ಕೆಎಲ್‌ಇ ಸಂಸ್ಥೆಯಿಂದ ಕೃಷಿ ಕಾಲೇಜು ಆರಂಭ

| Published : Aug 26 2025, 02:00 AM IST

ಸಾರಾಂಶ

ಕೆಎಲ್ಇ ಸಂಸ್ಥೆಯು ನೂತನವಾಗಿ ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ಕೃಷಿ ಬಿಎಸ್ಸಿ ಮಹಾವಿದ್ಯಾಲಯ ಪ್ರಾರಂಭ

ಕನ್ನಡಪ್ರಭ ವಾರ್ತೆ ಬೆಳಗಾವಿ

ಕೆಎಲ್ಇ ಸಂಸ್ಥೆಯು ನೂತನವಾಗಿ ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ಕೃಷಿ ಬಿಎಸ್ಸಿ ಮಹಾವಿದ್ಯಾಲಯ ಪ್ರಾರಂಭಿಸುತ್ತಿದೆ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯರಗಟ್ಟಿ ತಾಲೂಕಿನ ತೆನಿಕೊಳ್ಳ ಗ್ರಾಮದ ಬಳಿ ಸುಮಾರು 60 ಎಕರೆ ನೀರಾವರಿ ಜಮೀನು ಖರೀದಿಸಲಾಗಿದೆ. ಕಾಲೇಜು ಕಟ್ಟಡ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ವಸತಿ ನಿಲಯಗಳ ಕಟ್ಟಡಗಳು ಸಿದ್ಧಗೊಂಡಿವೆ. ಈ ಮೂಲಕ ನನ್ನ ಬಹುದಿನಗಳ ಕನಸು ಈಡೇರಿದಂತಾಗಿದೆ ಎಂದು ಹೇಳಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಸಂಯೋಜನೆ ಹೊಂದಿದ ಮೊದಲ ಸಂಸ್ಥೆ ಇದಾಗಿದೆ. ಈ ಸಂಬಂಧ ಈಗಾಗಲೇ ಕೆಎಲ್‌ಇ ಸಂಸ್ಥೆ ಮತ್ತು ಕೃಷಿ ವಿಶ್ವವಿದ್ಯಾಲಯ ಒಡಂಬಡಿಕೆ ಮಾಡಿಕೊಂಡಿವೆ. ರಾಜ್ಯ ಸರ್ಕಾರ ಒಟ್ಟು 120 ವಿದ್ಯಾರ್ಥಿಗಳ ಪ್ರವೇಶಾತಿಗೆ ಅನುಮತಿ ನೀಡಿದೆ. ಇದರಲ್ಲಿ ಶೇ.60ರಷ್ಟು ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಹಾಗೂ ಶೇ.40ರಷ್ಟು ವಿದ್ಯಾರ್ಥಿಗಳನ್ನು ಕೆಎಲ್‌ಇ ಸಂಸ್ಥೆಯಿಂದ ನಿಯಮಾನುಸಾರ ಪ್ರವೇಶ ನೀಡಲಾಗುವುದು ಎಂದು ಹೇಳಿದರು.

