ಕೆಎಲ್ಇ ಸಂಸ್ಥೆಯೇ ನನಗೆ ಸರ್ವಸ್ವ: ಪ್ರಭಾಕರ ಕೋರೆ

| Published : May 19 2024, 01:45 AM IST

ಸಾರಾಂಶ

ಒಬ್ಬನಿಂದ ಏನೂ ಆಗಲಾರದು. ನನಗೆ 40 ವರ್ಷಗಳ ಕಾಲ ತೆರೆದ ಮನಸಿನ ಸಹಕಾರ ನೀಡಿದ ನನ್ನ ಆಡಳಿತ ಮಂಡಳಿ ಸದಸ್ಯರ ಸಕಾರಾತ್ಮಕ ನಿಲುವುಗಳಿಂದ ನಾನು ಯಶಸ್ವಿಯಾದೆ: ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ

ಕನ್ನಡಪ್ರಭ ವಾರ್ತೆ ಬೆಳಗಾವಿ

ಕೆಎಲ್ಇ ಸಂಸ್ಥೆಯೇ ನನಗೆ ಸರ್ವಸ್ವ. ನಾನೊಬ್ಬನೇ ಕೆಎಲ್‌ಇ ಸಾಧನೆಗಳಿಗೆ ಕಾರಣನಾದೆ ಎಂಬ ಅಹಂ ನನಗಿಲ್ಲ. ಒಬ್ಬನಿಂದ ಏನೂ ಆಗಲಾರದು. ನನಗೆ 40 ವರ್ಷಗಳ ಕಾಲ ತೆರೆದ ಮನಸಿನ ಸಹಕಾರ ನೀಡಿದ ನನ್ನ ಆಡಳಿತ ಮಂಡಳಿ ಸದಸ್ಯರ ಸಕಾರಾತ್ಮಕ ನಿಲುವುಗಳಿಂದ ನಾನು ಯಶಸ್ವಿಯಾದೆ ಎಂದು ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ 40 ವರ್ಷಗಳನ್ನು ಪೂರೈಸಿದ ನಿಮಿತ್ತವಾಗಿ ಕೆಎಲ್ಇ ಆಡಳಿತ ಮಂಡಳಿಯು ಶನಿವಾರ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಅನೇಕ ಬಾರಿ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆಯಾಗಿ ಯಶಸ್ವಿಯಾದೆ. ನನ್ನ 40 ವರ್ಷಗಳ ಆಡಳಿತ ಹೂವಿನ ಹಾಸಿಗೆ ಆಗಿರಲಿಲ್ಲ. ಬದಲಾಗಿ ಮುಳ್ಳಿನ ಹಾಸಿಗೆಯಂತೆ ಕೂಡ ಅನುಭವ ಆಗಿದೆ. ಪ್ರಜಾಪ್ರಭುತ್ವದಲ್ಲಿ ವಿರೋಧ ಸಹಜ ಎಂದು ತಮ್ಮ ಅನುಭವ ಹಂಚಿಕೊಂಡರು.

ಕೆಎಲ್ಇ ಸಂಸ್ಥೆ ನನಗೆ ಏನೆಲ್ಲ ನೀಡಿದೆ, ಬೆಳೆಸಿದೆ. ಆದ್ದರಿಂದ ಸಮಾಜಕ್ಕಾಗಿ ನಾನು ಸಾಧ್ಯವಾದಷ್ಟು ಸೇವೆ ನೀಡಲು ಪ್ರಯತ್ನಿಸಿದ್ದೇನೆ. ಸಪ್ತರ್ಷಿಗಳ ನೆನಹೆ ನನಗೆ ಉದಯ. ಅವರ ಮರೆವೇ ನನಗೆ ಅಸ್ತಮಾನ. ಅಂತಹ ಕೆಎಲ್ಇ ಕಟ್ಟಿ ಬೆಳೆಸಿದ ಸಂಸ್ಥಾಪಕರನ್ನು ಶಿಕ್ಷಣ ಪರಿವಾರದವರನ್ನು ಮನಸಾರೆ ಸ್ಮರಿಸುತ್ತೇನೆ ಎಂದು ಹೇಳಿದರು.

