದ್ದ ಪಕ್ಷಗಳಿಂದ ಸಹಾಯ ಸಹಕಾರ ಪಡೆದಿದೆ. ಆದರೆ, ಕೇವಲ ಕಾಂಗ್ರೆಸ್‍ನಿಂದ ಕೆಎಲ್‍ಇ ತನ್ನ ಆಸ್ಪತ್ರೆ ನಿರ್ಮಿಸಿದೆ, ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದೆ ಎಂಬರ್ಥದ ಹೇಳಿಕೆಗಳು ಇಂದಿನ ಪತ್ರಿಕೆಯಲ್ಲಿ ಪ್ರಕಟವಾಗಿರುವುದು ದುರದೃಷ್ಟಕರ ಎಂದು ಅಸಮಧಾನ ವ್ಯಕ್ತಪಡಿಸಿದರು.ಕೆಎಲ್‍ಇ ಬೆಳವಣಿಗೆಯ ಇತಿಹಾಸವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಕಾಂಗ್ರೆಸ್‌ನಿಂದ ಕೆಎಲ್‍ಇ ಬೆಳೆದಿದೆ ಎಂದು ಹೇಳಿರುವುದನ್ನು ನಾನು ಪ್ರತಿಭಟಿಸುತ್ತೇನೆ. ನಮ್ಮ ಕೆಎಲ್‍ಇ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೆ ಸೇರಿದವರು, ಬೆಂಬಲಿಸುವವರು ಇದ್ದಾರೆ. ಅದರರ್ಥ ನಾವು ಯಾವುದೇ ರಾಜಕೀಯ ಪಕ್ಷಕ್ಕೆ ಅಂಟಿಕೊಂಡಿಲ್ಲ. ವೈಯಕ್ತಿಕವಾಗಿ ಅವರ ನಿಲುವುಗಳನ್ನು ನೋಡಬೇಕು. ಶಿಕ್ಷಣ ಸಂಸ್ಥೆಯಲ್ಲಿ ನಾವು ರಾಜಕೀಯ ತರುವುದಿಲ್ಲ. ಅದರ ಬೆಳವಣಿಗೆಗಾಗಿ ಸರ್ವರ ಸಹಕಾರ ಪಡೆಯುತ್ತೇವೆ ಎಂದರು.ಕೋಟ್....
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಈ ನೆಲದ ಶಿಕ್ಷಣ ಸಂಸ್ಥೆಗಳ ನೈಜ ಇತಿಹಾಸ ಅರಿತುಕೊಂಡಂತೆ ಕಾಣುವುದಿಲ್ಲ. ಇತಿಹಾಸ ಅರಿಯದೆ ಯಾವುದೇ ರೀತಿಯ ಹೇಳಿಕೆಗಳನ್ನು ಕೊಡುವುದು ಸಮಂಜಸವೆನಿಸುವುದಿಲ್ಲ. ಕೆಎಲ್‍ಇ ಸಂಸ್ಥೆಯ ಇತಿಹಾಸ ತಿಳಿದುಕೊಳ್ಳದೇ ಮತಬೇಟೆಗಾಗಿ ಸುಳ್ಳು ಹೇಳಿಕೆಗಳನ್ನು ನೀಡಿ ಜನರ ಭಾವನೆಗಳೊಂದಿಗೆ ಆಟವಾಡುವುದು ಕಾಂಗ್ರೆಸ್‍ಗೆ ತರವಲ್ಲ. ಲಕ್ಷ್ಮೀ ಹೆಬ್ಬಾಳಕರ ತಮ್ಮ ಹೇಳಿಕೆ ಹಿಂಪಡೆದು ಬಹಿರಂಗವಾಗಿ ಕ್ಷಮೆಕೋರಬೇಕು.-ಡಾ.ಪ್ರಭಾಕರ ಕೋರೆ, ಕೆಎಲ್‍ಇ ಕಾರ್ಯಾಧ್ಯಕ್ಷರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))