ಪ್ರವೇಶಾತಿಯಲ್ಲಿ ಶೇ.50ರಷ್ಟು ಸೀಟುಗಳನ್ನು ರೈತರ ಮಕ್ಕಳಿಗೆ ಆದ್ಯತೆ ನೀಡಲಾಗುವುದು. ಪ್ರವೇಶಾತಿ ಕೆಸಿಇಟಿ ನಿಯಮಾನುಸಾರ ರೋಸ್ಟರ್‌ ಪಾಲಿಸಿ ಮಾಡಿಕೊಳ್ಳಲಾಗುವುದು. ಈ ಪದವಿ ಕಾರ್ಯಕ್ರಮ 8 ಸೆಮಿಸ್ಟರ್‌ ಇಲ್ಲವೇ 4 ವರ್ಷಗಳ ಅವಧಿಯದ್ದಾಗಿದೆ. ತೋಟಗಾರಿಕೆ, ಬೀಜ ವಿಜ್ಞಾನ ಹಾಗೂ ತಂತ್ರಜ್ಞಾನ, ಸೂಕ್ಷ್ಮಜೀವಿ ಶಾಸ್ತ್ರ, ಮಶ್ರೂಮ್‌ ಉತ್ಪಾದನಾ, ಎರೆಹುಳು ಗೊಬ್ಬರ ಉತ್ಪಾದನೆ, ಜೈವಿಕ ಪರಿಕರಗಳ ಕಾರ್ಯಕ್ರಮ ಮತ್ತಿತರ ಕೌಶಲ್ಯ ಹೊಂದಿದೆ. ಬೋಧನಾ ಕ್ರಮವು ಥಿಯರಿ ಮತ್ತು ಪ್ರಾಯೋಗಿಕ ಶಿಕ್ಷಣ ಕ್ರಮ ಹೊಂದಿದೆ. ಆಟ, ಪಾಠದ ಜೊತೆಗೆ ಎನ್‌ಸಿಸಿ, ಎನ್‌ಎಸ್‌ಎಸ್‌ ಕ್ರಮ ಅಳವಡಿಸಿ ಬೋಧನಾ ಕ್ರಮ ರಚಿಸಲಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಯಶಸ್ವಿ ರೈತರು, ಕೃಷಿ ಉದ್ಯಮಿಗಳು ಇವರ ಕ್ಷೇತ್ರಗಳಿಗೆ ಭೇಟಿ ನೀಡಿ ಮಾಹಿತಿ ವಿನಿಮಯ ಮಾಡಿಕೊಳ್ಳುವರು. ಹೈನುಗಾರಿಕೆ, ಕುಕ್ಕುಟ ಸಾಗಾಣಿಕೆ, ಮೌಲ್ಯವರ್ಧನೆ ಈ ವಿಷಯಗಳಲ್ಲಿ ಹಿಂಪೋಷಣೆ ಹಾಗೂ ತಾಂತ್ರಿಕ ಬೆಂಬಲ ಪಡೆಯಲಿದ್ದಾರೆ. ಗ್ರಾಮೀಣ ಕೃಷಿ ಕಾರ್ಯಾನುಭಾವ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಲಿದೆ. ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ನೇಮಕ ಪ್ರಕ್ರಿಯೆ ಚಾಲನೆಯಲ್ಲಿದೆ. ಆಂತರಿಕ ಮೌಲ್ಯ ಮಾಪನ ಪರೀಕ್ಷೆಗಳನ್ನು ಕಾಲೇಜಿನಲ್ಲಿ ಹಾಗೂ ಅಂತಿಮ ಪರೀಕ್ಷೆ ನಡೆಸಲು ಕೃಷಿ ವಿಶ್ವವಿದ್ಯಾಲಯ ತಜ್ಞರು ಬರುವರು ಎಂದರು.

ಕೃಷಿ ಕಾಲೇಜು 32 ವಿಭಾಗಳನ್ನು ಹೊಂದಿದ್ದು, ಉತ್ತಮ ಪ್ರಯೋಗ ಕೊಠಡಿ ಹೊಂದಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ 4 ಬಸ್‌ಗಳನ್ನು ಒದಗಿಸಲಾಗುವುದು. ಪ್ರತಿ ಸೆಮಿಸ್ಟರ್‌ಗೆ ಸರ್ಕಾರ ₹60,500 ಶುಲ್ಕ ನಿಗದಿ ಮಾಡಿದೆ. ಟ್ರ್ಯಾಕ್ಟರ್‌ ಹಾಗೂ ಎಲ್ಲ ಉಪಕರಗಳು ಸೇರಿದಂತೆ ಲ್ಯಾಬೋರೇಟರಿ ಪರಿಕರ ಒದಗಿಸಲಾಗುವುದು. ಉತ್ತಮ ಅಧ್ಯಯನಕ್ಕಾಗಿ ಗ್ರಂಥಾಲಯ, ನಿಯತಕಾಲಿಕೆಗಳು, ವೈಜ್ಞಾನಿಕ ಪುಸ್ತಕಗಳಿವೆ. ಸದ್ಯಕ್ಕೆ ಕೆವಿಕೆ ಮತ್ತಿಕೊಪ್ಪದಲ್ಲಿ ಶೈಕ್ಷಣಿಕ ಕ್ಷೇತ್ರಗಳನ್ನು ಬೋಧನೆಗಾಗಿ ಬಳಸಿಕೊಳ್ಳಲಾಗುವುದು. ದೇಶದಲ್ಲಿ 72 ಕೃಷಿ ವಿಶ್ವವಿದ್ಯಾಲಯಗಳಿದ್ದು, ಅವರ ಬೋಧನಾ ಶಿಕ್ಷಣ ಕ್ರಮದಂತೆ 6ನೇ ಡೀನ್ಸ್‌ ಕಮೀಟಿ ಶಿಫಾರಸಿನಂತೆ ಬೋಧನಾ ಕ್ರಮ ಇರಲಿದೆಂದು ಡಾ.ಪ್ರಭಾಕರ ಕೋರೆ ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಬಿ.ಆರ್‌. ಪಾಟೀಲ ಮತ್ತು ಕಾಲೇಡು ಡೀನ್‌ ಡಾ.ಪಿ.ಎಸ್‌. ಹೂಗಾರ ಉಪಸ್ಥಿತರಿದ್ದರು.