ಒಂದು ಮಹಾಸಂಸ್ಥೆಯ ಕಾರ್ಯಾಧ್ಯಕ್ಷನಾಗಿ 40 ವರ್ಷಗಳ ಕಾಲ ಸಂಸ್ಥೆಯನ್ನು ಮುನ್ನಡೆಸಿ ವಿಶ್ವಮಾನ್ಯ ಮಾಡಿದ್ದು ಪವಾಡವೇ ಸರಿ. ಜಗತ್ತಿನಲ್ಲಿರುವ ಅತ್ಯುತ್ತಮವಾಗಿರುವುದನ್ನು ನೋಡಿದಾಗ ಅದನ್ನು ನಮ್ಮ ಕೆಎಲ್ಇ ಸಂಸ್ಥೆಯಲ್ಲಿಯೂ ಅಳವಡಿಸಿಕೊಳ್ಳುತ್ತಾ ಹೋದೆ ಎಂದ ಅವರು, ದಾನಿಗಳ ಉದಾರ ಕೊಡುಗೆಯಿಂದಲೇ ನಮ್ಮ ಸಂಸ್ಥೆಯನ್ನು 38 ರಿಂದ 310ಕ್ಕೆ ವಿಸ್ತರಿಸಲಾಗಿದೆ. ಇದು ಇತಿಹಾಸ ಎಂದು ಹೇಳಿದರು.

2 ತಿಂಗಳಲ್ಲಿ ಕ್ಯಾನ್ಸರ್‌ ಆಸ್ಪತ್ರೆ ಆರಂಭ: ಬೆಳಗಾವಿಯಲ್ಲಿ ಎರಡು ತಿಂಗಳಲ್ಲಿ 300 ಹಾಸಿಗೆ ಸೌಲಭ್ಯವುಳ್ಳ ಕ್ಯಾನ್ಸರ್‌ ಆಸ್ಪತ್ರೆ ಆರಂಭಿಸಲಾಗುವುದು. ಅಲ್ಲದೆ, ಹುಬ್ಬಳ್ಳಿಯಲ್ಲಿ 6 ತಿಂಗಳಲ್ಲಿ ಹೊಸ ಮೆಡಿಕಲ್‌ ಕಾಲೇಜು ಕಟ್ಟಡ ಪೂರ್ಣಗೊಳ್ಳಲಿದ್ದು, 1000 ಹಾಸಿಗೆ ಆಸ್ಪತ್ರೆ ಹಾಗೂ ಮೆಡಿಕಲ್‌ ಕಾಲೇಜು ಆರಂಭವಾಗಲಿದೆ. ಸಂಸ್ಥೆಯು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿದೆ ಎಂದು ಹೇಳಿದರು.

ಮಾಜಿ ಶಾಸಕ, ಬಿವಿವಿ ಸಂಘದ ಅಧ್ಯಕ್ಷ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಇಂದು ಕೆಎಲ್‌ಇ ಏಷ್ಯಾದ ಬಹುದೊಡ್ಡ ಭಾರತೀಯ ಶಿಕ್ಷಣ ಸಂಸ್ಥೆಯಾಗಿ ಬೆಳೆದಿರುವುದು ಹೆಮ್ಮೆ ಮತ್ತು ಅಭಿಮಾನದ ವಿಷಯ. ಭಾರತದ ಶೈಕ್ಷಣಿಕ ಸಾಮಾಜಿಕ ಚರಿತ್ರೆಯಲ್ಲಿ ಶಿಕ್ಷಣದ ಮೂಲಕ ಹೊಸ ಭಾಷ್ಯ ಬರೆದವರು ಡಾ.ಪ್ರಭಾಕರ ಕೋರೆ ಅವರು. ಸಂಸ್ಥೆಯ ಶೈಕ್ಷಣಿಕ, ಸಾಮಾಜಿಕ ಮತ್ತು ಆರೋಗ್ಯ ಸೇವೆಗಳ ಮೂಲಕ ವಿಶ್ವಮಾನ್ಯ ಸಂಸ್ಥೆಯನ್ನಾಗಿ ಬೆಳೆಸಿದ್ದಾರೆ. ಸತ್ಯಸಂಕಲ್ಪ ಬಲದಿಂದ ಕೆಲಸ ಮಾಡಿ ಮುಟ್ಟಿದ್ದೆಲ್ಲ ಒಳ್ಳೆಯದನ್ನು ನೀಡುವ ಸ್ಪರ್ಶಮಣಿ ಶಕ್ತಿಯ ವ್ಯಕ್ತಿತ್ವದವರು ಎಂದು ಬಣ್ಣಿಸಿದರು.

ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಮ ಗುರುಬಸವರಾಜ ಮಾತನಾಡಿ, ಈಗಾಗಲೇ ನಾವು 58 ಅಂಗ ಸಂಸ್ಥೆಗಳನ್ನು ಹೊಂದಿದ್ದೇವೆ. ನಾವು ಕೆಎಲ್‌ಇ ಸಂಸ್ಥೆಯನ್ನು ಮಾದರಿಯನ್ನಾಗಿಟ್ಟುಕೊಂಡು ಇನ್ನೂ ಹೆಚ್ಚಿನ ಸಂಸ್ಥೆಗಳನ್ನು ಹುಟ್ಟುಹಾಕಿ ಗುಣಾತ್ಮಕ ಶಿಕ್ಷಣ ನೀಡಲು ಸಕಲ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.

ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶಶೀಲ್ ನಮೋಶಿ ಮಾತನಾಡಿ, ಒಂದೇ ಬಾರಿಗೆ ಹೈದರಾಬಾದ ಶಿಕ್ಷಣ ಸಂಸ್ಥೆ, ಕೆಎಲ್‌ಇ ಮತ್ತು ಶಾಮನೂರ ಶಿವಶಂಕರಪ್ಪ ಅವರ ವೈದ್ಯಕೀಯ ಮಹಾವಿದ್ಯಾಲಯಗಳನ್ನು ಸ್ಥಾಪಿಸಲು ಎಸ್‌.ನಿಜಲಿಂಗಪ್ಪ ಅವರು ಅನುಮತಿ ನೀಡಿದರು. ಕೆಎಲ್‌ಇ ಸಂಸ್ಥೆ ಸಾಕಷ್ಟು ಬೆಳೆದಿದೆ. ನಾವು ಹಿಂದೆ ಉಳಿದಿದ್ದೇವೆ. ನಾವು ಕೂಡ ಇದೇ ರೀತಿ ಬೆಳೆಸಲು ಸಹಾಯ ಸಹಕಾರ ನೀಡಬೇಕು ಎಂದು ಕೋರಿದರು.

ಕೆಎಲ್ಇ ಸಂಸ್ಥೆಯ ನಿರ್ದೇಶಕರಾದ ಶಂಕರಣ್ಣ ಮುನವಳ್ಳಿ, ಮಹಾಂತೇಶ ಕವಟಗಿಮಠ, ಕೆಎಲ್‌ಇ ಯುಎಸ್‌ಎಂ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ, ಬಿವಿಬಿ ಉಪಕುಲಪತಿ ಡಾ.ಅಶೋಕ ಶೆಟ್ಟರ ಅಭಿನಂದನಾ ನುಡಿಗಳಾಡಿದರು.

ಇದೇ ಸಂದರ್ಭದಲ್ಲಿ ಕೆಎಲ್ಇ ಆಡಳಿತ ಮಂಡಳಿಯ ಸದಸ್ಯರು ಡಾ.ಪ್ರಭಾಕರ ಕೋರೆ ಹಾಗೂ ಆಶಾ ಕೋರೆಯವರನ್ನು ಸತ್ಕರಿಸಿದರು. ಡಾ.ಪ್ರಭಾಕರ ಕೋರೆಯವರ 40 ವರ್ಷಗಳ ಪಯಣವನ್ನು ಹೊತ್ತ ‘ರತ್ನರಾಜ’ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು.

ಡಾ.ವಿ.ಎಸ್.ಸಾಧುನವರ, ಜಯಾನಂದ ಮುನವಳ್ಳಿ, ವೈ.ಎಸ್.ಪಾಟೀಲ, ಶಂಕರಣ್ಣ ಮುನವಳ್ಳಿ, ಅನಿಲ ಪಟ್ಟೇದ, ಬಾಬಣ್ಣ ಮೆಟಗುಡ್, ಪ್ರವೀಣ ಬಾಗೇವಾಡಿ, ಅಮಿತ ಕೋರೆ, ಎಂ.ಸಿ.ಕೊಳ್ಳಿ ಉಪಸ್ಥಿತರಿದ್ದರು. ಕೆಎಲ್ಇ ಸಂಸ್ಥೆ ಅಧ್ಯಕ್ಷರಾದ ಮಹಾಂತೇಶ ಕೌಜಲಗಿ ಸ್ವಾಗತಿಸಿದರು. ಡಾ.ಮಹೇಶ ಗುರನಗೌಡರ ನಿರೂಪಿಸಿದರು. ಕೆಎಲ್ಇ ಆಡಳಿತ ಮಂಡಳಿಯ ಸದಸ್ಯರಾದ ಡಾ.ವಿ.ಎಸ್‌.ಸಾಧುನವರ ವಂದಿಸಿದರು.